ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ

ಬಾಗಲಕೋಟೆ: ಎಸ್‌ಸಿಪಿ, ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆಗೆ ಸರಿಯಾದ ಮಹಿತಿಯೊಂದಿಗೆ ಬರಬೇಕು ಎಂದು ಪದೇ ಪದೆ ಹೇಳುತ್ತಿದ್ದರೂ ಕೆಲ ಅಧಿಕಾರಿಗಳು ಹಾಗೆಯೇ ಬಂದು ಹೋಗುವ ರೂಢಿ ನಿಂತಿಲ್ಲ. ಇದರಿಂದ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ತೀವ್ರ ಬೇಸರ ಹೊರಹಾಕಿದರು.

ಜಿಲ್ಲೆಯಲ್ಲಿರುವ ಪಂಚಾಯಿತಿವಾರು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಪಟ್ಟಿ ಮಾಡಬೇಕು. ಅದರಲ್ಲಿ ಅಂಗವಿಕಲರ ಮಾಹಿತಿಯನ್ನು ಕ್ರೋಡೀಕರಿಸಿ ಮಾಹಿತಿ ಸಲ್ಲಿಸುವಂತೆ ಹಿಂದಿನ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಆದರೆ, ಶುಕ್ರವಾರ ನಡೆದ ಸಭೆಗೆ ಮಾಹಿತಿ ತರದೆ ಬಂದಿದ್ದ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ಹೊರಹಾಕಿದ ಜಿಲ್ಲಾಕಾರಿಗಳು ಶೀಘ್ರ ಮಾಹಿತಿ ನೀಡಲು ಸೂಚಿಸಿದರು.

ಹಿಂದುಳಿದ ಜನಾಂಗವನ್ನು ಆರ್ಥಿಕ, ಸಾಮಾಜಿಕವಾಗಿ ಮುಂದೆ ತರುವ ಕಾರ್ಯ ಮಾಡಬೇಕು. ನಿಮಗೆ ಒದಗಿಸಿದ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಬೇಕು. ಅನ್ಯಾಯ, ಅನೀತಿ, ತಾರತಮ್ಯ ಹಾಗೂ ಕಾನೂನು ಬಾಹಿರವಾಗಿ ಯಾವುದೇ ಕಾರ್ಯ ಮಾಡಬೇಡಿ. ವಿಶೇಷ ಹಾಗೂ ಗಿರಿಜನ ಅಭಿವೃದ್ಧಿಗೆ ಮೀಸಲಿರಿಸಲಾದ ಯೋಜನೆಗಳ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಅಸಮಾನತೆ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಶಾಲೆಯಿಂದ ಹೊರಗುಳಿದ 844 ಮಕ್ಕಳ ಪೈಕಿ 160 ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಚ್. ಗೋನಾಳ ಸಭೆಗೆ ತಿಳಿಸಿದರು. ಜಿಲ್ಲಾ ಮಟ್ಟದ ಪ್ರತಿಯೊಬ್ಬ ಅಧಿಕಾರಿಯೂ ತಿಂಗಳಿಗೆ ಶಾಲೆಯಿಂದ ಹೊರಗುಳಿದ ಒಂದು ಮಗುವನ್ನಾದರೂ ಮರಳಿ ಶಾಲೆಗೆ ಸೇರಿಸುವ ಕೆಲಸ ಮಾಡಬೇಕು. ಈ ಕಾರ್ಯದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು. ಎಲ್ಲ ಅಧಿಕಾರಿಗಳಿಗೆ ಶಾಲೆಬಿಟ್ಟ ಮಕ್ಕಳ ಪಟ್ಟಿಯನ್ನು ನೀಡಲು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.

ಬಾಗಲಕೋಟೆಯಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದ ಗರ್ಭಿಣಿ ಬಾಲಕಿಯನ್ನು ಮರಳಿ ಶಾಲೆಗೆ ಸೇರಿಸಿ ಮುಖ್ಯವಾಹಿನಿಗೆ ತರುವಲ್ಲಿ ಮನವೊಲಿಸಿದ ಕಾರ್ಯವನ್ನು ಜಿಲ್ಲಾಧಿಕಾರಿಗಳು ಶ್ಲಾಘಿಸಿದರು.

ಮಲಹೊರುವ ಪದ್ಧತಿ ನಿಷೇಧ
ದೇಶದಲ್ಲಿ ಮಲಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ ಸೆಪ್ಟಿಕ್ ಟ್ಯಾಂಕ್‌ಸ್ವಚ್ಛಗೊಳಿಸಲು ಯಂತ್ರಗಳನ್ನು ಬಳಕೆ ಮಾಡಬೇಕು. ಸಕ್ಕಿಂಗ್, ಜಟ್ಟಿಂಗ್ ಮಷೀನ್‌ನಿಂದ ಸ್ವಚ್ಛ ಮಾಡಲು 2 ರಿಂದ 3 ಸಾವಿರ ರೂ.ವರೆಗೆ ಬಾಡಿಗೆ ಪಡೆಯಲಾಗುತ್ತಿದೆ. ಸಾಂಕೇತಿಕವಾಗಿ ಬಾಡಿಗೆಯಲ್ಲಿ ಶೇ.25 ಕಡಿಮೆ ಮಾಡುವ ಕುರಿತು ಜಿಲ್ಲೆಯಲ್ಲಿರುವ 15 ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಲ್ಲಿಸಿದ ಪ್ರಸ್ತಾವನೆಗೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಅನುಮೋದಿಸಿದರು. ಈ ಕಾರ್ಯವನ್ನು ಲಾಭಕ್ಕಾಗಿ ಮಾಡದೆ ಸೇವೆಯ ರೂಪದಲ್ಲಿ ಮಾಡಲು ತಿಳಿಸಿದರು.

ಈ ಕುರಿತು ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಬೋರ್ಡ್ ಹಾಕಬೇಕು. ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಿ, ಸ್ವಚ್ಛತೆಗೆ ಹೆಚ್ಚು ಗಮನ ಹರಿಸಲು ಸೂಚಿಸಿದ ಜಿಲ್ಲಾಧಿಕಾರಿ, ಪೌರಕಾರ್ಮಿಕರಿಗೆ ಗ್ಲೌಸ್ ಮತ್ತು ಗಂಬೂಟ್ಸ್ ಹಾಗೂ ಸ್ವಚ್ಛತಾ ಪರಿಕರಣಗಳನ್ನು ಕಡ್ಡಾಯವಾಗಿ ಒದಗಿಸಲು ಸೂಚಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಿಲ್ಲಾ ಜಂಟಿ ನಿರ್ದೇಶಕ ರಾಜಶೇಖರ ವಿಜಾಪೂರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಭುರಾಜ ಹಿರೇಮಠ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜಯ್ಯ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ ಇತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *