ದೌರ್ಜನ್ಯ ಪ್ರಕರಣಗಳ ತಡೆಗೆ ಕಟ್ಟುನಿಟ್ಟಿನ ಕ್ರಮ

ಬಾಗಲಕೋಟೆ: ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುಬೇಕು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನದ ಕುರಿತು ಶನಿವಾರ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ದೌರ್ಜನ್ಯ ಪ್ರಕರಣಗಳ ತಡೆಗೆ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದೆ. ಕಾನೂನುಗಳ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯವರು ತಿಳಿದುಕೊಂಡಿರಬೇಕು ಎಂದು ಹೇಳಿದರು.

ದೌರ್ಜನ್ಯ ಪ್ರಕರಣಗಳು ನಡೆಯದಂತೆ ಹಾಗೂ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ದೌರ್ಜನ್ಯಕ್ಕೆ ಒಳಪಟ್ಟ ಮಹಿಳೆಯರಿಗೆ ತಕ್ಷಣ 25 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಬಳಿಕ ಚಿಕಿತ್ಸೆಯ ತೀವ್ರತೆ ಆಧಾರಿಸಿ ಗರಿಷ್ಠ 2 ಲಕ್ಷ ರೂ.ವರೆಗೆ ಪರಿಹಾರ ನೀಡಲಾಗುವುದು. ಈ ಯೋಜನೆಯಡಿ ಮುಧೋಳ, ಬಾಗಲಕೋಟೆ ಮತ್ತು ಹುನಗುಂದ ತಾಲೂಕಿನ ಮೂವರು ಸಂತ್ರಸ್ತರಿಗೆ ತಲಾ 1 ಲಕ್ಷ ರೂ.ಗಳಂತೆ 3 ಲಕ್ಷ ರೂ. ನೀಡಲಾಗಿದೆ. ಕಾನೂನು ಸೇವಾ ಪ್ರಾಧಿಕಾರದಿಂದಲೂ ದೌರ್ಜನ್ಯದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 5 ಲಕ್ಷ ರೂ.ದಿಂದ 10 ಲಕ್ಷ ರೂ.ವರೆಗೆ ಚಿಕಿತ್ಸೆ ವೆಚ್ಚ ಭರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

36 ಪ್ರಕರಣ ದಾಖಲು
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಪೊಲೀಸ್ ನೆರವು, ಸಮಾಲೋಚನೆ ಮುಂತಾದ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಗೆಳತಿ ವಿಶೇಷ ಚಿಕಿತ್ಸಾ ಘಟಕ ಸ್ಥಾಪಿಸಲಾಗಿದೆ. ಇಲ್ಲಿ ದಾಖಲಾದ ಪ್ರಕರಣಗಳ ಸಂತ್ರಸ್ತ ಮಕ್ಕಳು, ಮಹಿಳೆಯರಿಗೆ ಸೂಕ್ತ ಮತ್ತು ಅವಶ್ಯಕ ನೆರವು ನೀಡಲಾಗುತ್ತಿದೆ. ಈಗಾಗಲೇ ಈ ಘಟಕದಲ್ಲಿ 36 ವಿವಿಧ ಪ್ರಕರಣಗಳು ದಾಖಲಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಸಭೆಗೆ ಮಾಹಿತಿ ನೀಡಿದರು.

ಸಂರಕ್ಷಣಾಧಿಕಾರಿಗಳ ಹುದ್ದೆಗಳು ಖಾಲಿ
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯಡಿ ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳ ತುರ್ತು ಇತ್ಯರ್ಥಕ್ಕೆ ಸಂಬಂಧಿಸಿ ಆಯಾ ತಾಲೂಕು ಸಿಡಿಪಿಒಗಳು ಕ್ರಮ ಕೈಗೊಳ್ಳಬೇಕು. ಈ ಯೋಜನೆಯಡಿ ಬಾದಾಮಿಯಲ್ಲಿ ಮಾತ್ರ ಸಂರಕ್ಷಣಾಧಿಕಾರಿಗಳ ಹುದ್ದೆ ಮಂಜೂರಾಗಿದೆ. ಉಳಿದ ಕಡೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರಾಮಚಂದ್ರನ್, ಉಳಿದ ತಾಲೂಕುಗಳಲ್ಲಿ ಸಂರಕ್ಷಣಾಧಿಕಾರಿಗಳ ಹುದ್ದೆ ಮಂಜೂರಾತಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಈ ಯೋಜನೆಯಡಿ ದಾಖಲಾದ 316 ಪ್ರಕರಣಗಳ ಪೈಕಿ 55 ಪ್ರಕರಣ ಇತ್ಯರ್ಥಪಡಿಸಲಾಗಿದ್ದು, 261 ಬಾಕಿ ಉಳಿದಿವೆ. ಜಿಲ್ಲಾ ಮಟ್ಟದಲ್ಲಿ ವಿಧವಾ ಕೋಶ ತೆರೆಯಲಾಗಿದ್ದು, ವಿಧವೆಯರು ಇಲ್ಲಿ ನೋಂದಣಿ ಮಾಡಿಕೊಂಡಲ್ಲಿ ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ದುರ್ಗೇಶ ರುದ್ರಾಕ್ಷಿ, ಜಿಲ್ಲಾ ಆಸ್ಪತ್ರೆಯ ಶಸ ಚಿಕಿತ್ಸಕ ಡಾ.ಪಿ.ಎ. ಬಿರಾದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶ ಕೆ.ವೈ. ಉಕ್ಕಲಿ ಆಯಾ ತಾಲೂಕಿನ ಸಿಡಿಪಿಒಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *