ಬಾಗಲಕೋಟೆ: ಕರ್ತವ್ಯದಲ್ಲಿದ್ದಾಗ ಬೆಟ್ಟ ಏರುವಾಗ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ ವೀರ ಯೋಧನ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಸೇನಾ ಗೌರವದೊಂದಿಗೆ ಗುರುವಾರ ಸ್ವಗ್ರಾಮದಲ್ಲಿ ನೆರವೇರಿತು.
ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದ ವೀರ ಯೋಧ ಮಂಹಾಂತೇಶ ದಾಸಣ್ಣವರ ಜು.25 ರಂದು ಹುತ್ಮಾತ್ಮರಾಗಿದ್ದರು. ಗುರುವಾರ ಬೆಳಗ್ಗೆ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸಿತು. ಬೆನಕಟ್ಟಿ ಗ್ರಾಮ ಅಷ್ಟೆ ಅಲ್ಲದೆ, ಅಕಪಕ್ಕದ ಗ್ರಾಮಸ್ಥರು ಜಮಾಯಿಸಿದ್ದರು. ಯೋಧನ ಪತ್ನಿ ದ್ರಾಕ್ಷಾಯಿಣಿ, ಮಗಳು ಸಹನಾ, ಮಗ ಸಾಯಿ ಪ್ರಜ್ವಲ್ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಪತ್ನಿ, ಮಕ್ಕಳು ಗೋಳಾಡಿ ಅಳುವ ದೃಶ್ಯ ಎಲ್ಲರ ಮನ ಕಲುಕುವಂತಿತ್ತು. ಮಹಾಂತೇಶ ಸಾವಿನಿಂದ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಗುರುವಾರ ಬೆನಕಟ್ಟಿ ಗ್ರಾಮಕ್ಕೆ ಪಾರ್ಥಿವ ಶರೀರ ಬಂದಾಗ ಇಡೀ ಗ್ರಾಮ ಶೋಕಸಾಗರದಲ್ಲಿ ಮುಳುಗಿತ್ತು. ಅಗಲಿದ ಯೋಧನಿಗೆ ಗ್ರಾಮಸ್ಥರು ನೀಡಿದ ಅವರ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಯಿತು. ತೆರೆದ ವಾಹನದಲ್ಲಿ ಯೋಧನ ಶರೀರದ ಮೇಲೆ ತ್ರಿವರ್ಣ ಧ್ವಜ ಹಾಕಿ ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ಯೋಧನ ಪರ ಘೋಷಣೆ, ಹೂಮಳೆ, ಸೈನಿಕರು ಹಾಗೂ ದೇಶ ಪರ ಘೋಷಣೆ, ವಂದೇ ಮಾತರಂ, ಜೈ ಭಾರತ ಮಾತಾಕಿ ಘೋಷಣೆಗಳು ಪ್ರತಿಧ್ವನಿಸಿದವು.
ಅಂತ್ಯಸಂಸ್ಕಾರಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ಮಾಜಿ ಸಚಿವ ಎಚ್.ವೈ.ಮೇಟಿ, ಡಿಸಿ ಕೆ.ರಾಜೇಂದ್ರ ಸೇರಿ ಪ್ರಮುಖರು ಆಗಮಿಸಿ ಹೂಗುಚ್ಛ ಅರ್ಪಿಸಿ ಅಂತಿಮನ ನಮನ ಸಲ್ಲಿಸಿದರು. ನಂತರ ಸೈನಿಕರ ಮೂಲಕ ಮೂರು ಸುತ್ತಿನ ಗುಂಡು ಹಾರಿಸಿ, ಸಕಲ ಸರ್ಕಾರಿ ಸೇನಾ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಬೆನಕಟ್ಟಿ ಗ್ರಾಮದಲ್ಲಿ 50 ಕ್ಕೂ ಹೆಚ್ಚು ಜನರು ಸೇವೆ ಸಲ್ಲಿಸಿದ್ದು, ಸದ್ಯ 25 ಜನರು ಗಡಿಯಲ್ಲಿದ್ದಾರೆ. ಹುತಾತ್ಮರಾದವರಲ್ಲಿ ಮಹಾಂತೇಶ ಮೊದಲಿಗರಾಗಿದ್ದು, ಇಡೀ ಊರಿಗೆ ಊರೇ ದುಃಖದಲ್ಲಿ ಮುಳುಗಿತ್ತು.
22 ವರ್ಷಗಳಿಂದ ಸೇವೆ
ಮಹಾಂತೇಶ ದಾಸಣ್ಣವರ ಸೇನೆಯಲ್ಲಿ ಸೇರಿ 22 ವರ್ಷವಾಗಿತ್ತು. ಅವರು ಮೊದಲು ಬರೆದುಕೊಟ್ಟ ಸೇವಾ ಅವಧಿ ಮುಗಿದರೂ ಸೇನೆಯನ್ನು ಬಿಟ್ಟಿರಲಿಲ್ಲ. ಮತ್ತೆ ಹೆಚ್ಚಿನ ಅವಧಿಗೆ ದೇಶ ಸೇವೆಯನ್ನು ಮುಂದುವರಿಸಿದ್ದರು. ಇನ್ನೇನು ಕೆಲ ದಿನಗಳಲ್ಲಿ ನಾಯಕ್ ಸುಬೇದಾರ್ ಆಗಿ ಬಡ್ತಿ ಹೊಂದುವವರಿದ್ದರು. ಆದರೆ, ಜು.16 ರಂದು ಜಮ್ಮು ಕಾಶ್ಮೀರದ ಶ್ರೀನಗರ ಜಿಲ್ಲೆಯ ಕುಪ್ವಾಡಾ ಎಂಬಲ್ಲಿ ಕರ್ತವ್ಯದ ಮೇಲಿದ್ದಾಗ ಬೆಟ್ಟದ ಮೇಲಿಂದ ಕಾಲು ಜಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಸೇನಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಒಂಬತ್ತು ದಿನ ಆಸ್ಪತ್ರೆಯಲ್ಲಿದ್ದ ಮಹಾಂತೇಶ ದಾಸಣ್ಣವರ ಚಿಕಿತ್ಸೆ ಫಲಿಸದೆ ಜು.25 ರಂದು ಹುತಾತ್ಮರಾಗಿದ್ದರು.
ಪತಿ ಮಹಾಂತೇಶ ಯೋಧನಾಗಿದ್ದು ನನಗೆ ಹೆಮ್ಮೆಯಿದೆ. ನಿವೃತ್ತಿ ಅವಧಿ ಬಂದಾಗಲೂ ಸೇನೆಯಲ್ಲೆ ಸೇವೆ ಸಲ್ಲಿಸುತ್ತೇನೆ ಎಂದು ದೇಶಸೇವೆ ಮುಂದುವರಿಸಿದ್ದರು. ಮಕ್ಕಳನ್ನು ಸೇನೆಯಲ್ಲಿ ಸೇರಿಸಬೇಕೆಂದು ಕನಸು ಕಂಡಿದ್ದರು. ಆದರೆ, ಈಗ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಮಕ್ಕಳನ್ನು ಸೇನೆಗೆ ಸೇರಿಸುತ್ತೇನೆ.
– ದ್ರಾಕ್ಷಾಯಿಣಿ ದಾಸಣ್ಣವರ ಹುತಾತ್ಮ ಯೋಧನ ಪತ್ನಿ
ತಂದೆಯ ಬಗ್ಗೆ ಹೆಮ್ಮೆಯಿದೆ. ಅವರ ಇಚ್ಛೆಯಂತೆ ನಾವು ದೇಶ ಸೇವೆಯಲ್ಲಿ ಮುಂದುವರಿಯುತ್ತೇವೆ. ದೇಶ ಸೇವೆಯಲ್ಲಿ ತಂದೆ ಹುತಾತ್ಮರಾಗಿದ್ದಾರೆ.
– ಸಹನಾ ದಾಸಣ್ಣವರ
