ಮತದಾನ ಮಾಡಿ ಪ್ರಜಾಪ್ರಭುತ್ವ ಬಲಗೊಳಿಸಿ

ಬಾಗಲಕೋಟೆ: ಮತದಾನ ಮಾಡುವುದು ಪವಿತ್ರವಾದ ಕರ್ತವ್ಯವಾಗಿದ್ದು, ಪ್ರಜಾಪ್ರಭುತ್ವದ ಭದ್ರತೆಗೆ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಕಳೆದ ಚುನಾವಣೆಗಿಂತ ಈ ಬಾರಿ ನಡೆಯುವ ಚುನಾವಣೆ ಹಬ್ಬದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಾಲಾವಣೆಯಾಗಬೇಕು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಸಲಹೆ ನೀಡಿದರು.

ಜಿಲ್ಲಾ ಸ್ವೀಪ್ ಯೋಜನೆಯಡಿ ಮತದಾನ ಜಾಗೃತಿಗಾಗಿ ನವನಗರದ ಕಲಾಭವನದಲ್ಲಿ ಹಮ್ಮಿಕೊಂಡ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡ ಮಹಿಳಾ ಸಾಂಸ್ಕೃತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರುತ್ತಿದ್ದು, ಉತ್ತಮ ನಾಯಕನನ್ನು ಆಯ್ಕೆ ಮಾಡುವಲ್ಲಿ ಮಹಿಳಾ ಮತದಾರರ ಪಾತ್ರ ಮುಖ್ಯವಾಗಿದ್ದು, ಚುನಾವಣೆಯಲ್ಲಿ ಸಿಕ್ಕಿರುವ ಅವಕಾಶ ಸದುಪಯೋಗ ಪಡಿಸಿಕೊಂಡು ಕಡ್ಡಾಯವಾಗಿ ಮತ ಚಲಾಯಿಸಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.

ಮಾ.22 ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತಿದೆ. ನೀರನ್ನು ಮಿತವಾಗಿ ಬಳಕೆ ಮಾಡಬೇಕು. ಜಿಲ್ಲೆಯಲ್ಲಿ ಸತತವಾಗಿ ಮೂರು ವರ್ಷಗಳಿಂದ ಬರ ಅವರಿಸಿದ್ದು, ಅಮೂಲ್ಯವಾದ ಜಲವನ್ನು ಅವಶ್ಯಕತೆಗೆ ತಕ್ಕಂತೆ ಬಳಕೆ ಮಾಡಲು ತಿಳಿಸಿದರು. ಬಣ್ಣದಾಟದಲ್ಲಿಯೂ ಕೂಡ ನೀರನ್ನು ಮಿತವಾಗಿ ಬಳಸಿರಿ, ನೀರನ್ನು ಅನಾವಶ್ಯಕವಾಗಿ ಪೋಲಾಗುವಂತಹ ಕಾರ್ಯಕ್ರಮಗಳು ಬೇಡ ಎಂದು ತಿಳಿಸಿದರು.

ವಿಶ್ವ ಜಲ ದಿನಾಚರಣೆ ಕುರಿತು ಬೆಳಗಾವಿ ದಂತವೈದ್ಯೆ ಆರತಿ ಬಂಡಾರಿ ಉಪನ್ಯಾಸ ನೀಡಿ ನೀರಿನ ಮಹತ್ವ ತಿಳಿಸಿದರು.

ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳ ಅಣಕು ಮತದಾನ ಪ್ರದರ್ಶನ ನಡೆಸಲಾಯಿತು. ಜಿಪಂ ಉಪ ಕಾರ್ಯದರ್ಶಿ ದುರ್ಗೇಶ ರುದ್ರಾಕ್ಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧ್ದಿ ಇಲಾಖೆ ಪ್ರಭಾರಿ ಉಪನಿರ್ದೇಶಕ ಬಸವಣ್ಣವರ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಸವರಾಜ ಶಿರೂರ, ತಾಪಂ ಇಒ ಎನ್.ವೈ. ಬಸರಿಗಿಡದ ಇತರರು ಇದ್ದರು. ನಂತರ ಮಹಿಳೆಯರಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಮತದಾನ ಜಾಗೃತಿಗಾಗಿ ಕವಿಗೋಷ್ಠಿ
ಜಿಲ್ಲಾ ಸ್ವೀಪ್ ಯೋಜನೆಯಡಿ ಮತದಾನ ಜಾಗೃತಿಗಾಗಿ ನಡೆದ ಕವಿಗೋಷ್ಠಿಯನ್ನು ಜಾನಪದ ಕಲಾವಿದೆ ಶಿರೂರಿನ ಗೌರಮ್ಮ ಸಂಕೀನ ಉದ್ಘಾಟಿಸಿದರು, ಲಲಿತಾ ಹೊಸಪ್ಯಾಟಿ ಅಧ್ಯಕ್ಷತೆ ವಹಿಸಿದ್ದರು. ಕವಿಯತ್ರಿ ಸುಮಂಗಲಾ ಮೇಟಿ, ಗೀತಾ ದಾನಶೆಟ್ಟಿ, ಮುರ್ತುಜಾಬೇಗಂ ಕೊಡಗಲಿ, ಪ್ರಿಯಾ ಕಟ್ಟಿ, ರೇಖಾ ಗೋಗಿ, ಅನುಪಮಾನ ಪಾಡಮುಖಿ, ಪ್ರೇಮಾ ಹುಯಿಲಗೋಳ, ಹೇಮಾ ವಸದ, ಇಂದುಮತಿ ಪುರಾಣಿಕ, ಡಾ.ಅಶ್ವಿನಿ ಬಬಲಿ, ದಾಕ್ಷಾಯಣಿ ಮಂಡಿ, ಯಶಸ್ವಿನಿ ಪುರಂದರ ಅವರು ಮತದಾನದ ಮಹತ್ವ ಕುರಿತು ತಮ್ಮ ಕವಿತೆಗಳ ಮೂಲಕ ಪ್ರಸ್ತುತಪಡಿಸಿದರು.