ಚಿತ್ರಕಲೆಯ ಮೂಲಕ ಮತದಾನ ಜಾಗೃತಿ

ಬಾಗಲಕೋಟೆ: ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಜಿಲ್ಲಾ ಸ್ವೀಪ್ ಯೋಜನೆಯಡಿ ನವನಗರದ ಕಲಾಭವನದಲ್ಲಿ ಶನಿವಾರ ಚಿತ್ರಕಲಾ ಶಿಕ್ಷಕರಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.

ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಮಾತನಾಡಿ, ಕಲೆ ದೈವದತ್ತವಾಗಿ ಒಲಿದು ಬಂದಿರುತ್ತದೆ. ಇದನ್ನು ಗಾಂಧರ್ವ ವಿದ್ಯೆಯೆಂದು ಕರೆಯಲಾಗುತ್ತದೆ. ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಶ್ರೇಷ್ಠ ಕಲಾವಿದನಾಗಲು ಸಾಧ್ಯವಿಲ್ಲ. ಅದಕ್ಕೂ ಕಲಾದೇವಿ ಆಶೀರ್ವಾದ, ಅದೃಷ್ಟ ಇರಬೇಕು ಎಂದರು.

ಉನ್ನತ ಉದ್ದೆಯಲ್ಲಿದ್ದರೂ ಚಿತ್ರಕಲೆ ಬಿಡಿಸುವಾಗ ಏಕಾಗ್ರತೆ ಕದಲುತ್ತದೆ. ಆದರೆ ಕಲಾವಿದನ ಕೈಯಲ್ಲಿ ಅದೇ ಬಣ್ಣ, ಅದೇ ಕುಂಚಿನಿಂದ ಇಂದು ಅರ್ಥಪೂರ್ಣವಾದ ಹಾಗೂ ಮತದಾನದ ಜಾಗೃತಿ ಸಂದೇಶ ಮೂಡಿಸುವ ಚಿತ್ರಗಳು ಹೊರಹೊಮ್ಮಿದ್ದು, ಕಲಾವಿದರ ಅದ್ಭುತ ಕಲೆ ಈ ಬಾರಿ ಮತದಾರರಲ್ಲಿ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಲಿದೆ. ಕಳೆದ ಬಾರಿ ಶೇ.68ರಷ್ಟು ಮತದಾನವಾಗಿತ್ತು, ಈ ಬಾರಿ ಶೇ.100ರಷ್ಟು ಮತದಾನವಾಗಬೇಕು ಎಂದು ಗುರಿ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

ಜಿ.ಪಂ. ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಗಂಗೂಬಾಯಿ ಮಾನಕರ ಮಾತನಾಡಿ, ಚಿತ್ರಕಲೆ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಈ ಹೊಸ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಸರ್ಕಾರಿ ನೌಕರರು ಮತದಾನ ಮಾಡಬೇಕು. ಅಂಚೆ ಮತದಾನ ಮುಖಾಂತರವಾದರೂ ತಮ್ಮ ಹಕ್ಕು ಚಲಾಯಿಸಬೇಕು ಎಂದು ಸಲಹೆ ನೀಡಿದರು.

ಚಿತ್ರಕಲಾ ಶಿಕ್ಷಕರು ಮತದಾನ ಜಾಗೃತಿ ಸಂದೇಶಗಳುಳ್ಳ ಚಿತ್ರ ಬಿಡಿಸಿದ್ದು, ಚಿತ್ರಕಲಾ ಶಿಕ್ಷಕರ ಕುಂಚದಿಂದ ಹೊರಬಂದ ಸಂದೇಶಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ರವಾನಿಸಲಾಗುವುದು. ಇವುಗಳನ್ನು ಸಂಗ್ರಹಿಸಿ ಅಲ್ಬಂ ಮಾಡಲಾಗುವುದು ಎಂದರು.

ಚಿತ್ರಕಲಾ ಶಿಕ್ಷಕರಾದ ತಿರುಪತಿ ಚಲವಾದಿ ಹಾಗೂ ಸಿ.ಜೆ. ಜತ್ತಿ ಅಭಿಪ್ರಾಯ ಹಂಚಿಕೊಂಡರು. ಬಾಗಲಕೋಟೆ ತಾ.ಪಂ. ಇಒ ಎನ್.ವೈ. ಬಸರಿಗಿಡದ ಸೇರಿ ಇತರರು ಉಪಸ್ಥಿತಿತರಿದ್ದರು.

ಬಹುಮಾನ ವಿತರಣೆ
ಮತದಾನ ಜಾಗೃತಿಗಾಗಿ ಹಮ್ಮಿಕೊಂಡ ಚಿತ್ರಕಲಾ ಸ್ಪರ್ಧೆಯಲ್ಲಿ 120 ಚಿತ್ರಕಲಾ ಶಿಕ್ಷಕರು ಪಾಲ್ಗೊಂಡಿದ್ದರು. ಬೆಳಗ್ಗೆಯಿಂದ ಸಂಜೆವರೆಗೆ ಮತದಾರರಿಗೆ ಕಡ್ಡಾಯವಾಗಿ ಮತ ಚಲಾಯಿಸಿ, ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಸಂದೇಶಗಳುಳ್ಳ ಚಿತ್ರಗಳನ್ನು ಬಿಡಿಸಿದರು. ಉತ್ತಮ ಚಿತ್ರಗಳಿಗೆ ಬಹುಮಾನ ನೀಡಲಾಯಿತು.

ನಾರ್ವೆ ಪೇಪರ್‌ನಲ್ಲಿ ಬಿಡಿಸಿದ ಚಿತ್ರಗಳಲ್ಲಿ ಪ್ರಥಮ ಸ್ಥಾನ ಅಕ್ಷಯಕುಮಾರ ಹಾಗೂ ಎಸ್.ಎಂ.ಚಿಕ್ಕೂರಮಠ, ದ್ವಿತೀಯ ಸ್ಥಾನ ದಾಜೀಬಾ ಜಗದಾಳ ಹಾಗೂ ಆರ್.ವಿ.ಬಜ್ಜಂಗನವರ, ತೃತೀಯ ಗೋಪಾಲ ರಾಠೋಡ ಹಾಗೂ ಎಸ್.ಆರ್. ಯಾದವ ಪಡೆದುಕೊಂಡರೆ, ಕ್ಯಾನವಾಸ್ ಬಟ್ಟೆಯಲ್ಲಿ ಬಿಡಿಸಿದ ಚಿತ್ರಗಳಿಗೆ ಪ್ರಥಮ ಕಾಶೀಮ್ ಕನಸಾವಿ, ಪಿ.ವಿ.ಲಮಾಣಿ, ದ್ವಿತೀಯ ಶ್ರೀಶೈಲ ದೋತರೆ, ಜಿ.ಟಿ. ದೇವರೆಡ್ಡಿ, ತೃತೀಯ ಸ್ಥಾನವನ್ನು ಎಸ್.ಎಸ್. ಅಂಗಡಿ, ಬ್ರಹ್ಮಾನಂದ ಬಸರಗಿ ಪಡೆದುಕೊಂಡರು. ವಿಶೇಷ ಬಹುಮಾನ ಜಿ.ಡಿ. ರಾಮರಾವ ಅವರಿಗೆ ನೀಡಲಾಯಿತು.