ರಸ್ತೆಗಳಿಗೆ ಡಾಂಬರೀಕರಣ ಮಾಡಿ

ಬಾಗಲಕೋಟೆ: ಗ್ರಾಮದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಡಾಂಬರೀಕರಣ ಮಾಡಬೇಕು ಎಂದು ಆಗ್ರಹಿಸಿ ಜಮಖಂಡಿ ತಾಲೂಕಿನ ಕೊಣ್ಣೂರ ಗ್ರಾಮಸ್ಥರು ಜಿಲ್ಲಾಡಳಿತ ಭವನ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.

ಕೊಣ್ಣೂರದಿಂದ ಹುಲ್ಯಾಳ ರಸ್ತೆ, ಮುಧೋಳ ರಸ್ತೆ, ಗುಡ್ಡಸಾಲ ರಸ್ತೆ ಸಂಪೂರ್ಣ ಹಾಳಾಗಿವೆ. ಇದರಿಂದ ರಸ್ತೆ ಅಪಘಾತ ಸಂಭವಿಸಿ ಪ್ರಾಣಕ್ಕೆ ಕುತ್ತು ಬರುತ್ತಿದೆ. ಮಕ್ಕಳು, ವೃದ್ಧರಂತೂ ಜೀವ ಕೈಯಲ್ಲಿ ಹಿಡಿದುಕೊಂಡೇ ಓಡಾಡುವ ಸ್ಥಿತಿ ಇದೆ. ವಾಹನ ಸವಾರರು ಭಯದಲ್ಲಿಯೇ ಸಂಚರಿಸುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಗ್ರಾಮಸ್ಥರೆಕ್ಕ ಸೇರಿಕೊಂಡು ಸಂಸದ ಪಿ.ಸಿ. ಗದ್ದಿಗೌಡರ ಅವರಿಗೆ ಮನವಿ ಸಲ್ಲಿಸಿ ಡಾಂಬರೀಕರಣ ಮಾಡಲು ಒತ್ತಾಯಿಸಲಾಗಿತ್ತು. ಸಂಸದರು ಸಂಬಂಧಿತ ಕಾರ್ಯನಿರ್ವಾಹಕ ಅಧಿಕಾರಿಗೆ (ಪಿಎಂಜಿಎಸ್‌ವೈ) ಕಾಮಗಾರಿ ಕೈಗೊಳ್ಳಲು ಸೂಚಿಸಿದ್ದರು. ಆದರೆ, ಇದುವರೆಗೆ ಕಾಮಗಾರಿ ಆರಂಭವಾಗಿಲ್ಲ. ಸಿಇಒ ಸೂಚನೆ ನೀಡಿದರೂ ಅಧಿಕಾರಿಗಳು ಕಿಮ್ಮತ್ತು ನೀಡುತ್ತಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ಶೀಘ್ರ ಡಾಂಬರೀಕರಣ ಕೈಗೊಳ್ಳದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಗದಿಗೆಪ್ಪ ಧಾರವಾಡಕರ, ದುಂಡಪ್ಪ ಹೊಸರತ್ತಿ, ಮಲ್ಲಪ್ಪ ಕಾನಗಾರ, ಗುಳಪ್ಪ ಹೊರಟ್ಟಿ, ಕರಿಯಪ್ಪ ಕೇಸರಕೊಪ್ಪ ಪ್ರತಿಭಟನೆಯಲ್ಲಿ ಇದ್ದರು.