ಕುಡಿಯುವ ನೀರಿನ ಸಮಸ್ಯೆ ಕುರಿತು ವಿಶೇಷ ಸಭೆ

ಬಾಗಲಕೋಟೆ: ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಎಷ್ಟೇ ಮನವಿ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ. ನಿತ್ಯ ಜನರು ನೀರಿನ ಸಮಸ್ಯೆ ಹೇಳಿಕೊಂಡು ಮನೆಗೆ ಬರ್ತಾರೆ. ಬರ ನಿರ್ವಹಣೆಗೆ ಕೋಟ್ಯಂತರ ರೂ. ಕೊಡಲಾಗಿದೆ ಎಂದು ಸರ್ಕಾರ ಹೇಳ್ತಿದೆ. ಯಾವ ಭಾಗದಲ್ಲೂ ಸಮರ್ಪಕವಾಗಿ ಕುಡಿಯುವ ಸಿಗ್ತಿಲ್ಲ. ಜನರ ಮುಂದೆ ನಮ್ಮ ಮಾನ, ಮಾರ್ಯಾದೆ ಹೋಗ್ತಿದೆ. ನಿಮಗೆ ಸ್ವಲ್ಪಾದರೂ ಜನರ ನೋವು, ಸಂಕಷ್ಟದ ಅರಿವು ಇದೆಯೇ !

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅಧ್ಯಕ್ಷತೆಯಲ್ಲಿ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ನಡೆದ ವಿಶೇಷ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು ಅಕಾರಿಗಳ ವಿರುದ್ಧ ಮುಗಿಬಿದ್ದ ಪರಿಯಿದು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಎದ್ದಿದೆ. ಚುನಾವಣೆ ನೀತಿ ಇದೇ ಎನ್ನುವ ಕಾರಣ ಹೇಳಿ ಕಳೆದ ನಾಲ್ಕು ತಿಂಗಳಿನಿಂದ ಕಾಲ ಕಳೆದಿರಿ. ಬರದ ಬಗ್ಗೆ ಗ್ರಾಪಂ, ಕಂದಾಯ ಇಲಾಖೆ ಹಾಗೂ ಶಾಸಕರಿಗೆ ಅನುದಾನ ಇದೆ. ಜಿಪಂ ಸದಸ್ಯರಿಗೆ ಇಲ್ಲ ಅಂತೀರಿ. ನಾವು ಜನ ಪ್ರತಿನಿಗಳಲ್ವಾ? ಅನುದಾನ ಇಲ್ಲವೆಂದ ಮೇಲೆ ಜಿಪಂ ಸಭೆಯಲ್ಲಿ ಬರ, ಕುಡಿಯುವ ನೀರಿನ ಚರ್ಚೆಯ ಅಗತ್ಯವಾದರೂ ಏನು ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ಶಿವಾನಂದ ಪಾಟೀಲ ಮಾತನಾಡಿ, ಕುಡಿಯವ ನೀರಿಲ್ಲದೆ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ನಿಂತು ಹೋಗಿದೆ. ತೋಟದ ವಸತಿಗಳ ಜನತೆಯಂತೂ ನೀರಿಗಾಗಿ ಮೈಲಿ ದೂರ ಅಲೆಯಬೇಕಿದೆ. ಜನರಿಗೆ ಅನುಕೂಲವಾಗುವಂತೆ ಯೋಜನೆ ಹಾಕಿಕೊಳ್ಳಿ ಸುಮ್ನೆ ದುಡ್ಡು ಹೊಡೆಯೋಕೆ ಕಸರತ್ತು ಮಾಡಬೇಡಿ. ಜಿಲ್ಲಾಡಳಿತ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಲವಾಗಿದೆ ಎಂದು ಅಕಾರಿಗಳ ವಿರುದ್ಧ ಕಿಡಿಕಾರಿದರು.

ಭೀಕರ ಬರವಿದ್ದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳಲಿಲ್ಲ. ಮೇವು ಬ್ಯಾಂಕ್ ಸ್ಥಾಪಿಸಲಿಲ್ಲ. ಬರ ಅಧ್ಯಯನ ತಂಡ ಬಂದಾಗ ಏಕಾಏಕಿ ಕಾರ್ಯಾರಂಭವಾದವು. ಎಲ್ಲಿ ಆರಂಭಿಸಲಾಗಿದೆ ಎನ್ನುವ ಮಾಹಿತಿ ರೈತರಿಗೆ ಇಲ್ಲ. ಜಮಖಂಡಿ ತಾಲೂಕಿನಲ್ಲಿ ತೊದಲಬಾಗಿ ಬಹುಗ್ರಾಮ ನೀರು ಸರಬರಾಜು ಯೋಜನೆ 10 ವರ್ಷವಾದರೂ ಪೂರ್ಣಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಶಶಿಕಾಂತ ಪಾಟೀಲ, ಕುಡಿಯುವ ನೀರಿನ ಸಮಸ್ಯೆ ಇದ್ದರೂ ವಾಸ್ತವ ಅರಿಯಲು ಜಿಪಂ ಸಿಇಒ ಗ್ರಾಮಗಳಿಗೆ ಭೇಟಿ ನೀಡಲಿಲ್ಲ. ಕೇವಲ ಮಾಧ್ಯಮಗಳಿಗೆ ಹೇಳಿಕೆ ನೀಡಿದರೇ ಹೊರತು ಸಮಸ್ಯೆ ಪರಿಹರಿಸಲು ಮುಂದಾಗಲಿಲ್ಲ ಎಂದು ದೂರಿದರು. ಬೋರ್ ಹಾಕುತ್ತಾರೆ ವಿದ್ಯುತ್ ಸಂಪರ್ಕ ಕೊಡಲ್ಲ. ಎಲ್ಲ ಸಿದ್ಧವಾಗಿದ್ದರೂ ಮೋಟಾರ್ ಕೆಟ್ಟಿದೆ ಅಂತಾರೆ. ಅನೇಕ ಕಡೆ ಪೈಪಲೈನ್ ಮಾಡಿಲ್ಲ ಎಂದು ಸದಸ್ಯೆಯರಾದ ಶೋಭಾ ಬಿರಾದಾರ ಪಾಟೀಲ, ಸಾಯವ್ವ ದಳವಾಯಿ ದೂರಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಪಂ ಅಧ್ಯಕ್ಷೆರ ಬಾಯಕ್ಕ ಮೇಟಿ, ನೀತಿ ಸಂಹಿತಿ ಹಿನ್ನೆಲೆ ಸಭೆ ನಡೆಸಲು ಸಾಧ್ಯವಾಗಿಲ್ಲ. ಜಿಪಂಗೆ ಅನುದಾನ ಇರದಿದ್ದರೂ ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಆಗ್ರಹಿಸುವ ಅಕಾರ ಇದೆ. ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಅಕಾರಿಗಳಿಗೆ ಸೂಚನೆ ನೀಡಿದ ಅವರು, ಇನ್ನಷ್ಟು ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಜಿಪಂ ಉಪಾಧ್ಯಕ್ಷೃ ಮುತ್ತಪ್ಪ ಕೋಮಾರ, ಸಿಇಒ ಗಂಗೂಬಾಯಿ ಮಾನಕರ, ಸದಸ್ಯರಾದ ಕಸ್ತೂರಿ ಲಿಂಗಣ್ಣವರ, ಜಯಶ್ರೀ ಶರವಾಣ, ಕವಿತಾ ದಡ್ಡಿ, ಕವಿತಾ ತಿಮ್ಮಾಪುರ, ಮಹಾಂತೇಶ ಉದಪುಡಿ ಇತರರು ಇದ್ದರು.

ಸುಳ್ಳು ವರದಿ ನೀಡಿ ಅನುದಾನ ತಪ್ಪಿಸಬೇಡಿ
ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ಮಾತನಾಡಿ, ಜಿಲ್ಲೆಯಲ್ಲಿ 35.7 ಮಿಮೀ ಮುಂಗಾರು ಪೂರ್ವ ಮಳೆಯಾಗಿದೆ. ಬಾದಾಮಿ, ಜಮಖಂಡಿ, ಮುಧೋಳ ತಾಲೂಕುಗಳಲ್ಲಿ ಉತ್ತಮ ಮೆಳೆಯಾಗಿದೆ ಎಂದು ಹೇಳುತ್ತಿದ್ದಂತೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಜಿಲ್ಲೆಯಲ್ಲಿ ಮಳೆ ಪ್ರಮಾಣ ತೀವ್ರ ಕಡಿಮೆಯಾಗಿದೆ. ಸುಳ್ಳು ವರದಿ ನೀಡಿ ಸರ್ಕಾರದಿಂದ ಬರುವ ಅನದಾನ ತಪ್ಪಿಸಬೇಡಿ ಎಂದು ಗರಂ ಆದರು.

ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ
ಹುನಗುಂದ ತಾಲೂಕಿನ ಇಲಾಳ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಸಭೆಯಲ್ಲಿ ಪ್ರತಿನಿಧ್ವನಿಸಿತು. ಜಿಪಂ ಸದಸ್ಯ ಶಶಿಕಾಂತಗೌಡ ಪಾಟೀಲ ಈ ಬಗ್ಗೆ ಪ್ರಸ್ತಾಪಿಸಿ, 48 ಕೋಟಿ ರೂ. ವೆಚ್ಚದ ಈ ಯೋಜನೆ ಎರಡು ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು. ಅವ ವಿಸ್ತರಣೆ ಬಳಿಕ 2019ರ ಮಾರ್ಚ್‌ಗೆ ಕಾಮಗಾರಿ ಮುಗಿಯಬೇಕಿತ್ತು. ಗುತ್ತಿಗೆದಾರರ ನಿರ್ಲಕ್ಷದ ಪರಿಣಾಮ ಯೋಜನೆ ಈವರೆಗೂ ಪೂರ್ಣಗೊಂಡಿಲ್ಲ. ಆದರೂ ಬಿಲ್ ಪಾವತಿ ಮಾಡಲಾಗಿದೆ. ಅಕಾರಿಗಳು ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಇದರಲ್ಲಿ ಮಾಜಿ, ಹಾಲಿ ಶಾಸಕರ ಸಂಘರ್ಷವೂ ಇದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಂಡು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಜಿಪಂ ಇಂಜಿನಿಯರಿಂಗ್ ವಿಭಾಗದ ಕಾರ್ಯಾಪಾಲಕ ಅಭಿಯಂತರ ಮಹೇಶ ಕಕರಡ್ಡಿ ಮಾತನಾಡಿ, ಗುತ್ತಿಗೆದಾರರಿಗೆ ಅನೇಕ ಬಾರಿ ನೋಟಿಸ್ ನೀಡಲಾಗಿದೆ. ಸರ್ಕಾರವೇ ಅವ ವಿಸ್ತರಣೆ ಮಾಡಿದ್ದರಿಂದ ಸಮಯ ನೀಡಬೇಕಾಯಿತು. ಈಗಾಗಲೇ 38 ಕೋಟಿ ರೂ. ವೆಚ್ಚದ ಕೆಲಸ ಮಾಡಿದ್ದಾರೆ. ಶೇ.75ರಷ್ಟು ಅಂದಾಜು 26 ಕೋಟಿ ಹಣ ಪಾವತಿಸಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಕೆಲಸ ವಿಳಂಬವಾಗಿದೆ ಎಂದರು. ಈ ಕುರಿತು ಸದಸ್ಯರು, ಅಕಾರಿಗಳ ನಡುವೆ ತೀವ್ರ ವಾಕ್ಸಮರ ನಡೆಯಿತು.

ಇದಕ್ಕೆ ತೆರೆ ಎಳೆದ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಈ ಯೋಜನೆ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಲು ಸಿಇಒ ಗಂಗಬಾಯಿ ಮಾನಕರಗೆ ಸೂಚಿಸಿ ಮುಂದಿನ ಸಭೆಯೊಳಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಸೂಚಿಸಿದರು.

10 ವರ್ಷವಾದರೂ ಕಾಮಗಾರಿ ಮುಗಿದಿಲ್ಲ
ಜಮಖಂಡಿ ತಾಲೂಕಿನಲ್ಲಿ 5 ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿತ್ತು. ಯೋಜನೆ ಆರಂಭವಾಗಿ 10 ವರ್ಷವಾದರೂ ತೊದಲಬಾಗಿ, ಹುಲ್ಯಾಳ ನೀರು ಪೂರೈಕೆ ಕಾಮಗಾರಿ ಪೂರ್ಣಗೊಂಡಿಲ್ಲ. ಕೋಟ್ಯಂತರ ರೂ. ಖರ್ಚಾದರೂ ಏನು ಪ್ರಯೋಜನ. ಇದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರು.

Leave a Reply

Your email address will not be published. Required fields are marked *