More

  ನಾಳೆಯಿಂದ ಸಿದ್ಧೇಶ್ವರ ಶ್ರೀಗಳ ಪ್ರವಚನ

  ಬಾಗಲಕೋಟೆ: ನಡೆದಾಡುವ ದೇವರು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಪ್ರವಚನ ಕಾರ್ಯಕ್ರಮ ಜ.20 ರಿಂದ ಒಂದು ತಿಂಗಳು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ಅಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

  ನವನಗರದ ಸೆಕ್ಟರ್ ನಂಬರ್ 19 ರಲ್ಲಿರುವ ಕಲಾಭವನದ ಬಯಲು ರಂಗಮಂದಿರದಲ್ಲಿ ಪ್ರತಿನಿತ್ಯ ಬೆಳಗ್ಗೆ 6.30 ರಿಂದ 7.30 ವರೆಗೆ ಸಿದ್ಧೇಶ್ವರ ಶ್ರೀಗಳು ಪ್ರವಚನ ನೀಡಲಿದ್ದಾರೆ. ಬಾಗಲಕೋಟೆಯ ಸಕಲ ಸಮಾಜ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸಾಂಸ್ಕೃತಿಕ ಸಂಘ ಸಂಸ್ಥೆಗಳನ್ನು ಒಳಗೊಂಡ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  ಜ.20 ರಂದು ಬೆಳಗ್ಗೆ 6.30 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ಜರುಗಲಿದ್ದು, ಸೇವಾ ಸಮಿತಿ ಗೌರವ ಅಧ್ಯಕ್ಷ, ಚರಂತಿಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಇಳಕಲ್ಲದ ಗುರು ಮಹಾಂತ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಆಗಮಿಸಲಿದ್ದಾರೆ. ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ ಉಪಸ್ಥಿತರಿರುವರು ಎಂದರು.

  ಪ್ರವಚನ ಕಾರ್ಯಕ್ರಮ ಯಶಸ್ವಿಗೊಳಿಸಲು ಹಿರಿಯ ಮಾರ್ಗದರ್ಶನದಲ್ಲಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಬಾಗಲಕೋಟೆ ನಗರ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಜನ ಭಾರಿ ಸಂಖ್ಯೆಯಲ್ಲಿ ಪ್ರತಿನಿತ್ಯ ಸೇರುವ ನಿರೀಕ್ಷೆಯಿದೆ. ಬಿವಿವಿ ಸಂಘದ ಮುಖ್ಯದ್ವಾರ ಬೀಳೂರ ಅಜ್ಜನವರ ದೇವಸ್ಥಾನದಿಂದ ಹಾಗೂ ವಲ್ಲಭ ಭಾಯಿ ವೃತ್ತದಿಂದ ಪ್ರತಿನಿತ್ಯ ಬೆಳಗ್ಗೆ 6 ಗಂಟೆಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.

  ಗೆಳೆಯರ ಬಳಗದ ಅಧ್ಯಕ್ಷ ಡಾ.ಎಚ್.ಎಸ್. ಪೂಜಾರ, ಮುಖಂಡರಾದ ಅಪ್ಪಾಸಾಹೇಬ ಬುರ್ಲೆ ಸುದ್ದಿಗೋಷ್ಠಿಯಲ್ಲಿ ಇದ್ದರು.

  ಸಿದ್ಧೇಶ್ವರ ಶ್ರೀಗಳು ಪ್ರವಚನ ಕೇಳುವುದೇ ದೊಡ್ಡ ಪುಣ್ಯ. 2008 ರಲ್ಲಿ ನಗರಕ್ಕೆ ಆಗಮಿಸಿ ಪ್ರವಚನ ನೀಡಿದ್ದರು. ಇದೀಗ ನಾಲ್ಕನೇ ಬಾರಿ ಆಗಮಿಸುತ್ತಿರುವುದು ಖುಷಿ ತಂದಿದೆ. ಸಮಾಜದಲ್ಲಿ ಭಾವಕ್ಯತೆಯ ಬೀಜ ಬಿತ್ತಲು, ಸೌಹಾರ್ದತೆ ವೃದ್ಧಿಸುವಲ್ಲಿ ಹಾಗೂ ಸತ್ಯ,ನ್ಯಾಯ, ನೀತಿ, ಧರ್ಮದಿಂದ ಜೀವನ ನಡೆಸುವ ಬಗ್ಗೆ ಅವರ ಪ್ರವಚನ ಬಹಳಷ್ಟು ಪ್ರಭಾವ ಬೀರಲಿದೆ.
  – ಎಸ್.ಆರ್. ಪಾಟೀಲ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ

  ಸಿದ್ಧೇಶ್ವರ ಶ್ರೀಗಳ ಪ್ರವಚನಕ್ಕೆ ವರ್ಷಗಟ್ಟಲೇ ಕಾಯಬೇಕಾಗುತ್ತದೆ. ಬಹಳ ವರ್ಷಗಳ ನಂತರ ಬಾಗಲಕೋಟೆಗೆ ಆಗಮಿಸುತ್ತಿದ್ದಾರೆ. ಸಕಲ ರೀತಿಯಿಂದ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು.
  – ಪ್ರಕಾಶ ತಪಶೆಟ್ಟಿ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts