ಇಳಕಲ್ಲದಲ್ಲಿ ಗಮನ ಸೆಳೆದ ಪಥಸಂಚಲನ

ಇಳಕಲ್ಲ: ವಿಜಯದಶಮಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವ ನಿಮಿತ್ತ ಶನಿವಾರ ಗಣವೇಷಧಾರಿ ಗಳು ಶನಿವಾರ ನಡೆಸಿದ ಆಕರ್ಷಕ ಪಥಸಂಚಲನ ಸಾರ್ವಜನಿಕರ ಗಮನ ಸೆಳೆಯಿತು.

ಸಂಜೆ 4.15 ಗಂಟೆಗೆ ಚಂದ್ರಶೇಖರ ಆಜಾದ್ ವೃತ್ತದಿಂದ ಪಥಸಂಚಲನ ಆರಂಭ ಗೊಂಡು ನಗರದ ಬನ್ನಿಕಟ್ಟಿ, ಮಹಾಂತೇಶ ಚಿತ್ರಮಂದಿರ, ಸಾಲಪೇಟೆ, ಬನಶಂಕರಿ ದೇವಸ್ಥಾನ, ಗುಬ್ಬಿಪೇಟೆ ಬನಶಂಕರಿ ದೇವಸ್ಥಾನ, ವಿಶೇಷ ತಹಸೀಲ್ದಾರ್ ಕಚೇರಿ, ಗಾಂಧಿ ಸರ್ಕಲ್, ಬಸವನ ಗುಡಿ, ತರಕಾರಿ ಮಾರುಕಟ್ಟೆ, ಕೊಪ್ಪರದ ಪೇಟೆ ಬನಶಂಕರಿ ದೇವಸ್ಥಾನ, ಅಂಬಾಭವಾನಿ ದೇವಸ್ಥಾನ, ಹಳೆಯ ಸರ್ಕಾರಿ ಆಸ್ಪತ್ರೆ, ಅಮರೇಶ್ವರ ಜ್ಯೋತಿರ್ಭವನ, ಎಸಿಓ ಶಾಲೆ, ವಿಜಯ ಮಹಾಂತೇಶ ಮಠ, ಅಂಬೇಡ್ಕರ್ ಸರ್ಕಲ್, ಎಸ್.ಆರ್. ಕಂಠಿ ಸರ್ಕಲ್, ಬಸ್ ನಿಲ್ದಾಣ, ಸಿಎಸ್​ವಿಎಂ ಶಾಲೆ ರಸ್ತೆ ಮೂಲಕ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಆರ್. ವೀರಮಣಿ ಕ್ರೀಡಾಂಗಣ ತಲುಪಿ ಸಭೆಯಾಗಿ ಮಾರ್ಪಟ್ಟಿತು. ಪಥ ಸಂಚಲನ ವೇಳೆ ಗಣವೇಷಧಾರಿಗಳು ಹಾಗೂ ಅಭಿಮಾನಿಗಳ ಘೊಷಣೆಗಳು ಮುಗುಲು ಮುಟ್ಟುವಂತೆ ಮೊಳಗಿದವು.

ಸಿಂಗಾರಗೊಂಡ ನಗರ: ಪಥ ಸಂಚಲನದ ಮಾರ್ಗಗಳನ್ನು ಸಾರ್ವಜನಿಕರು ಮದುವಣಗಿತ್ತಿಯಂತೆ ಅಲಂಕರಿಸಿದ್ದರು. ವಿವಿಧ ಬಣ್ಣಗಳ ರಂಗೋಲಿ ಚಿತ್ತಾರ, ಕೇಸರಿ ಧ್ವಜಗಳು, ಬಾಳೆಕಂಬ, ತೆಂಗಿನ ಗರಿಗಳು ಹಾಗೂ ಪುಷ್ಪವೃಷ್ಟಿ ಗಮನ ಸೆಳೆದವು. ಮಾರ್ಗದುದ್ದಕ್ಕೂ ಮನೆಗಳ ಮುಂದೆ ಪಾಲಕರು ತಮ್ಮ ಮಕ್ಕಳಿಗೆ ದಾರ್ಶನಿಕರು, ದೇಶಭಕ್ತರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷ ಹಾಕಿ ನಿಲ್ಲಿಸಿದ್ದರು. ಗಣವೇಷಧಾರಿಗಳಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮಹಿಳೆಯರು ಆರತಿ ಬೆಳಗಿದರು.

ಗಮನ ಸೆಳೆದ ಮಕ್ಕಳು: ಐದಾರು ವರ್ಷದ ನೂರಾರು ಮಕ್ಕಳು ಗಣವೇಷಧಾರಿಯಾಗಿ ಪಾಲ್ಗೊಂಡು ಸಾರ್ವಜನಿಕರ ಗಮನ ಸೆಳೆದರು. ಪಥಸಂಚಲನ ವೀಕ್ಷಿಸಲು ಹುನಗುಂದ ಹಾಗೂ ಸುತ್ತಲಿನ ಗ್ರಾಮಗಳ ಜನರು ತಂಡೋಪತಂಡವಾಗಿ ನಗರಕ್ಕೆ ಆಗಮಿಸಿದ್ದರು. ಪಥಸಂಚಲನ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ನಗರಾದ್ಯಂತ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಗಣವೇಷಧಾರಿ ಪ್ರಮುಖರು: ಪಥಸಂಚಲನದಲ್ಲಿ ಆರ್​ಎಸ್​ಎಸ್ ತಾಲೂಕು ಸಂಚಾಲಕ ಶರಣಪ್ಪ ರೋಡ್ಡಾ, ಶಾಸಕ ದೊಡ್ಡನಗೌಡ ಪಾಟೀಲ ಸೇರಿದಂತೆ ಹಲವು ಮುಖಂಡರು, ಗಣ್ಯರು, ಆರ್​ಎಸ್​ಎಸ್ ಪ್ರಮುಖರು,ಕಾರ್ಯಕರ್ತರು ಭಾಗವಹಿಸಿದ್ದರು.