More

    ವೇಮನ ತತ್ವಾದರ್ಶ ಸರ್ವ ಕಾಲಕ್ಕೂ ಪ್ರಸ್ತುತ

    ಬಾಗಲಕೋಟೆ: ಜಾತಿ, ಮತ, ಪಂಥವೆನ್ನದೆ ಎಲ್ಲರೂ ಒಂದೇ ಎಂದು ಸಾರಿ, ಜೀವನದ ಮೌಲ್ಯವನ್ನು ಎತ್ತಿ ಹಿಡಿದ ವಿಶ್ವಮಾನವ, ಕವಿ ಮಹಾಯೋಗಿ ವೇಮನ ತತ್ವಾದರ್ಶಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಹೇಳಿದರು.

    ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ವೇಮನರು ಜಾತಿ ವ್ಯವಸ್ಥೆ ಮೌಢ್ಯತೆ, ಅಂಧಕಾರ ಹಾಗೂ ಸಂಪ್ರದಾಯ ವ್ಯವಸ್ಥೆಯನ್ನು ವಿರೋಧಿಸಿದರು. ಅಲ್ಲದೆ, ಅದನ್ನು ಮೆಟ್ಟಿ ನಿಂತು ಜಾತ್ಯತೀತ ಸಮಾಜವನ್ನು ನಿರ್ಮಿಸಿದವರು. ನಿಜ ಧರ್ಮದ ಬಗ್ಗೆ ತನ್ನ ಕಾವ್ಯದ ಮೂಲಕ ಬೆಳಕು ಚೆಲ್ಲಿದವರು ಎಂದರು.

    ವೇಮನರು ತೆಲುಗಿನಲ್ಲಿ ಬರೆದ ಅನೇಕ ವಚನಗಳು ಬೇರೆ ಬೇರೆ ಭಾಷೆಗಳಲ್ಲದೆ ಕನ್ನಡಕ್ಕೂ ಭಾಷಾಂತಗೊಂಡಿವೆ. ಅವುಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿವೆ. ಅವರ ವಚನಗಳು ನೇರವಾಗಿ ಮಾನವನ ಅಂತರಂಗವನ್ನು ಶುದ್ಧಗೊಳಿಸಲು ಮಾರ್ಗದರ್ಶನ ನೀಡುವಂತಹದ್ದಾಗಿವೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಹಸಿದವರಿಗೆ ತುತ್ತು ಅನ್ನ ನೀಡುವುದೇ ನಿಜವಾದ ಧರ್ಮವೆಂದು ಸಾರಿದರು. ನೋವುಗಳಿಗೆ ಉತ್ತರಿಸಲು ಎಲ್ಲ ಕಾಲ ಘಟ್ಟಕ್ಕೂ ಅನ್ವಯಿಸುವಂತೆ ವೇಮನರು ಕಾವ್ಯಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು.

    ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ಶಿಕ್ಷಕಿ ಸರಳಾ ಸಿಂಗರೆಡ್ಡಿ ಉಪನ್ಯಾಸ ನೀಡಿ, ಭರತ ಭೂಮಿಯಲ್ಲಿ ಸಾಧು ಸಂತರು, ಸತ್ಪುರುಷರು, ಯೋಗಿಗಳು ಅವತರಿಸಿ ಸಾವಿರಾರು ವರ್ಷಗಳು ಗತಿಸಿದರೂ ಇಂದಿಗೂ ಚಿರಸ್ಮರಣೀಯರಾಗಿದ್ದಾರೆ. ಅಂತಹವರ ಸಾಲಿನಲ್ಲಿ ವೇಮನರು ಕವಿ, ಯೋಗಿಯಾಗಿ ಗುರುತಿಸಿಕೊಂಡಿದ್ದಾರೆ. ವೇಮನರು ಬರೆದ ಸಾಹಿತ್ಯ ಆಂಗ್ಲ ಭಾಷೆಗೆ ಭಾಷಾಂತರಗೊಂಡು ಜನಮನ್ನಣೆ ಪಡೆದಿದೆ. ರಾಜವೈಭೋಗ ಬಿಟ್ಟು ವೇಮನರು 33 ವಯಸ್ಸಿನಲ್ಲಿಯೇ ಯೋಗಿಯಾದರು ಎಂದರು.

    ಡಾ.ಸಿದ್ದಣ್ಣ ಬಾಡಗಿ ರಚಿಸಿರುವ ತ್ರಿಕಾಲಜ್ಞಾನಿ ಯೋಗಿ ವೇಮನ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಮಾಜಕ್ಕೆ 5 ಎಕರೆ ಭೂಮಿ ದಾನದ ಮಾಡಿದ ಶಿರೂರ ಗ್ರಾಮದ ಮಲ್ಲಮ್ಮ ಗುಲಗಂಜಿ ಅವರನ್ನು ಸನ್ಮಾನಿಸಲಾಯಿತು.

    ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರುಗಿ, ಜಿಪಂ ಉಪಕಾರ್ಯದರ್ಶಿ ಎ.ಜಿ. ತೋಟದ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತಹಸೀಲ್ದಾರ್ ಗುರುಬಸಯ್ಯ ಹಿರೇಮಠ, ಸಮಾಜದ ಮುಖಂಡರಾದ ಎಸ್.ಪಿ. ಮಾಚಾ, ಸಿ.ಕೆ. ಒಂಟಗೋಡಿ ಸೇರಿ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಶಿರೂರ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts