ಜಮಖಂಡಿ: ನಗರದಲ್ಲಿ ಸ್ಥಾಪನೆಗೊಂಡ ಎರಡು ವರ್ಷದಲ್ಲೇ ಬಾಗಲಕೋಟೆ ವಿಶ್ವ ವಿದ್ಯಾಲಯ ಪ್ರಸಕ್ತ ಸಾಲಿನ ವರೆಗೆ ಸುಮಾರು 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುವ ಮಟ್ಟಿಗೆ ಶಸಕ್ತವಾಗಿ ಬೆಳೆದುನಿಂತಿದೆ.

2023-24ನೇ ಸಾಲಿನಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದಿಂದ ಬೇರ್ಪಡಿಸಿ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಗೆ ಬರುವ ಒಟ್ಟು 73 ಕಾಲೇಜುಗಳನ್ನು ಹೊಂದಿರುವ ವಿವಿಯಲ್ಲಿ ಈಗಾಗಲೇ 30 ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಮುಂಬರುವ 2025-26ನೇ ಸಾಲಿಗೆ ಈ ಪ್ರವೇಶಾತಿ ಸಂಖ್ಯೆ ಸುಮಾರು 50 ಸಾವಿರಕ್ಕೆ ಏರಿಕೆಯಾಗುತ್ತದೆ. ಪ್ರತಿ ವರ್ಷ ಪ್ರವೇಶಾತಿ ಸಂಖ್ಯೆ ಹೆಚ್ಚಿಸಿಕೊಳ್ಳುವುದರ ಜತೆಗೆ ಆಂತರಿಕವಾಗಿ ವಾರ್ಷಿಕ 7 ಕೋಟಿ ರೂ. ಶೇಖರಣೆ ಮಾಡಿಕೊಳ್ಳುತ್ತಿದೆ.
ಸದ್ಯ ವಿವಿಯಲ್ಲಿ ಶೇ.90ಕ್ಕಿಂತ ಅಧಿಕ ಸ್ನಾತಕೊತ್ತರ ಕಲಿಯುವ ವಿದ್ಯಾರ್ಥಿನಿಯರಿದ್ದಾರೆ. ಶೇ.95ಕ್ಕಿಂತ ಅಧಿಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳೆ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.
ಡಿಜಿಟಲ್ ಪ್ರಶ್ನೆಪತ್ರಿಕೆ ಬಳಕೆ: ಪ್ರಶ್ನೆ ಪತ್ರಿಕೆಗಳು ಸೊರಿಕೆಯಾಗಬಾರದು ಎಂದು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಲ್ಲಿಯೇ ಮೊದಲ ಬಾರಿಗೆ ಕ್ಯೂಪಿಡಿಎಸ್ ತಂತ್ರಾಶದ ಮೂಲಕ ಅಂದರೆ ಪರೀಕ್ಷೆಯ ಒಂದು ಗಂಟೆ ಮೊದಲು ಪ್ರಶ್ನೆ ಪತ್ರಿಕೆಗಳನ್ನು ಮುಟ್ಟಿಸುವುದರೊಂದಿಗೆ ಪರೀಕ್ಷೆಗಳಲ್ಲಿ ಅಕ್ರಮ ನಡೆಯದಂತೆ ಕ್ರಮವಹಿಸಲಾಗಿದೆ.
ಬಾಗಲಕೋಟೆ ವಿಶ್ವ ವಿದ್ಯಾಲಯ ಪ್ರಾರಂಭವಾಗಿ ಎರಡೇ ವರ್ಷದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳ ಹಾಗೂ ಕಾರ್ಪೋರೇಟ್ ವಲಯಗಳೊಂದಿಗೆ ಹಲವಾರು ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ.
ಬಾಗಲಕೋಟೆ ವಿವಿಯಲ್ಲಿ 22 ಸ್ನಾತಕ, 13 ಸ್ನಾತಕೋತ್ತರ ವಿಭಾಗಳು ಕಾರ್ಯನಿರ್ವಹಿಸುತ್ತಿವೆ. 2023-24ನೇ ಸಾಲಿನಲ್ಲಿ 14768, 2024-25ನೇ ಸಾಲಿನಲ್ಲಿ 15 ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದಾರೆ.
ಬಾರದ ಅನುದಾನ: ವಿಶ್ವವಿದ್ಯಾಲಯ ತನ್ನ ಆಂತರಿಕ ಸಂಪನ್ಮೂಲಗಳಿಂದ ಅಭಿವೃದ್ಧಿ ಮಾಡಿಕೊಳ್ಳುತ್ತಿದೆ. ಸರ್ಕಾರ ವಿವಿಗೆ ವಾರ್ಷಿಕ 2 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿತ್ತು. ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಬಾಗಲಕೋಟೆ ವಿವಿಗೆ 6 ಕೋಟಿ ರೂ. ಅನುದಾನ ಬರಬೇಕಿದೆ. ಆದರೆ ಇಲ್ಲಿಯವರೆಗೆ ನಯಾಪೈಸೆ ಅನುದಾನವು ಬಿಡುಗಡೆಯಾಗಿಲ್ಲ.
ದಾನಿಗಳ ನೀರಿಕ್ಷೆಯಲ್ಲಿ: ಜಮಖಂಡಿಯ ಕಿರಿಟ ಪ್ರಾಯವಾಗಿರುವ ಬಾಗಲಕೋಟೆ ವಿವಿಯನ್ನು ರಾಜ್ಯದಲ್ಲೇ ಮಾದರಿಯನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ಪ್ರೇಮಿಗಳು, ದಾನಿಗಳು ಮುಂದಾದರೆ ಅಭಿವೃದ್ಧಿ ಸುಲಭ ಸಾಧ್ಯವಾಗಲಿದೆ.
ಸರ್ಕಾರದ ನಯಾಪೈಸೆ ಅನುದಾನ ಬರದೆ ಇದ್ದರೂ ಸದ್ಯ ಓದುತ್ತಿರುವ 45 ಸಾವಿರ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾದ ಜಮಖಂಡಿಯ ಬಾಗಲಕೋಟೆ ವಿಶ್ವವಿದ್ಯಾಲಯ ತನ್ನ ಕಾಲಿನ ಮೇಲೆ ತಾನೆ ಬೆಳೆದು ನಿಂತಿದೆ.
ಅರ್ನ್ ವಿಲ್ ಲರ್ನ್: ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಬಡವರು ಕಲಿಯುವುದಕ್ಕೆ ಹಣಕಾಸಿನ ತೊಂದರೆ ಇದ್ದರೆ ಅವರಿಗೆ ಅರ್ನ ವಿಲ್ ಲರ್ನ್ ಯೋಜನೆ ಹಾಕಿಕೊಳ್ಳಲಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಬೌಧಿಕವಾಗಿ, ಆರ್ಥಿಕವಾಗಿ ವಿಶ್ವ ವಿದ್ಯಾಲಯ ಬೆಂಬಲವಾಗಿ ನಿಂತಿದೆ.
ಜಾಗ ನೀಡಲು ಹಿಂದೇಟು: ಜಮಖಂಡಿ ನಗರಕ್ಕೆ ಹೊಂದಿಕೊಂಡಂತೆ ಇರುವ ಕೃಷಿ ಇಲಾಖೆಯ 39 ಎಕರೆ ಜಾಗವನ್ನು ಬಾಗಲಕೋಟೆ ವಿಶ್ವ ವಿದ್ಯಾಲಯಕ್ಕೆ ಹಸ್ತಾಂತರ ಪ್ರಕ್ರಿಯೆ ಪರಿಶೀಲನೆಯಲ್ಲಿದೆ. ಆದರೆ ಇಲ್ಲಿಯವರೆಗೂ ಜಾಗವನ್ನು ನೀಡಿಲ್ಲ. ಇದರಿಂದ ವಿವಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ.