ಬಾಡಿಗೆದಾರರಿಗೆ ಬಿ ಮಾದರಿ ನಿವೇಶನ ಮಾತ್ರ

<< ಪ್ರಾಧಿಕಾರದಿಂದ ಹಲವು ಮಹತ್ವದ ನಿರ್ಣಯ >>

ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವೈ. ಮೇಟಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ 133 ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ.

ಸಭೆಯಲ್ಲಿ ಬಾಡಿಗೆದಾರರಿಗೆ ಯಾವ ನಿವೇಶನ ನೀಡಬೇಕು, ರಸ್ತೆ ಅಗಲೀಕರಣಕ್ಕೆ ಭೂಮಿ ನೀಡಿದ ಮಾಲೀಕರಿಗೆ ಪ್ರಾಧಿಕಾರದಿಂದ ನವನಗರದಲ್ಲಿ ನಿವೇಶನ ಉಚಿತವಾಗಿ ನೀಡುವ ಬಗ್ಗೆ, ನಿವೇಶನ ಹಂಚಿಕೆಯಲ್ಲಿ ಅನುಸರಿಸಬೇಕಾದ ನಿಯಮಗಳು ಸೇರಿ ವಿವಿಧ ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ಗಂಭೀರವಾದ ಚರ್ಚೆ ನಡೆಸಲಾಯಿತು. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಹಲವು ವಿಷಯಗಳಿಗೆ ಅನುಮೋದನೆ ನೀಡಲಾಯಿತು.

ಸಂತ್ರಸ್ತರ ಕುಟುಂಬದ ವಯಸ್ಕರ ಮಕ್ಕಳಿಗೆ, ಸಹೋದರರಿಗೆ ನೀಡಲಾಗುತ್ತಿದ್ದ ಎ ಮಾದರಿ ಎರಡು ನಿವೇಶನ ಸಂತ್ರಸ್ತರು ನಿರಾಕರಣೆ ಮಾಡಿ ಬಿ ನಿವೇಶನ ನೀಡುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಿದಲ್ಲಿ ಬಿ ನಿವೇಶನ ಕೊಡಬಹುದು, ಮುಖ್ಯವಾಗಿ 521 ರಿಂದ 523 ಮೀಟರ್‌ವರೆಗೆ ಸ್ವಾಧೀನಪಡಿಸಿಕೊಂಡ ಕಟ್ಟಡಗಳ ಬಾಡಿಗೆದಾರರಿಗೆ ಬಿ ಮಾದರಿ ನಿವೇಶನ ಮಾತ್ರ ನೀಡಬೇಕು. ಅದಕ್ಕಿಂತ ಹಚ್ಚಿನ ಅಳತೆಯ ನಿವೇಶನ ಕೊಡಬಾರದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ನವನಗರ-ಬಾಗಲಕೋಟೆ ನಡುವಿನ ರಸ್ತೆ ಅಗಲೀಕರಣಕ್ಕೆ, ಮೂಲಸೌಕರ್ಯಕ್ಕಾಗಿ ಪ್ರಾಧಿಕಾರಕ್ಕೆ ಅಗತ್ಯ ಭೂಮಿ ನೀಡಿದ ಖಾಸಗಿ ಮಾಲೀಕರಿಗೆ ಉಚಿತವಾಗಿ ನವನಗರದಲ್ಲಿ ನಿವೇಶನ ನೀಡಲು ಪ್ರಾಧಿಕಾರದ ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಿ ಅನುಮೋದಿಸಿದೆ.

ಸಭೆಯಲ್ಲಿ ನವನಗರದ ಪ್ರವೇಶ ಮಾರ್ಗದಲ್ಲಿ ವಿಶೇಷವಾಗಿ ವಿದ್ಯಾಗಿರಿ ಭಾಗದ ರಸ್ತೆ ಅಗಲೀಕರಣದ ಕೆಲಸದಲ್ಲಿ ಖಾಸಗಿ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಕಾಸಟ, ಡಾ.ಕೆರೂಡಿ, ಸೋನಾರ, ಬಲ್ಮಿ, ದೊಡ್ಡಮನಿ ಅವರ ಜಮೀನುಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸ್ವಾಧೀನಪಡಿಸಿಕೊಳ್ಳುವಾಗ ಉಂಟಾಗಿರುವ ತಾಂತ್ರಿಕ ತೊಂದರೆಗಳನ್ನು ಸಭೆಯಲ್ಲಿ ವಿವರಿಸಲಾಯಿತು. ಒಪ್ಪಂದದ ಐ ತೀರ್ಪುನ್ನು ಜಾರಿಗೊಳಿಸುವುದು ಹಾಗೂ ಸ್ವಾಧೀನಪಡಿಸಿಕೊಂಡ ಪ್ರಮಾಣದಲ್ಲಿ ನಿವೇಶನಗಳನ್ನು ಮಾತ್ರ ನೀಡಲು ಸಭೆ ಒಪ್ಪಿಗೆ ಸೂಚಿಸಿತು.

ಅಧಿಕಾರಿಗಳು ಅಂತಹ ಖಾಸಗಿ ಜಮೀನುಗಳ ಮಾಲೀಕರೊಂದಿಗೆ ಮಾತುಕತೆ ನಡೆಸಬಹುದು. ನ್ಯಾಯಾಲಯದಲ್ಲಿ ಕೆಲ ಜಮೀನುಗಳ ಸ್ವಾಧೀನಪಡಿಸಿಕೊಳ್ಳಲು ತಡೆಯಾಜ್ಞೆ ಇದೆ, ತಡೆಯಾಜ್ಞೆ ವಿವಾದವನ್ನು ಈ ಜಾಗೆಗಳಿಗೆ ಮಾತ್ರ ಸಂಧಾನಕ್ಕೆ ಬಳಸುವ ನಡೆಸುವ ಬಗ್ಗೆ ಸಹ ಪರಿಶೀಲಿಸಬೇಕು ಎಂದು ತಿಳಿಸಲಾಯಿತು.
ಇನ್ನು ಪ್ರಾಧಿಕಾರದ ನಿಯಮ, ಅನುಮತಿ ಮೀರಿ ಅನ್ಯ ಉದ್ದೇಶಕ್ಕೆ ಕಟ್ಟಡಗಳನ್ನು ಬಳಕೆ ಮಾಡಿದವ ವಿರುದ್ಧ ನೋಟಿಸ್ ನೀಡಲು ಸಭೆ ನಿರ್ಧರಿಸಿತು. ಪ್ರಾಧಿಕಾರದ ಅಧ್ಯಕ್ಷರಿಗೆ ನೂತನ ವಾಹನ ಖರೀದಿಸಲು ಸಹ ಸಭೆ ಒಪ್ಪಿಗೆ ಸೂಚಿಸಲಾಯಿತು. ನ್ಯಾಯವಾದಿ ಎಸ್.ಕೆ. ಯಡಹಳ್ಳಿ ಅವರು ಪ್ರಾಧಿಕಾರದ ಕಾನೂನು ಸಲಹೆಗಾರರಾಗಿ ಮತ್ತೊಂದು ಅವಧಿಗೆ ನೇಮಕಗೊಂಡರು. ಸಭೆ ಇದಕ್ಕೆ ಒಪ್ಪಿಗೆ ನೀಡಿತು.

ಸಭೆಯಲ್ಲಿ ಪುನರ್ವಸತಿ ಅಧಿಕಾರಿಗಳು, ಬಿಟಿಡಿಎ ತಾಂತ್ರಿಕ ಅಧಿಕಾರಿಗಳು ನಿರ್ಮಾಣ ಕಾಮಗಾರಿ, ಮೂಲಸೌಕರ್ಯ, ನಿವೇಶನ ಹಂಚಿಕೆಯ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.ಸದಸ್ಯ ಬಸವರಾಜ ಬದಾಮಿ ನಿವೇಶನ ಹಂಚಿಕೆಯಲ್ಲಿ ಅಧಿಕಾರಿಗಳು ಅನುಸರಿಸಬೇಕಾದ ಮಾನದಂಡಗಳ ಕುರಿತು ವಿವರಣೆ ನೀಡಿದರು.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಇಂಜನಿಯರ್ ಆಗಿ ಅಧಿಕಾರ ಸ್ವೀಕರಿಸಿದ ಅಶೋಕ ವಾಸನದ, ನಗರ ಯೋಜನಾ ಪ್ರಾಧಿಕಾರದ ಸಹಾಯಕಿ ನಿರ್ದೇಶಕಿ ರಂಜಣಗಿ, ಪುನರ್ವಸತಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಮಸ್ಯೆಗಳಿಗೆ ಸ್ಪಂದಿಸಿ
ಸಭೆಯಲ್ಲಿ ಬಿಟಿಡಿಎ ಅಧ್ಯಕ್ಷ ಎಚ್.ವೈ. ಮೇಟಿ ಮಾತನಾಡಿ, ಪ್ರತಿನಿತ್ಯ ನೂರಾರು ಸಂತ್ರಸ್ತರು ಪ್ರಾಧಿಕಾರಕ್ಕೆ ತಮ್ಮ ಸಮಸ್ಯೆ ಹೊತ್ತು ಬರುತ್ತಾರೆ. ಯಾವುದೇ ಕಾರಣಕ್ಕೂ ಅವರಿಗೆ ತೊಂದರೆ ಕೊಡಬಾರದು. ಸಮಸ್ಯೆ ಆಲಿಸಿ ಕೂಡಲೇ ಬಗೆಹರಿಸಬೇಕು. ಕೆಲಸದಲ್ಲಿ ವಿಳಂಬ ನೀತಿ ಅನುಸರಿಸುವುದು ಸಲ್ಲ ಎಂದು ಅಧಿಕಾರಿಗಳಿಗೆ ಹೇಳಿದರು.

491 ಕೋಟಿ ರೂ. ಕ್ರಿಯಾಯೋಜನೆ..
ಮಾಜಿ ಸಚಿವ ಎಚ್.ವೈ.ಮೇಟಿ ಅಧಿಕಾರ ಸ್ವೀಕರಿಸಿದ ದಿನ ನಡೆದಿದ್ದ ಸಭೆಯಲ್ಲಿ ಪ್ರಸಕ್ತ ಹಣಕಾಸು ವರ್ಷಕ್ಕಾಗಿ ಸಿದ್ದಪಡಿಸಲಾಗಿರುವ 491 ಕೋಟಿ ರೂ. ಕ್ರಿಯಾಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂಬುದನ್ನು ಅಧಿಕಾರಿಗಳಿಗೆ ಮೇಟಿ ವಿವರಿಸಿದರು.

ಮಾಧ್ಯಮಗಳಿಂದ ದೂರ
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ನಡೆಸುವ ಸಭೆ ಬಗ್ಗೆ ಹಾಗೂ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿಲ್ಲ ಎನ್ನುವ ಕೂಗು ಕೇಳಿ ಬಂದಿದೆ. ಸಂತ್ರಸ್ತರಿಗಾಗಿ ತೆಗೆದುಕೊಂಡ ತೀರ್ಮಾನಗಳು ಬಹಿರಂಗ ಪಡಿಸುತ್ತಿಲ್ಲ. ಅಲ್ಲದೆ ಮಾಧ್ಯಮಗಳಿಂದಲೂ ಪ್ರಾಧಿಕಾರ ದೂರ ಉಳಿಯುತ್ತಿವೆ. ಇದರ ಹಿಂದಿನ ಗುಟ್ಟು ಎನ್ನುವ ಪ್ರಶ್ನೆ ಕಾಡುತ್ತಿದೆ.