ಗಿಡಗಳ ಸಂರಕ್ಷಣೆಗೆ ತ್ಯಾಜ್ಯ ದ್ರವ ಬಳಕೆ

ಸಂತೋಷ ದೇಶಪಾಂಡೆ

ಬಾಗಲಕೋಟೆ: ತೀವ್ರ ಬಿಸಿಲಿಗೆ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಪ್ರಾಣಿ ಪಕ್ಷಿಗಳಿಗೂ ನೀರಿನ ಅಭಾವ ಕಾಡತೊಡಗಿದೆ. ಹಸಿರು ಮಾಯವಾಗುತ್ತಿರುವುದೇ ಇದಕ್ಕೆಲ್ಲ ಕಾರಣ. ಗಿಡಮರಗಳನ್ನು ಉಳಿಸಿ ಬೆಳೆಸಿ ಎನ್ನುವ ಮಾತುಗಳು ನಿತ್ಯ ಎಲ್ಲೆಡೆ ಪ್ರತಿಧ್ವನಿಸುತ್ತಿವೆ.

ಇದಕ್ಕೆ ಪೂರಕ ಎನ್ನುವಂತೆ ಇದೀಗ ನೀರಿಲ್ಲದೆ ಬಾಡುತ್ತಿರುವ ಸಸಿಗಳಿಗೆ ನೀರುಣಿಸುವ ಕಾರ್ಯಕ್ಕೆ ಬಾಗಲಕೋಟೆ ನಗರಸಭೆ ಮುಂದಾಗಿದೆ. ಬಾಗಲಕೋಟೆ ಸೋಷಿಯಲ್ ವರ್ಕರ್ಸ್‌ ಕಾರ್ಯಕರ್ತರು ಇದಕ್ಕೆ ಕೈ ಜೋಡಿಸಿದ್ದಾರೆ.

ಬಾಡುತ್ತಿರುವ 2500 ಸಸಿಗಳು !
ನಗರದ ಹೊರವಲಯದಲ್ಲಿರುವ ನಗರಸಭೆ ಘನತ್ಯಾಜ್ಯ ವಿಲೇವಾರಿ ಘಟಕ ಸಮೀಪದ ನಾಲ್ಕು ಎಕರೆ ವಿಸ್ತೀರ್ಣದಲ್ಲಿ ಅರಣ್ಯ ಇಲಾಖೆ ಸಹಕಾರದೊಂದಿಗೆ 2017ರಲ್ಲಿ ಬೇವು 1800, ಅರಳಿ 200, ಆಲದ ಗಿಡಗಳು 200 ಸೇರಿ ವಿವಿಧ ಜಾತಿಯ ಪರಿಸರಕ್ಕೆ ಅನುಕೂಲವಾಗುವ 2500 ಸಸಿಗಳನ್ನು ಬಾಗಲಕೋಟೆ ಸೋಷಿಯಲ್ ವರ್ಕರ್ಸ್‌ ತಂಡ ಹಾಗೂ ನಗರಸಭೆ ಸಿಬ್ಬಂದಿ ನೆಟ್ಟಿದ್ದರು. ಎರಡು ವರ್ಷಗಳಿಂದ ಉತ್ತಮವಾಗಿ ಬೆಳೆದಿದ್ದ ಇವು ಈ ಬಾರಿ ಭೀಕರ ಬರ ಹಾಗೂ ಬಿಸಿಲಿನ ತಾಪಕ್ಕೆ ನಲುಗಿ ಬೇರು ಸಮೇತ ಒಣಗುತ್ತಿವೆ.
ತಾವೇ ನೆಟ್ಟ ಗಿಡಮರಗಳು ಕಣ್ಣು ಮುಂದೆಯೇ ಕಮರಿ ಹೋಗುತ್ತಿರುವುದನ್ನು ನೋಡಿದ ನಗರಸಭೆ ಸಿಬ್ಬಂದಿ, ಬಿಎಸ್‌ಡಬ್ಲ್ಯು ಕಾರ್ಯಕರ್ತರು ಮಮ್ಮಲ ಮರುಗುವಂತಾಗಿತ್ತು. ಜೂನ್ ತಿಂಗಳವರೆಗೆ ಇವುಗಳನ್ನು ಬದುಕಿಸಿದರೆ ಮುಂದೆ ವರುಣ ದೇವನ ಕೃಪೆ ಸಿಗಲಿದೆ ಎನ್ನುವ ಆಶಯದೊಂದಿಗೆ ನೀರುಣಿಸುವ ವಿಶೇಷ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ತ್ಯಾಜ್ಯವೇ ಜೀವಜಲ!
ಹಳೇ ಬಾಗಲಕೋಟೆಯಿಂದ ಪ್ರತಿದಿನ 5 ಮಿಲಿಯನ್ ಲೀಟರ್ ದ್ರವರೂಪದ ತ್ಯಾಜ್ಯ ಸಂಗ್ರಹವಾಗುತ್ತದೆ. ಇದನ್ನು ನಗರಸಭೆ ಸ್ಥಾಪಿಸಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಸ್ಕರಣೆ ಮಾಡಿ ಅಕ್ಕಪಕ್ಕದ ರೈತರ ಜಮೀನುಗಳಿಗೆ ಒದಗಿಸಲಾಗುತ್ತಿತ್ತು. ಇದೀಗ ಬಾಡುತ್ತಿರುವ ಸಸಿಗಳಿಗೆ ಟ್ಯಾಂಕರ್ ಮೂಲಕ ದ್ರವರೂಪದ ತ್ಯಾಜ್ಯ ಹಾಕಲಾಗುತ್ತಿದೆ. ಜತೆಗೆ ಬಿಎಸ್‌ಡಬ್ಲ್ಯು ಕಾರ್ಯಕರ್ತರು ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಹೀಗಾಗಿ ಸಸಿಗಳಿಗೆ ಮರುಹುಟ್ಟು ಸಿಕ್ಕಂತಾಗಿದೆ. ನಗರಸಭೆ ಹಾಗೂ ಸಾಮಾಜಿಕ ಕಾರ್ಯಕರ್ತರು ಕೈಗೊಂಡ ಈ ಮಾದರಿ ಸೇವೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಬಿಸಿಲಿನ ತಾಪದಿಂದ ನೂರಾರು ಸಸಿಗಳು ಬಾಡುತ್ತಿದ್ದವು. ಇದಕ್ಕೇನಾದರೂ ಮಾಡಬೇಕೆನ್ನುವ ಆಲೋಚನೆ ಇತ್ತು. ಹೀಗಾಗಿ ಪ್ರತಿದಿನ ಸಂಗ್ರಹವಾಗುವ ದ್ರವರೂಪದ ತ್ಯಾಜ್ಯವನ್ನು ಅವುಗಳಿಗೆ ಹಾಕುತ್ತಿದ್ದೇವೆ. ನಾಲ್ಕು ದಿನಗಳಿಂದ ನಡೆಯುತ್ತಿರುವ ಈ ಕಾರ್ಯ ತೃಪ್ತಿ ತಂದಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ.
– ಹನುಮಂತ ಕಲಾದಗಿ ನಗರಸಭೆ ಪರಿಸರ ಅಭಿಯಂತರ

ಎರಡು ವರ್ಷದ ಹಿಂದೆ 2500 ವಿವಿಧ ಸಸಿಗಳನ್ನು ನೆಟ್ಟಿದ್ದೇವು. ಬಿಸಿಲಿನ ತಾಪಕ್ಕೆ ಬಾಡುತ್ತಿದ್ದವು. ಈ ಕುರಿತು ನಗರಸಭೆಗೆ ಮನವಿ ಮಾಡಿ ನೀರುಣಿಸುವ ಕಾರ್ಯ ಆರಂಭಿಸಿದ್ದೇವೆ. ಜತೆಗೆ ಸ್ವಚ್ಛತೆಯನ್ನೂ ಕೈಗೊಳ್ಳಲಾಗಿದೆ.
– ಚಂದ್ರಶೇಖರ ಶೆಟ್ಟಿ ಬಿಎಸ್‌ಡಬ್ಲ್ಯು ಹಿರಿಯ ಕಾರ್ಯಕರ್ತ

Leave a Reply

Your email address will not be published. Required fields are marked *