ಸೈಕ್ಲಿಂಗ್​ನಲ್ಲಿ ಮಿಂಚಿದ ಅವಳಿ ಜಿಲ್ಲೆ ಪಟುಗಳು

ಬಾಗಲಕೋಟೆ: ಸೈಕ್ಲಿಂಗ್ ಕ್ರೀಡೆಯಲ್ಲಿ ವಿಜಯಪುರ- ಬಾಗಲಕೋಟೆ ಜಿಲ್ಲೆಯ ಸೈಕ್ಲಿಂಗ್ ಪ್ರತಿಭೆಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿ ದೇಶದಲ್ಲಿ ಛಾಪು ಮೂಡಿಸಿದ್ದಾರೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ಹಮ್ಮಿಕೊಂಡ 11ನೇ ರಾಜ್ಯ ಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್​ಷಿಪ್ ಆಯ್ಕೆ ಪ್ರಕ್ರಿಯೆ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಅನೇಕ ದೇಸಿ ಕ್ರೀಡೆಗಳು ಅಳಿವಿನಂಚಿನಲ್ಲಿವೆ. ಆದರೆ, ಸೈಕ್ಲಿಂಗ್ ಮಾತ್ರ ಇಂದಿಗೂ ಮಹತ್ವ ಕಳೆದುಕೊಂಡಿಲ್ಲ. ಸೈಕ್ಲಿಂಗ್ ಹವ್ಯಾಸವಾಗಿಸಿಕೊಂಡ ಕ್ರೀಡಾಪಟುಗಳು ಸಾಧನೆಗೈದು ಅನೇಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸೈಕ್ಲಿಂಗ್ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ ಯಾಗಿದ್ದು, ಪ್ರತಿಯೊಬ್ಬರೂ ಸೈಕ್ಲಿಂಗ್ ಅಭ್ಯಾಸ ಮಾಡಬೇಕು ಎಂದರು.

ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಶ್ರೀಶೈಲ ಕುರಣಿ ಮಾತನಾಡಿ, ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪಿಯನ್​ಷಿಪ್ ಆಯ್ಕೆ ಪ್ರಕ್ರಿಯೆಯಲ್ಲಿ 16 ವೈಯಕ್ತಿಕ ಹಾಗೂ 10 ಗುಂಪು ಸ್ಪರ್ಧೆಗಳಿದ್ದು, 93 ಬಾಲಕರು ಹಾಗೂ 46 ಬಾಲಕಿಯರು ಸೇರಿ 129 ಸೈಕ್ಲಿಂಗ್ ಪಟುಗಳು ಭಾಗವಹಿಸಿದ್ದಾರೆ. ಆಯ್ಕೆಯಾದ ಕ್ರೀಡಾಪಟುಗಳು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಲಿದ್ದಾರೆ. ಸೈಕ್ಲಿಂಗ್​ನಲ್ಲಿ ಬಾಗಲಕೋಟೆ ಜಿಲ್ಲೆ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿ ಯೇಷನ್ ಅಧ್ಯಕ್ಷ ಶ್ರೀಧರ ಗೋರೆ, ಉಪಾಧ್ಯಕ್ಷ ಆರ್.ಎಚ್. ಪೂಜಾರ, ಜಿಲ್ಲಾಧ್ಯಕ್ಷ ಯಂಕಪ್ಪ ಎಂಟೆತ್ತ ಇತರರು ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪಿ.ಎಂ. ಸರಶೆಟ್ಟಿ ಸ್ವಾಗತಿಸಿದರು.