ಕೆಟ್ಟ ಆಚರಣೆಗಳಿಗೆ ಕಡಿವಾಣ ಅವಶ್ಯ

ಬಾಗಲಕೋಟೆ: ದೇವದಾಸಿ ಪದ್ಧತಿಗೆ ಕಾನೂನು ಮೂಲಕ ಕೊನೆ ಹಾಡಲಾಗಿದೆ. ಸಾಮಾಜಿಕವಾಗಿ ಇದಕ್ಕೆ ಸಂಪೂರ್ಣ ಕಡಿವಾಣ ಬೀಳಬೇಕು. ಜತೆಗೆ ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸುವುದು ಅಗತ್ಯವಿದೆ. ಕಾರ್ಪೋರೇಟ್ ಕ್ಷೇತ್ರದ ಖಾಸಗಿ ಕಂಪನಿಗಳ ಸಾಮಾಜಿಕ ಸೇವಾ ನಿಧಿ ಬಳಕೆಯಾಗಬೇಕು ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದಕುಮಾರ ಹೇಳಿದರು.

ನವನಗರದ ಕಲಾಭವನದಲ್ಲಿ ಶನಿವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಉಚ್ಚ ನ್ಯಾಯಾಲಯ ಕಾನೂನು ಸೇವೆಗಳ ಸಮಿತಿ, ಜಿಲ್ಲಾ ನ್ಯಾಯಾಂಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ದೇವದಾಸಿ ಮಹಿಳೆಯರ ರಕ್ಷಣೆ ಮತ್ತು ಪುನರ್ವಸತಿ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವೀಯ ಧರ್ಮ ಪರಿಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ. ದೇವದಾಸಿ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಅವರಿಗೆ ಎಲ್ಲರಂತೆ ಬದುಕು ಕಟ್ಟಿ ೊಡುವ ಕಾರ್ಯಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅನೀಲ ಕಟ್ಟಿ ಮಾತನಾಡಿ, ದೇವದಾಸಿ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕೆನ್ನುವುದು ಎಲ್ಲರ ಆಶಯವಾಗಿದೆ. ದೇವಿ ಹೆಸರಿನಲ್ಲಿ ತಾಳಿ ಕಟ್ಟುವುದು, ಮುತ್ತು ಕಟ್ಟುವುದು ಸೇರಿ ನಾನಾ ಹೆಸರಿನಲ್ಲಿ ಆಚರಣೆಗಳು ನಡೆಯುತ್ತ ಬಂದಿವೆ. ಇಂದು ಇದಕ್ಕೆಲ್ಲ ಮುಕ್ತಿ ದೊರೆಯಬೇಕು. ಇವುಗಳ ಹೆಸರಿನಲ್ಲಿ ಆಗುತ್ತಿರುವ ಹೆಣ್ಣು ಮಕ್ಕಳ ಶೋಷಣೆಗೆ ಕೊನೆ ಹಾಡಬೇಕಿದೆ ಎಂದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವಕುಮಾರ ಹಂಚಾಟೆ ಮಾತನಾಡಿ, ಹಿಂದೆ ಆಗಿರುವುದನ್ನು ಬಿಟ್ಟು ಮುಂದೆ ಆಗದಂತೆ ಎಚ್ಚರಿಕೆ ವಹಿಸೋಣ. ಸಾಮಾಜಿಕ ಅನಿಷ್ಟ ಆಚರಣೆಗಳನ್ನು ಸಂಪೂರ್ಣವಾಗಿ ನಿಲ್ಲಿಸೋಣ. ಪ್ರಾಧಿಕಾರ ಸದಾ ದೇವದಾಸಿಯರ ಸಹಾಯಕ್ಕೆ ನಿಲ್ಲಲಿದೆ ಎಂದು ಅಭಯ ನೀಡಿದರು.

ಜಿಲ್ಲಾಧಿಕಾರಿ ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಪಂ ಸಿಇಒ ಗಂಗೂಬಾಯಿ ಮಾನಕರ, ವಕೀಲರ ಸಂಘದ ಅಧ್ಯಕ್ಷ ಸಿ.ಬಿ.ಪಾಟೀಲ ಸೇರಿದಂತೆ ಇತರರು ಇದ್ದರು.

ಸಾಮಾಜಿಕ ಸೇವಾ ನಿಧಿಯಿಂದ ಪ್ರತಿಯೊಬ್ಬ ದೇವದಾಸಿ ಮಹಿಳೆಗೂ 10 ಸಾವಿರ ರೂ. ಮಾಸಾಶನ ನೀಡಬಹುದು. ಅವರ ಮಕ್ಕಳಿಗಾಗಿಯೇ ಪ್ರತೆೃೀಕ ಶಾಲೆ, ಕಾಲೇಜು ಆರಂಭಿಸಬಹುದು. ಎರಡು ವರ್ಷ ಶ್ರಮಪಟ್ಟರೆ ಸಾಕು. ಈ ಪದ್ಧತಿಯನ್ನು ಬೇರುಮಟ್ಟದಿಂದ ನಿರ್ಮೂಲನೆ ಮಾಡಲು ಸಾಧ್ಯವಿದೆ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು.
ಅರವಿಂದಕುಮಾರ, ಹೈಕೋರ್ಟ್ ನ್ಯಾಯಮೂರ್ತಿ