ಕೋಟೆನಾಡಲ್ಲಿ ತ್ರಿವಿಧ ದಾಸೋಹಿಗೆ ನಮನ

ಬಾಗಲಕೋಟೆ:ತ್ರಿವಿಧ ದಾಸೋಹಿ, ನಡೆದಾಡುವ ದೇವರು ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗೆ ಜಿಲ್ಲಾದ್ಯಂತ ನಮನ ಸಲ್ಲಿಸಲಾಯಿತು.

ಶಾಲೆ, ಕಾಲೇಜು, ಸಂಘ-ಸಂಸ್ಥೆಗಳು ಸೇರಿ ಕೋಟೆನಾಡಿನ ಪ್ರಮುಖ ವೃತ್ತ, ರಸ್ತೆಗಳಲ್ಲಿ ಶಿವಕುಮಾರ ಸ್ವಾಮೀಜಿ ಭಾವಚಿತ್ರವಿರಿಸಿ ಪೂಜಿಸಲಾಯಿತು.

ಬಾಗಲಕೋಟೆ ನಗರ ಸೇರಿ ಬೀಳಗಿ, ಜಮಖಂಡಿ, ಹುನ್ನೂರ, ರಬಕವಿ-ಬನಹಟ್ಟಿ, ತೇರದಾಳ, ಮುಧೋಳ, ಲೋಕಾಪುರ, ಕಲಾದಗಿ, ಬಾದಾಮಿ, ಕೆರೂರ, ಕಮತಗಿ, ಹುನಗುಂದ, ಇಳಕಲ್ಲ ಭಾಗದಲ್ಲಿ ಸಿದ್ಧಗಂಗಾ ಶ್ರೀಗಳಿಗೆ ನಮನ ಸಲ್ಲಿಸಲಾಯಿತು. ಶ್ರೀಗಳ ಮಾಡಿದ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಲಾಯಿತು. ಸಿದ್ಧಗಂಗಾ ಮಠದಲ್ಲಿ ಅಕ್ಷರ ಕಲಿತ ಜಿಲ್ಲೆಯ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು, ಅಪಾರ ಭಕ್ತರು ಶ್ರೀಗಳ ಲಿಂಗೈಕ್ಯ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ

ರಾತ್ರಿ ತುಮಕೂರಿನತ್ತ ಪ್ರಯಾಣ ಬೆಳೆಸಿ ಲಿಂಗ ಶರೀರದ ದರ್ಶನ ಪಡೆದರು.

ಕೋಟೆನಗರದಲ್ಲಿ ಶ್ರದ್ಧಾಂಜಲಿ: ಬಾಗಲಕೋಟೆ ನಗರದ ವಿವಿಧೆಡೆ ಸಿದ್ಧಗಂಗಾ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘ, ಸಂಸ್ಥೆಗಳು, ವಿವಿಧ ಕಚೇರಿಗಳು ಹಾಗೂ ಪ್ರಮುಖ ವೃತ್ತಗಳಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು.