ಮೂರು ಶಾಲೆಗಳ ಶಿಕ್ಷಕರಿಗೆ ನೋಟಿಸ್!

ಬಾಗಲಕೋಟೆ: ಶಾಲೆ ಅವಧಿಯಲ್ಲಿ ಶಾಲೆಗೆ ಬೀಗ ಹಾಕಿರುವುದು, ಸಮಾವೇಶ ಇದೆ ಎಂದು ಶಾಲೆ ಎಲ್ಲ ಶಿಕ್ಷಕರು ಶಾಲೆ ಬಿಟ್ಟು ಹೋಗಿರುವುದು ಹಾಗೂ ಕಲಿಕೆ ಗುಣಮಟ್ಟ ಸರಿ ಇರಲಿಲ್ಲ ಎನ್ನುವ ಕಾರಣಕ್ಕೆ ಬಾಗಲಕೋಟೆ ತಾಲೂಕಿನ ಮೂರು ಗ್ರಾಮಗಳ ಸರ್ಕಾರಿ ಶಾಲೆ ಶಿಕ್ಷಕ-ಶಿಕ್ಷಕಿಯರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಬುಧವಾರ ತಾಲೂಕಿನ ವಿವಿಧ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಆಕಸ್ಮಿಕ ಭೇಟಿ ನೀಡಿದಾಗ ಅಲ್ಲಿ ಕಂಡು ಬಂದ ಅವ್ಯವಸ್ಥೆಯಿಂದ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.

ತಾಲೂಕಿನ ಮನಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಆಯುಕ್ತರು ಭೇಟಿ ನೀಡಿದ ವೇಳೆ ಶಾಲೆಯನ್ನೇ ತೆರೆದಿರಲಿಲ್ಲ. ನಾಲ್ವರು ಶಿಕ್ಷಕರು ಇದ್ದರೂ ಬೀಗ ತೆರೆದಿರಲಿಲ್ಲ. ಅನೇಕ ಸಲ ಇದೇ ರೀತಿ ಶಿಕ್ಷಕರು ಶಾಲೆಗೆ ಬಾರದಿರುವ ಕಾರಣಕ್ಕೆ ಬೀಗ ಬಿದ್ದಿರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ರಾಂಪುರ ಹೆಣ್ಣು ಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದಾಗ ಅಲ್ಲಿದ್ದ ನಾಲ್ವರು ಶಿಕ್ಷಕಿಯರು ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡಿರುವುದು ಕಂಡು ಬಂದಿತು. ಶಾಲೆ ಬಿಟ್ಟು ಹೀಗೆ ಸಾಮೂಹಿಕವಾಗಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಹ ತಪ್ಪು ಎಂದು ಆಯುಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೀತಿಮನಿ ಪುನರ್ ವಸತಿ ಕೇಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದ ವೇಳೆ ಶಿಕ್ಷಕರು ಕರ್ತವ್ಯದಲ್ಲಿ ಇದ್ದರು. ಈ ವೇಳೆ ಅಲ್ಲಿನ ಕಲಿಕಾ ಗುಣಮಟ್ಟ ಪರೀಕ್ಷಿಸಿದಾಗ ಮಕ್ಕಳ ಬೌದ್ಧಿಕ ಮಟ್ಟ ಅಧಿಕಾರಿಗಳಿಗೆ ತೃಪ್ತಿ ತರಲಿಲ್ಲ.

ಹೀಗಾಗಿ ಶಾಲೆಗೆ ಬಾರದೆ ಬೀಗ ಹಾಕಿದ್ದ ನಾಲ್ವರು ಶಿಕ್ಷಕರು, ಸೇವೆ ಬದಿಗೊತ್ತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ನಾಲ್ವರು ಶಿಕ್ಷಕಿಯರು ಹಾಗೂ ಗುಣಮಟ್ಟದ ಕಲಿಕೆಗೆ ಆದ್ಯತೆ ನೀಡದ ನಾಲ್ವರು ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಲು ಆಯುಕ್ತರು ಡಿಡಿಪಿಐ ಗೋನಾಳ ಹಾಗೂ ತಮಗೆ ಸೂಚಿಸಿದ್ದು, ಅವರಿಂದ ಉತ್ತರ ಪಡೆದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಬಿಇಒ ದೊಡ್ಡಬಸಪ್ಪ ನೀರಲಕೇರಿ ವಿಜಯವಾಣಿಗೆ ತಿಳಿಸಿದ್ದಾರೆ.