ಶಾಲಾ ಮಕ್ಕಳ ಸುರಕ್ಷತೆಗೆ ಒತ್ತು ನೀಡಿ

ಬಾಗಲಕೋಟೆ: ಶಾಲಾ ಮಕ್ಕಳ ಸುರಕ್ಷತೆ ಹಿತದೃಷ್ಟಿಯಿಂದ ಸರ್ಕಾರ ಹೊರಡಿಸಿರುವ ಆದೇಶ ಪಾಲನೆಯಲ್ಲಿ ಬೇಜವಾಬ್ದಾರಿತನ ಸಲ್ಲದು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಶಿಕ್ಷಣ ಸಂಸ್ಥೆ ಮುಖ್ಯಸ್ಥರಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ನೂತನ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರ ಜರುಗಿದ ಖಾಸಗಿ ಅನುದಾನ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ಸುರಕ್ಷತೆಗೆ ಸುಪ್ರೀಂಕೋರ್ಟ್ ವಿಶೇಷ ಆದೇಶ ಹೊರಡಿಸಿದ್ದು, ಕಾನೂನು ಪಾಲನೆಗೆ ಎಲ್ಲರೂ ಕೈ ಜೋಡಿಸಬೇಕು. ಶಾಲಾ ಸಂಸ್ಥೆಯ ಮುಖ್ಯಸ್ಥರು ಎಷ್ಟೇ ಜಾಗರುಕತರಾಗಿದ್ದರೂ ಸಿಬ್ಬಂದಿ ತಪ್ಪಿನಿಂದ ತೊಂದರೆಯಾಗುತ್ತಿದೆ ಎಂದರು.

ಶಿಕ್ಷಣ ವೃತ್ತಿ ಎಂದರೆ ಕತ್ತಲಲ್ಲಿರುವ ವ್ಯಕ್ತಿಗೆ ಬೆಳಕು ತೋರುವ ಕಾರ್ಯವಾಗಿದ್ದು, ಇದು ನೌಕರಿ ಎಂದು ತಿಳಿಯದೆ ಸೇವಾ ಮನೋಭಾವನೆಯಿಂದ ಕಾರ್ಯ ಮಾಡುವ ಮೂಲಕ ಪ್ರತಿಯೊಂದು ಮಗುವನ್ನು ತಮ್ಮ ಮಗು ಎಂದು ಭಾವಿಸಬೇಕು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಹೊರಡಿಸಿದ ಆದೇಶವನ್ನು ಆಯಾ ಶಾಲೆಯಲ್ಲಿ ಪಾಲಕರಿಗೆ ಕಾಣುವಂತೆ ಮಾಹಿತಿ ಲಕ ಅಳವಡಿಸಬೇಕು ಎಂದರು.

ಕಳೆದ ವರ್ಷ ನಗರದಲ್ಲಿ ಖಾಸಗಿ ಶಾಲೆ ಮಕ್ಕಳ ವಾಹನ ಅಪಘಾತಕ್ಕೆ ಒಳಗಾಗಿ ಕೆಲವು ಮಕ್ಕಳು ಅಂಗವಿಕಲತೆ ಹೊಂದಿದರೆ, ಹಲವರು ಮೃತಪಟ್ಟರು. ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಪ್ರತಿಯೊಂದು ಖಾಸಗಿ ಸಂಸ್ಥೆ ಶಿಕ್ಷಣದ ಜತೆಗೆ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ನಿರ್ಲಕ್ಷೃ ತೋರಿದಲ್ಲಿ ಅಂತಹ ಸಂಸ್ಥೆಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತ್ವಾಡಮಠ ಮಾತನಾಡಿ, ಪ್ರತಿಯೊಂದು ಶಾಲೆ ವಾಹನದಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿಗೆ ಮಕ್ಕಳನ್ನು ಹಾಕಬಾರದು. ಸ್ಕೂಲ್ ಕ್ಯಾಬ್ ವ್ಯವಸ್ಥೆ ಇದ್ದು, ಅದನ್ನು ಅಳವಡಿಸಿಕೊಂಡು ಪಾಲಕರಿಗೆ ಮಾಹಿತಿ ನೀಡಬೇಕು. ವಾಹನದ ಗುಣಮಟ್ಟ ಪರೀಕ್ಷಿಸಿಕೊಂಡಿರಬೇಕು. ಕಾಲಕಾಲಕ್ಕೆ ವಾಹನ ಹಾಗೂ ಚಾಲಕನ ದಾಖಲೆಗಳು ನವೀಕರಣಗೊಂಡಿರಬೇಕು. ಶಾಲಾ ವಾಹನ ಹಳದಿ ಬಣ್ಣದಿಂದ ಕೂಡಿರಬೇಕು. ಶಾಲಾ ಆವರಣದಲ್ಲಿ ಶಿಸ್ತುಬದ್ಧವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಮಾತನಾಡಿ, ಮಕ್ಕಳ ಸುರಕ್ಷತೆಗೆ ಸರ್ಕಾರ ಹೊರಡಿಸಿದ ಆದೇಶದಲ್ಲಿರುವ ಮಾಹಿತಿ ವಿವರಿಸಿದರು. ವಾಹನಗಳ ಹಿಂದೆ ಹಾಗೂ ಮುಂದೆ ಶಾಲಾ ವಾಹನ ಎಂದು ಸ್ಪಷ್ಟವಾಗಿ ನಮೂದಿಸಬೇಕು. ವಾಹನದಲ್ಲಿ ಪ್ರಥಮ ಚಿಕಿತ್ಸೆ ಬಾಕ್ಸ್ ಇರಬೇಕು. ನಿರ್ದಿಷ್ಟ ಗುಣಮಟ್ಟದ ವೇಗದ ಗೌರನರ್ ಹೊಂದಿರಬೇಕು. ಕಿಟಕಿಗಳಲ್ಲಿ ಗ್ರಿಲ್ ಅಳವಡಿಸಿರಬೇಕು. ಬೆಂಕಿ ನಂದಿಸುವ ಅಗ್ನಿಶಾಮಕ ಇರಬೇಕು. ಶಾಲೆಯ ಹೆಸರು ದೂ.ಸಂ. ವಾಹನದ ಮೇಲೆ ಬರೆದಿರಬೇಕು. ಗುಣಮಟ್ಟದ ಬಾಗಿಲು ಹಾಗೂ ಬೀಗ ಅಳವಡಿಸಿರಬೇಕು. ವಾಹನಕ್ಕೆ ಒಬ್ಬ ಸಹಾಯಕ ಇರಬೇಕು. ವಿದ್ಯಾರ್ಥಿಗಳ ಪೋಷಕರಿಗೆ ವಾಹನದಲ್ಲಿನ ಸುರಕ್ಷತಾ ಕ್ರಮಗಳನ್ನು ತಿಳಿಸಬೇಕು. ವಾಹನ ಶಾಲೆಯಿಂದ ಬಿಟ್ಟ ಹಾಗೂ ಮರಳಿದ ಬಗ್ಗೆ ಮಂಡಳಿ ಮೇಲ್ವಿಚಾರಣೆ ನಡೆಸಬೇಕು. ಸರಕು ಸಾಗಣೆ ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಬಾರದು ಎಂದು ಸಲಹೆ ನೀಡಿದರು.

ಕರ್ನಾಟಕ ಶಿಕ್ಷಣ ಕಾಯ್ದೆ 1983ರಂತೆ ಪೋಷಕರಿಗೆ ವಂತಿಕೆ ನೀಡುವಂತೆ ಒತ್ತಾಯಿಸಿದ ಬಗ್ಗೆ ದೂರುಗಳು ಬಂದಲ್ಲಿ ಪರಿಶೀಲಿಸಲು ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರಕ್ಕೆ ಅಧಿಕಾರವಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿ.ಪಂ. ಸಿಇಒ, ಕಾರ್ಯನಿರ್ವಾಹಕ ಅಭಿಯಂತರನ್ನೊಳಗೊಂಡ ಪ್ರಾಧಿಕಾರ ರಚಿಸಲಾಗಿದ್ದು, ಈ ಪ್ರಾಧಿಕಾರದ ಮೂಲಕ ಡೊನೇಷನ್ ಹಾವಳಿ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಬಿ. ಪೂಜಾರಿ, ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲೆಯ ಖಾಸಗಿ ಅನುದಾನಿತ, ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಇದ್ದರು.

ಶುಲ್ಕ ಮಾಹಿತಿ ಲಕ ಹಾಕಿ
2014ರ ೆಬ್ರವರಿ 13ರಂದು ಹೈಕೋರ್ಟ್ ಹೊರಡಿಸಿದ ಆದೇಶದಲ್ಲಿ ಶಾಲಾ ಶುಲ್ಕ ಮಾತ್ರ ಪಡೆಯಬೇಕು ಎಂದು ಹೇಳಿದೆ. ಆದರೆ, ಕೆಲ ಶಿಕ್ಷಣ ಸಂಸ್ಥೆಗಳು ಅಭಿವೃದ್ಧ್ದಿ ಶುಲ್ಕವೆಂದು ಹೇಳಿ ಹೆಚ್ಚಿನ ಹಣ ಪಡೆಯುತ್ತಿರುವುದು ಕಂಡುಬಂದಿದೆ. ಸರ್ಕಾರದ ಆದೇಶದನ್ವಯ ಶಾಲಾ ಶುಲ್ಕದ ಮಾಹಿತಿ ನೋಟಿಸ್ ಬೋರ್ಡ್‌ನಲ್ಲಿ ಪ್ರದರ್ಶಿಸಬೇಕೆಂದು ಸೂಚಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಯ ಮಕ್ಕಳ ಸಾಗಣೆ ವಾಹನದ ಚಾಲಕನ ಬಗ್ಗೆ ಸಮಗ್ರ ಮಾಹಿತಿ ಪಡೆದಿರಬೇಕು. ಅವನ ವೈಯಕ್ತಿಕ ಹಾಗೂ ಖಾಸಗಿ ಹವ್ಯಾಸಗಳ ಬಗ್ಗೆ ವಿಚಾರಿಸಿ ನೇಮಿಸಿಕೊಳ್ಳಬೇಕು. ಈ ಹಿಂದೆ ಕೆಲವೊಂದು ವಿದ್ಯಾ ಸಂಸ್ಥೆಗಳ ಚಾಲಕರೇ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಪ್ರಕರಣಗಳು ಕಂಡುಬಂದಿವೆ. ಜಿಲ್ಲೆಯಲ್ಲೂ ಸಹ ಚಾಲಕರ ವಿಷಯ ಗಂಭೀರವಾಗಿ ಪರಿಗಣಿಸಲಾಗುತ್ತದೆ.
– ಅಭಿನವ ಖರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ