ಕಲ್ಲಹಳ್ಳಿಯಲ್ಲಿ ಸತ್ಯಕಾಮರ ಆರಾಧನೆ, ವಿಚಾರ ಸಂಕಿರಣ

ಬಾಗಲಕೋಟೆ: ಸತ್ಯಕಾಮ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಅ.20 ರಂದು ಜಿಲ್ಲೆಯ ಜಮಖಂಡಿ ತಾಲೂಕಿನ ಕಲ್ಲಹಳ್ಳಿಯ ಗ್ರಾಮದಲ್ಲಿ ಸುಮ್ಮನೆ ಧ್ಯಾನ ಮಂದಿರಲ್ಲಿ ಸತ್ಯಕಾಮರ ಆರಾಧನೆ ಅಂಗವಾಗಿ ರಾಷ್ಟ್ರೀಯತೆ ಮತ್ತು ಮಾಧ್ಯಮಗಳ ಕುರಿತು ವಿಚಾರ ಸಂಕಿರಣ, ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಗೆ ವರೆಗೆ ನಿರಂತರವಾಗಿ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರೀಯತೆಯ ಅಭಿವ್ಯಕ್ತಿಯಲ್ಲಿ ಮಾಧ್ಯಮಗಳ ಅಸ್ತಿತ್ವ ಮತ್ತು ಬದ್ಧತೆ ಕುರಿತು ಅಂಕಣಕಾರ ಪ್ರೀತಿ ನಾಗರಾಜ್ ವಿವರಿಸಲಿದ್ದಾರೆ. ಅಖಂಡ ಭಾರತದಲ್ಲಿ ಕಾಶ್ಮೀರ ಮತ್ತು ಮಾಧ್ಯಮಗಳ ವಿಷಯದ ಮೇಲೆ ಸಹನಾ ವಿಜಯಕುಮಾರ ಮಾತನಾಡಲಿದ್ದಾರೆ. ರಾಷ್ಟ್ರೀಯ ಮತ್ತು ಮಾಧ್ಯಮಗಳ ಬಿಕ್ಕಟ್ಟಿನ ಕುರಿತು ಹಿರಿಯ ಪತ್ರಕರ್ತ ಪದ್ಮರಾಜ್ ದಂಡಾವತಿ ಹಾಗೂ ರೋಹಿತ ಚಕ್ರತೀರ್ಥ, ಧರ್ಮಗಳು ಮತ್ತು ರಾಷ್ಟ್ರೀಯತೆ ಕುರಿತು ಮಲ್ಲೇಪುರಂ ವೆಂಕಟೇಶ, ವೇದ ಮುದ್ರಣ ಇತಿಹಾಸ ಕುರಿತು ಕವಿ ಆನಂದ ಝಂಜರವಾಡ ಮಾತನಾಡಲಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ ರಾವ್ ನೇತೃತ್ವದಲ್ಲಿ ಗಾನ-ಕಲಾ ಸಂಗಮ ಕಾರ್ಯಕ್ರಮ ನಡೆಯಲಿದ್ದು, ಅರ್ಚನಾ ಉಡುಪ, ಮನೋಜ್ ವಶಿಷ್ಠ, ಅರುಂಧತಿ ವಶಿಷ್ಠ, ಮಂಗಳಾ ರವಿ, ಡಾ.ಶಮಿತಾ ಮೇಲ್ನಾಡ್, ವಿನಯ ನಾಡಿಗ ಸಂಗೀತ ಸುಧೆ ಹರಿಸಲಿದ್ದಾರೆ. ಕಂಠನಾದಕ್ಕೆ ಚಿತ್ರಕಲಾವಿದ ಸೋಮು ಆನೆಕಲ್ ಕುಂಷ ಭಾಷ್ಯ ಮತ್ತು ಕಲಾವಿದ ಪ್ರಹ್ಲಾದ್ ಆಚಾರ್ಯ ಅವರು ಬೆರಳು ನೆರಳಿನಾಟ ಮತ್ತು ಗೊಂಬೆ ಮಾತು ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೃಷಿಕ ಮಹಾವೀರ ಅಜ್ಜಪ್ಪಗೋಳ ಅವರಿಗೆ 2018 ಸಾಲಿನ ಸತ್ಯಾಕಾಮ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.