More

    ಕೋಟೆನಗರಿಯಲ್ಲಿ ಆಕರ್ಷಕ ಪಥ ಸಂಚಲನ

    ಬಾಗಲಕೋಟೆ: ಸಂಕ್ರಾಂತಿ ಹಬ್ಬದ ಅಂಗವಾಗಿ ಆರ್‌ಎಸ್‌ಎಸ್ ಅಂಗ ಸಂಸ್ಥೆ ರಾಷ್ಟ್ರ ಸೇವಿಕಾ ಸಮಿತಿ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಸೇವಕಿಯರ ಘೋಷ ಸಹಿತ ಪಥ ಸಂಚಲನ ಆಕರ್ಷಕವಾಗಿ ಜರುಗಿತು.

    ಸಂಜೆ 4 ಗಂಟೆಗೆ ಚರಂತಿಮಠದಿಂದ ಆರಂಭಗೊಂಡ ಪಥ ಸಂಚಲನ ಬಸವೇಶ್ವರ ಕಾಲೇಜು ರಸ್ತೆ ಸೇರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಚರಂತಿಮಠದ ಮಂಟಪವನ್ನು ತಲುಪಿ ಸಮಾರೋಪಗೊಂಡಿತು. ಶ್ವೇತ ವರ್ಣದ ಚೂಡಿದಾರ, ಸೀರೆ ಮತ್ತು ಪದವೇಷ(ಬಿಳಿ ಷೂ ಮತ್ತು ಸಾಕ್ಸ್) ಧರಿಸಿದ್ದ ಸ್ವಯಂ ಸೇವಕಿಯರು ಗಾಂಭೀರ್ಯ ಹೆಜ್ಜೆ ಹಾಕಿ ಗಮನ ಸೆಳೆದರು. ರಸ್ತೆ ಬದಿ ನಿಂತಿದ್ದ ಜನಸ್ತೋಮ ಪುಷ್ಪಾರ್ಚನೆ ಮಾಡಿ ಸಂಭ್ರಮಿಸಿದರು.

    ರಾಷ್ಟ್ರ ಸೇವಿಕಾ ಸಮಿತಿ ಜಿಲ್ಲಾ ಕಾರ್ಯವಾಹಕಿ ಸಂಧ್ಯಾ ಕುಲಕರ್ಣಿ, ಬಾಗಲಕೋಟೆ ನಗರ ಕಾರ್ಯವಾಹಕಿ ಜ್ಯೋತಿ ಕದಾಂಪುರ, ಶಾಸಕ ವೀರಣ್ಣ ಚರಂತಿಮಠ, ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶಪ್ಪ ಜಿಗಜಿನ್ನಿ, ಆರ್‌ಎಸ್‌ಎಸ್ ಜಿಲ್ಲಾ ಪ್ರಮುಖ ಸಿ.ಎಸ್.ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕವಿತಾ ಹೊನ್ನಳ್ಳಿ ವರದಿ ಮಂಡಿಸಿದರು. ಪ್ರಿಯಾಂಕ ಕುಲಕರ್ಣಿ ಪ್ರಾರ್ಥಿಸಿದರು.

    ಪಥ ಸಂಚಲನಕ್ಕೆ ಇಡೀ ಬಾಗಲಕೋಟೆ ನಗರ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಎಲ್ಲೆಡೆ ಕೇಸರಿ ಬಾವುಟಗಳು ರಾರಾಜಿಸಿದವು. ರಸ್ತೆ, ಮನೆಗಳ ಮುಂದೆ ರಂಗೋಲಿ ಚಿತ್ತಾರ ಗಮನ ಸೆಳೆಯಿತು. ಬಾಗಲಕೋಟೆ, ಜಮಖಂಡಿ, ಇಳಕಲ್ಲ, ಮುಧೋಳ ಸೇರಿ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಕ್ಕೂ ಹೆಚ್ಚು ರಾಷ್ಟ್ರ ಸೇವಿಕಾ ಸಮಿತಿ ಸ್ವಯಂ ಸೇವಕಿಯರು ಭಾಗವಹಿಸಿದ್ದರು. ದೇಶಭಕ್ತರು, ಧಾರ್ಮಿಕ ಮುಖಂಡರು, ರಾಜ ಮಹಾರಾಜರು, ರಾಣಿಯರ ವೇಷಧಾರಿಯಲ್ಲಿದ್ದ ಚಿಣ್ಣರು ಗಣವೇಷಧಾರಿಗಳಿಗೆ ಪುಷ್ಪ ಚಿಂಚನಗೈಯುತ್ತ ಸ್ವಾಗತಿಸಿದ ಪರಿ ಕಣ್ಮನ ಸೆಳೆಯಿತು. ಬೋಲೋ ಭಾರತ ಮಾತಾಕೀ ಜೈ..ಮಾತಾ.. ಮಾತಾ.. ಭಾರತ ಮಾತಾ.., ಜೋರ್ ಸೇ ಬೋಲೋ, ಪ್ಯಾರ ಸೇ ಬೋಲೋ ಹಿಂದುಸ್ತಾನ, ಹಿಂದುಸ್ತಾನ..,ಜೈ ಜೈ ಶಿವಾಜಿ, ಜೈ ಜೈ ಭವಾನಿ… ವಂದೇ ಮಾತರಂ… ಘೋಷಣೆಗಳು ಪ್ರತಿಧ್ವನಿಸಿದವು.

    ಸ್ವಯಂ ರಕ್ಷಣೆಗೆ ತರಬೇತಿ
    ಚರಂತಿಮಠದಲ್ಲಿ ಜರುಗಿದ ಸಾರ್ವಜನಿಕ ಸಮಾರಂಭದಲ್ಲಿ ದಕ್ಷಿಣ ಮಧ್ಯ ಕ್ಷೇತ್ರದ ಶಾರೀರಿಕ ಪ್ರಮುಖರಾದ ಅಂಬಿಕಾ ನಾಗಭೂಷಣ ಮಾತನಾಡಿ, ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿದೆ. ಸಮಾಜವನ್ನು ಒಂದುಗೂಡಿಸುವಲ್ಲಿ ಅನೇಕ ಜನ ಸಂತರು, ಸ್ವಾಮೀಜಿಗಳು ಶ್ರಮಿಸಿದ್ದಾರೆ. ಶಂಕರಾಚಾರ್ಯರು ಕಾಲ್ನಡಿಗೆ ಮೂಲಕ ದೇಶವನ್ನು ಸಂಚರಿಸಿ ಆಧ್ಯಾತ್ಮಿಕ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದರು.

    1936ರಲ್ಲಿ ಸ್ಥಾಪನೆಯಾದ ರಾಷ್ಟ್ರ ಸೇವಿಕಾ ಸಮಿತಿ ದ್ವೇಷ ಸಾಧಿಸಲು ಹಾಗೂ ಯುದ್ಧಕ್ಕಾಗಿ ಮಹಿಳೆಯರಿಗೆ ದಂಡದ ಅಭ್ಯಾಸ ಮಾಡಿಸುತ್ತಿಲ್ಲ. ಸ್ವಯಂ ರಕ್ಷಣೆಗೆ ತರಬೇತಿ ನೀಡುತ್ತಿದೆ. ರಾಷ್ಟ್ರೀಯತೆ ಜಾಗೃತಿಗೊಳಿಸಲಾಗುತ್ತಿದೆ ಎಂದರು.

    ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಇಂದು ಮಹತ್ತರ ಸಾಧನೆ ಮಾಡುತ್ತಿದ್ದಾರೆ. ದೇಶಭಕ್ತಿ, ಸಂಸ್ಕಾರ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರ ಸೇವಿಕಾ ಸಮಿತಿ ಕೆಲಸ ಮಾಡುತ್ತಿದೆ. ಜವಳಿ ಇಲಾಖೆಯಲ್ಲಿ ಅನೇಕ ಯೋಜನೆಗಳಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಹಿಳೆಯರು ಕೂಡ ಉದ್ಯಮಿಗಳಾಗಿ ಹೊರ ಹೊಮ್ಮಬೇಕು.
    – ಭಾರತಿ ಬಿದರಿಮಠ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts