ನ್ಯಾಮಗೌಡರನ್ನು ಗೆಲ್ಲಿಸಿದರೆ ರಸ್ತೆಗೆ ಟಾರ್

<< ಜನರಿಗೆ ಷರತ್ತು ವಿಧಿಸಿದ ಡಿಸಿಎಂ ಡಾ. ಪರಮೇಶ್ವರ್ > ನೀತಿ ಸಂಹಿತೆ ಉಲ್ಲಂಘನೆ ಆರೋಪ >>

ಬಾಗಲಕೋಟೆ: ಹದಗೆಟ್ಟು ಹೋಗಿರುವ ಈ ರಸ್ತೆಗೆ ಟಾರ್ ಭಾಗ್ಯ ಕಲ್ಪಿಸುತ್ತೇನೆ. ಆದರೆ, ಒಂದು ಕಂಡಿಷನ್. ಅದು ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಅವರನ್ನು ಗೆಲ್ಲಿಸಿದರೆ ಮಾತ್ರ.

ಹೀಗಂತ ಹೇಳಿದ್ದು ಬೇರಾರೂ ಅಲ್ಲ, ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್. ಜಮಖಂಡಿ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಸಾವಳಗಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡುವಾಗ ಡಿಸಿಎಂ ಪರಮೇಶ್ವರ್ ಮತದಾರರಿಗೆ ಆಮಿಷ ಒಡ್ಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಜಮಖಂಡಿಯಿಂದ ಸಾವಳಗಿ ಗ್ರಾಮಕ್ಕೆ ತೆರಳಿದ ಡಿಸಿಎಂ ಪರಮೇಶ್ವರ್ ಅವರಿಗೆ ತೆಗ್ಗು-ದಿನ್ನೆಗಳಿಂದ ಕೂಡಿದ್ದ ರಸ್ತೆ ಕಂಡು ಮುಜುಗರ ಉಂಟು ಮಾಡಿತ್ತು. ಹೀಗಾಗಿ ಪ್ರಚಾರ ಭಾಷಣದಲ್ಲಿ ಇದನ್ನು ಉಲ್ಲೇಖಿಸಿದ ಅವರು, ಸಾವಳಗಿ-ಜಮಖಂಡಿ ರಸ್ತೆಗೆ ಮೂರು ತಿಂಗಳಲ್ಲಿ ಟಾರ್ ಹಾಕಿಸಿ ರಸ್ತೆ ಮಾಡಿ ಕೊಡುವುದು ಈ ಪರಮೇಶ್ವರ್ ಜವಾಬ್ದಾರಿ ಎಂದರು.

ಈ ವೇಳೆ ಜನರು ಚಪ್ಪಾಳೆ ತಟ್ಟುತ್ತಿದ್ದಂತೆ, ನೀವು ಬರೀ ಚಪ್ಪಾಳೆ ಹೊಡೆದರೆ ಆಗಲ್ಲ. ಇದಕ್ಕೆ ಕಂಡಿಷನ್… ಕಂಡಿಷನ್… ಕಂಡಿಷನ್… ಎಂದು ಮತ್ತೆ ಮತ್ತೆ ಹೇಳಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡರನ್ನು ಗೆಲ್ಲಿಸಬೇಕು. ನೀವು ಇಲ್ಲಿ ಲೀಡ್ ಕೊಡಲೇಬೇಕು. ಸರಿನಾ ? ಆಗಬಹುದಾ ? ನಮ್ಮದು ನಿಮ್ಮದು ವ್ಯವಹಾರ ಸರಿನಾ? ಈ ಅಗ್ರಿಮೆಂಟ್‌ಗೆ ಒಪ್ಪಿಗೆ ಇದೆಯಾ ಎಂದು ಕೇಳಿದರು. ಇದಕ್ಕೆ ಜನರು ಅಗ್ರಿಮೆಂಟ್ ಸರ್ ಎಂದಾಗ, ಆಯಿತು ಮೂರು ತಿಂಗಳಲ್ಲಿ ರಸ್ತೆ ಮಾಡಿಸಿ ಕೊಡುತ್ತೇನೆ ಎಂದು ಡಿಸಿಎಂ ಭರವಸೆ ನೀಡಿದರು.

ಈ ವೇಳೆ ವೇದಿಕೆಯಲ್ಲಿದ್ದ ಕೆಲ ಮುಖಂಡರು ಸರ್… ನೀತಿ ಸಂಹಿತೆ ಸರ್… ಎಂದಾಗ ಏ… ಬಿಡ್ರಯ್ಯ ನಿಮ್ದೊಳ್ಳೆ ಕಥೆ. ರಸ್ತೆ ನಿರ್ಮಿಸಲು ನಾವಿಲ್ಲಿ ಪಾಲಿಸಿ ಮಾಡುತ್ತಿಲ್ಲ. ಇರೋ ವಿಚಾರ ಹೇಳಿದ್ದು, ಅದಕ್ಕೇನು ತೊಂದರೆ ಅಂತ ಹೇಳಿ ತಮ್ಮ ಮಾತು ಮುಂದುವರಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಎಂ.ಬಿ. ಪಾಟೀಲ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *