ರಸ್ತೆ ಅಪಘಾತ ತಡೆಗೆ ಸೂಕ್ತ ಕ್ರಮ

ಬಾಗಲಕೋಟೆ: ಜಿಲ್ಲೆಯಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ಲಭ್ಯವಿರುವ ಅನುದಾನದಲ್ಲಿ ಅಪಘಾತ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜರುಗಿದ ರಸ್ತೆ ಸುರಕ್ಷತಾ ಸಪ್ತಾಹ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಅಪಘಾತ ವಲಯಗಳನ್ನು ಗುರುತಿಸಿ ಮಾಹಿತಿ ಪಡೆಯಬೇಕು. ನಂತರ ಅಪಘಾತ ತಡೆಗೆ ಲಭ್ಯವಿರುವ ಅನುದಾನದಲ್ಲಿ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.

ಎಸ್ಪಿ ಅಭಿನವ ಖರೆ ಮಾತನಾಡಿ, ರಸ್ತೆ ಅಪಘಾತವಾದ ಸಂದರ್ಭದಲ್ಲಿ ಹತ್ತಿರವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾಹಿತಿ ನೀಡುವ ಲಕಗಳನ್ನು ಹಾಕುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಂದ ಪಡೆದು ಮುಖ್ಯ ರಸ್ತೆಗಳಲ್ಲಿ ಫಲಕ ಅಳವಡಿಸಬೇಕು. ಇದರಿಂದ ಅಪಘಾತವಾದ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಲು ಅನುಕೂಲಕರವಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ನಡೆಯುತ್ತಿರುವ ವಲಯಗಳಲ್ಲಿ ಕೈಗೊಳ್ಳಲಾಗಿರುವ ಸುರಕ್ಷತಾ ಕಾಮಗಾರಿಗಳ ಮಾಹಿತಿ ನೀಡಬೇಕು. ರಸ್ತೆ ಅಪಘಾತವಾದಲ್ಲಿ ತಕ್ಷಣ 100 ನಂಬರ್‌ಗೆ ಕರೆಗಳು ಬರುತ್ತವೆ. ಆದ್ದರಿಂದ ರಸ್ತೆಗಳಲ್ಲಿ ಸಂಬಂಧಿಸಿದ ಆರೋಗ್ಯ ಕೇಂದ್ರಗಳ ಸಿಂಬಾಲ್ ಹಾಕಬೇಕು. ಅಪಘಾತವಾದ ರೋಗಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಫಲಕ ಹಾಕಬೇಕು ಎಂದರು.

ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಅಯ್ಯಪ್ಪ ನಾಲತ್ವಾಡಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಂತ ದೇಸಾಯಿ, ಉಪವಿಭಾಗಾಧಿಕಾರಿ ಎಚ್.ಜಯಾ ಇತರರು ಉಪಸ್ಥಿತರಿದ್ದರು.

ಸಭೆಯಲ್ಲಿ ಡಿಸಿ ಆರ್. ರಾಮಚಂದ್ರನ್ ಮಾತನಾಡಿ, ಲೋಕೋಪಯೋಗಿ ಇಲಾಖೆಯವರು ತಮ್ಮ ವ್ಯಾಪ್ತಿಗೆ ಬರುವ ರಸ್ತೆಗಳ ನಿರ್ವಹಣೆ ಮಾಡಬೇಕು. ಪ್ರತಿಯೊಂದು ವಾಹನಗಳು ನಿಯಮ ಪಾಲಿಸುತ್ತಿರುವ ಬಗ್ಗೆ ಪರಿಶೀಲಿಸಿ ಸೂಕ್ತ ಸೂಚನೆ ನೀಡಬೇಕು. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಪ್ರಯಾಣಿಕರನ್ನು ಹಾಕುತ್ತಿರುವ ಆಟೋಗಳಿಗೆ ವಾರ್ನಿಂಗ್ ನೀಡುವ ಮೂಲಕ ದಂಡ ಹಾಕಬೇಕು. ಪ್ರತಿಯೊಂದು ಆಟೋಗಳಲ್ಲಿ ಚಾಲಕರ ಮಾಹಿತಿಯನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು. 15 ವರ್ಷ ಮೇಲ್ಪಟ್ಟ ವಾಹನಗಳನ್ನು ನಿಷ್ಕ್ರಿಯಗೊಳಿಸಲು ಗುಣಮಟ್ಟ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಆರ್‌ಟಿಒ ಅಧಿಕಾರಿಗಳಿಗೆ ಸೂಚಿಸಿದರು.