ರಾಜೀನಾಮೆ ತಳಕು ಬಿಸಿಬಿಸಿ ಚರ್ಚೆಗೆ ಪುಳಕ

ಅಶೋಕ ಶೆಟ್ಟರ
ಬಾಗಲಕೋಟೆ: ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರ ರಾಜೀನಾಮೆ ಪರ್ವ ನಡೆದರೂ ಆ ಸುಳಿಯಲ್ಲಿ ಕೋಟೆನಾಡು ಬಾಗಲಕೋಟೆ ಜಿಲ್ಲೆಯ ಯಾರೊಬ್ಬರ ಹೆಸರು ಕೇಳಿ ಬಂದಿರಲಿಲ್ಲ. ಆದರೆ, ಗುರುವಾರ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಜಿಲ್ಲಾ ರಾಜಕಾರಣದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸ ಒದಗಿಸಿತು.

ದೃಶ್ಯ ಮಾಧ್ಯಮಗಳಲ್ಲಿ ಗುರುವಾರ ಸಂಜೆ ಆನಂದ ನ್ಯಾಮಗೌಡ ಸ್ಪೀಕರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನುವ ಸುದ್ದಿ ಬಿತ್ತರವಾಗುತ್ತಿದ್ದಂತೆ ಕಾಂಗ್ರೆಸ್ ವಲಯದಲ್ಲಿ ದಿಗ್ಭ್ರಮೆ ಮೂಡಿಸಿತು. ಜಮಖಂಡಿ ಉಪ ಚುನಾವಣೆ ನಡೆದು ಎಂಟು ತಿಂಗಳಷ್ಟೆ ಆಗಿದೆ. ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿರುವ ಆನಂದ ನ್ಯಾಮಗೌಡ ಹೀಗೇಕೆ ನಿರ್ಧಾರ ಮಾಡಿದರು ಎನ್ನುವ ಬಗ್ಗೆ ಪಕ್ಷದ ಕಾರ್ಯಕರ್ತರು ಚರ್ಚೆ ಮಾಡಲಾರಂಭಿಸಿ ದ್ದರು. ರಾಜೀನಾಮೆ ನೀಡುತ್ತಾರಂತೆ ಎನ್ನುವ ಸುದ್ದಿ ಸ್ವತಃ ಶಾಸಕ ಆನಂದ ನ್ಯಾಮಗೌಡ ಅವರನ್ನು ಬೆಚ್ಚಿಬೀಳಿಸಿತ್ತು.

ರಾಜೀನಾಮೆ ಬಗ್ಗೆ ಶಾಸಕ ನ್ಯಾಮಗೌಡ ಹೇಳಿದ್ದೇನು…?
ನಾನು ಬೆಂಗಳೂರಲ್ಲಿ ಇಲ್ಲ. ಜಮಖಂಡಿಯಲ್ಲಿ ಇದ್ದೇನೆ. ಬೆಳಗ್ಗೆಯಿಂದಲೂ ಅನೇಕರು ಈ ಬಗ್ಗೆ ಕೇಳುತ್ತಿದ್ದಾರೆ. ನಾನು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕನಸು ಹೊತ್ತುಕೊಂಡು ಶಾಸಕನಾಗಿದ್ದೇನೆ. ತಂದೆ ದಿ. ಸಿದ್ದು ನ್ಯಾಮಗೌಡ ಹಾಕಿಕೊಟ್ಟ ಹಾದಿಯಲ್ಲಿ ರಾಜಕಾರಣ ಮಾಡುತ್ತಿದ್ದೇನೆ. ತಂದೆಯವರ ರಾಜಕೀಯ ಗುರು ಬಂಗಾರಪ್ಪ ಕಾಂಗ್ರೆಸ್ ತೊರೆದರೂ ಪಕ್ಷದಲ್ಲಿ ಉಳಿದು ತಮ್ಮ ಮೌಲ್ಯ ಉಳಿಸಿಕೊಂಡು ಬಂದಿದ್ದರು. ಅದೇ ನನಗೆ ಮಾರ್ಗದರ್ಶಿ ಎಂದು ವಿಜಯವಾಣಿಗೆ ತಿಳಿಸಿದರು.

ಸದ್ಯದ ರಾಜಕೀಯ ಬೆಳವಣಿಗೆ ಬೇಸರ ತಂದಿದೆ. ಮತದಾರರ ತೀರ್ಮಾನಕ್ಕೆ ವಿರುದ್ಧವಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಖಡಕ್ಕಾಗಿ ಹೇಳಿದರು.

ಆಪರೇಷನ್ನೂ ಇಲ್ಲ, ರಿವರ್ಸು ಇಲ್ಲ
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಶಾಸಕರು ಎರಡು ಕ್ಷೇತ್ರಗಳಲ್ಲಿ ಮಾತ್ರ ಇದ್ದಾರೆ. ಬಾದಾಮಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಇರುವುದರಿಂದ ರಾಜೀನಾಮೆ ಪ್ರಶ್ನೆಯೇ ಬರಲ್ಲ. ಇನ್ನು ಜಮಖಂಡಿ ಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ ಇದ್ದಾರೆ.

ಸಿದ್ದು ನ್ಯಾಮಗೌಡ ಅವರ ಅಕಾಲಿಕ ನಿಧನದಿಂದಾಗಿ ಅವರ ಪುತ್ರ ಆನಂದ ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆಲುವು ಪಡೆದಿದ್ದಾರೆ. ಅವರ ಗೆಲುವಿಗೆ ಇಡೀ ಕಾಂಗ್ರೆಸ್ ಪಕ್ಷವೇ ಟೊಂಕಕಟ್ಟಿ ನಿಂತಿತ್ತು. ಹೀಗಾಗಿ ಆನಂದ ಶಾಸಕರಾದ ಮೊದಲ ದಿನದಿಂದಲೂ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರಿಂದ ಜಿಲ್ಲೆಯಲ್ಲಿ ಶಾಸಕರ ರಾಜೀನಾಮೆ ಪ್ರಶ್ನೆ ಎದುರಾಗದು.

ಇನ್ನು ಸಕ್ಕರೆ ಸಚಿವ, ಜಿಲ್ಲೆಯ ಆರ್.ಬಿ.ತಿಮ್ಮಾಪುರ ರಿವರ್ಸ್ ಆಪರೇಷನ್ ಮಾಡುತ್ತೇವೆ. ತಮ್ಮ ಸಂಪರ್ಕದಲ್ಲೇ ಕೆಲ ಶಾಸಕರು ಇದ್ದಾರೆ ಎಂದಿದ್ದರು. ಆದರೆ, ಅದು ಬರೀ ಹುಸಿ ಬಾಂಬ್ ಎನ್ನುವುದು ಈಗಾಗಲೇ ಸ್ಪಷ್ಟವಾಗಿದೆ. ಜಿಲ್ಲೆಯ ಐದು ಕ್ಷೇತ್ರಗಳ ಬಿಜೆಪಿ ಶಾಸಕರನ್ನು ಸೆಳೆಯುವುದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಹೀಗಾಗಿ ರಾಜ್ಯದಲ್ಲಿ ರಾಜೀನಾಮೆ ಪರ್ವವೇ ಶುರುವಾದರೂ ಜಿಲ್ಲೆ ಮಾತ್ರ ಹೊರಗೆ ಉಳಿದಿದೆ.

ಕೆಲ ದಿನಗಳಿಂದ ಸ್ವಚ್ಛ ಜಮಖಂಡಿ, ಹಸಿರು ಜಮಖಂಡಿ ಅಭಿಯಾನ ಕೈಗೊಂಡಿದ್ದು, ಪ್ರತಿದಿನ ಅದರಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುತ್ತೇನೆ ಎನ್ನುವುದು ಸತ್ಯಕ್ಕೆ ದೂರವಾದ ವಿಷಯ. ಯಾರೂ ಇಂಥ ಸುದ್ದಿಗೆ ಕಿವಿಗೊಡಬಾರದು.
ಆನಂದ ನ್ಯಾಮಗೌಡ, ಶಾಸಕ, ಜಮಖಂಡಿ

Leave a Reply

Your email address will not be published. Required fields are marked *