More

    ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವ ಸಿದ್ಧತೆ

    ಬಾಗಲಕೋಟೆ: ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ಗಣರಾಜ್ಯೋತ್ಸವ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂದು ಬೆಳಗ್ಗೆ 8 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಗೋವಿಂದ ಕಾರಜೋಳ ಧ್ವಜಾರೋಹಣ ಹಾಗೂ ಗಣರಾಜ್ಯೋತ್ಸವದ ಸಂದೇಶ ವಾಚಿಸಲಿದ್ದಾರೆ. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

    ಕಾರ್ಯಕ್ರಮದ ಸಿದ್ಧತೆಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಪೂರ್ವ ತಯಾರಿಗಾಗಿ ಉಪ ಸಮಿತಿಗಳ ಸಭೆ ಕರೆದು ಬೇಕಾಗುವ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಿದರು. ಪೂರ್ಣ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ವಿವಿಧ ಸಮಿತಿಯವರ ಸಭೆಯಲ್ಲಿ ಚರ್ಚಿಸಿದ ಮಾಹಿತಿ ನೀಡಬೇಕು. ಪಥ ಸಂಚಲನ ಕಾರ್ಯಕ್ರಮದಲ್ಲಿ ಪೊಲೀಸ್, ಗೃಹರಕ್ಷಕ ದಳ, ಸೇವಾದಳ, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಎನ್‌ಸಿಸಿ ಕೆಡೆಟ್‌ಗಳನ್ನು ಆಹ್ವಾನಿಸಲು ಸೂಚಿಸಲಾಯಿತು.

    ಪ್ಲಾಸ್ಟಿಕ್ ಧ್ವಜದ ಬಳಕೆ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ಮಕ್ಕಳು ಪ್ಲಾಸ್ಟಿಕ್ ಧ್ವಜ ತರದಂತೆ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಯಿತು. ಐಎಸ್‌ಐ ಮಾರ್ಕ್ ಹೊಂದಿರುವ ಧ್ವಜಗಳನ್ನು ಮಾತ್ರ ಉಪಯೋಗಿಸಬೇಕು. ಗಣರಾಜ್ಯೋತ್ಸವದ ಎರಡು ದಿನ ಪೂರ್ವದಲ್ಲಿ ಧ್ವಜವನ್ನು ಪರೀಕ್ಷಿಸಬೇಕು. ಹರಿದ, ತೂತು ಬಿದ್ದ ಧ್ವಜವನ್ನು ಬಳಸಕೂಡದು ಎಂದರು. ಧ್ವಜಾರೋಹಣ ಕಾರ್ಯವನ್ನು ಭಾರತ ಸೇವಾದಳ, ಪೊಲೀಸ್ ಇಲಾಖೆ, ತಹಸೀಲ್ದಾರ್ ಹಾಗೂ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ವಹಿಸಲಾಯಿತು.

    ಕ್ರೀಡಾಂಗಣದಲ್ಲಿ ವೇದಿಕೆ ನಿರ್ಮಾಣ, ಜನಪ್ರತಿನಿಧಿಗಳು, ಗಣ್ಯರಿಗೆ ಸೂಕ್ತ ಆಸನಗಳ ವ್ಯವಸ್ಥೆ, ಧ್ವನಿವರ್ಧಕ ಹಾಗೂ ಜನರೇಟರ್ ವ್ಯವಸ್ಥೆಯನ್ನು ಕೈಗೊಳ್ಳಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತ ಭವನ, ತಾಲೂಕು ಭವನ, ಜಿಲ್ಲಾಧಿಕಾರಿ ಹಾಗೂ ಆಯುಕ್ತರ ಗೃಹ ಕಚೇರಿಗಳಿಗೆ ವಿದ್ಯುತ್ ಅಲಂಕಾರ ಮಾಡುವುದು ಹಾಗೂ ಬಾಗಲಕೋಟೆ ನಗರದ ಬಸವೇಶ್ವರ ವೃತ್ತ, ಅಂಬೇಡ್ಕರ್ ಪುತ್ಥಳಿ, ನವನಗರದ ಎರಡು ಸರ್ಕಲ್ ಕಡೆ ವಿದ್ಯುತ್ ಅಲಂಕಾರ ಮಾಡಲು ತಿಳಿಸಲಾಯಿತು.

    ಗಣರಾಜ್ಯೋತ್ಸವ ದಿನದಂದು ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಯಿತು. ಜಿಲ್ಲೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಎಡಿಸಿ ಸಭೆಯಲ್ಲಿ ಸೂಚಿಸಿದರು.

    ಸಭೆಯಲ್ಲಿ ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಪಿಯುಡಿಡಿ ಪೂಜಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ಎನ್.ಮೇಲಿನಮನಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಪ್ರಶಾಂತ, ತಹಸೀಲ್ದಾರ್ ಗುರುಬಸಯ್ಯ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಹಿರೇಮಠ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts