ಬಸ್ ಸ್ಟೆಪ್ನಿ ಮೇಲೆ ಅಂಗವಿಕಲ ಪ್ರಯಾಣ

ರಬಕವಿ/ಬನಹಟ್ಟಿ: ದುಡ್ಡು ಕೊಟ್ಟು ಟಿಕೆಟ್ ಪಡೆಯಬಾರದೆಂಬ ದುರುದ್ದೇಶದಿಂದ ಕೆಲ ಪ್ರಯಾಣಿಕರು ಹಲವಾರು ರೀತಿಯ ಸರ್ಕಸ್ ಮಾಡುತ್ತಾರೆ. ಆದರೆ, ಇಲ್ಲೊಬ್ಬ ಅಂಗವಿಕಲನು ಬಸ್ ಸ್ಟೆಪ್ನಿ ಮೇಲೆ ಕುಳಿತು ವಿಭಿನ್ನ ರೀತಿಯಲ್ಲಿ ಬಸ್ ಪ್ರಯಾಣ ನಡೆಸಿ ಚಾಲಕ- ನಿರ್ವಾಹಕರನ್ನು ನಿಬ್ಬೆರಗಾಗಿಸಿದ್ದಾನೆ.

ಘಟನೆ ವಿವರ: ಗುರುವಾರ ರಾತ್ರಿ 8 ಗಂಟೆ ವೇಳೆಗೆ ಅಂಗವಿಕಲನೊಬ್ಬ ಕುಡಿದ ಮತ್ತಿನಲ್ಲಿ ತೇರದಾಳ ಬಸ್ ನಿಲ್ದಾಣದಲ್ಲಿದ್ದ ಬಸ್‌ನ ಹಿಂಭಾಗದ ಹೆಚ್ಚುವರಿ ಚಕ್ರ (ಸ್ಟೆಪ್ನಿ) ಜಾಗದಲ್ಲಿ ಕುಳಿತು ಅಂದಾಜು 10 ಕಿಮೀ ದೂರದ ಬನಹಟ್ಟಿವರೆಗೆ ಪ್ರಯಾಣಿಸಿದ್ದಾನೆ. ಇದನ್ನು ಕಂಡ ಬಸ್ ಹಿಂಬದಿ ಸಂಚರಿಸುತ್ತಿದ್ದ ಕಾರಿನ ಚಾಲಕನೊಬ್ಬ ಬಸ್ ಓವರ್‌ಟೆಕ್ ಮಾಡಿ ಚಾಲಕನ ಗಮನಕ್ಕೆ ತಂದಿದ್ದಾನೆ.

ಬಸ್ ನಿಲ್ಲಿಸಿದ ಚಾಲಕ- ನಿರ್ವಾಹಕರು ವ್ಯಕ್ತಿಯನ್ನು ವಿಚಾರಿಸಿದ್ದು, ನಾನು ಜಮಖಂಡಿಗೆ ತೆರಳಬೇಕಿದೆ. ನನ್ನ ಹತ್ತಿರ ಅಂಗವಿಕಲ ಪಾಸ್ ಅಥವಾ ಹಣವೂ ಇಲ್ಲದ್ದರಿಂದಾಗಿ ಹೀಗೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ನಂತರ ಸ್ವತಃ ನಿರ್ವಾಹಕರೇ ಟಿಕೆಟ್ ನೀಡಿ ಆತನನ್ನು ಜಮಖಂಡಿವರೆಗೆ ಕರೆದೊಯ್ದಿದ್ದಾರೆ.