More

    ಯುವಕರಲ್ಲಿ ಕಾನೂನಿನ ಅರಿವು ಅಗತ್ಯ

    ಬಾಗಲಕೋಟೆ: ಯುವ ಸಮುದಾಯದಲ್ಲಿ ಉತ್ತಮ ಸಂಸ್ಕಾರ ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅನಿಲ ಕಟ್ಟಿ ಹೇಳಿದರು.

    ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಪಾಲಕರು, ಪೋಷಕರು, ಶಿಕ್ಷಕರು ಯುವಕರಿಗೆ ಹೆಚ್ಚಿನ ಸಮಯ ವಿದ್ಯಾರ್ಜನೆಗಾಗಿ, ಅಭಿವೃದ್ಧಿಗಾಗಿ ಪೂರಕ ವಾತಾವರಣ ನಿರ್ಮಿಸಿಕೊಡಬೇಕು. ಜ್ಞಾನ ಸಂಪತ್ತು ವಿಕಸಿತಗೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

    ಉತ್ತಮ ಸಂಸ್ಕಾರ ಪಡೆದು ಸಂವಿಧಾನಾತ್ಮಕವಾಗಿ ನಡೆದುಕೊಳ್ಳಲು ಸಂಕಲ್ಪ ಮಾಡಿದಾಗ ಮಾತ್ರ ಯುವಶಕ್ತಿ ನಿರ್ಮಾಣ ಸಾಧ್ಯವಾಗುತ್ತದೆ. ಸಂವಿಧಾನದ ಪೀಠಿಕೆಯಲ್ಲಿ ಪ್ರತಿಯೊಬ್ಬರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿಸಲಾಗಿದೆ. ಸಂವಿಧಾನದಡಿಯಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಸಂವಿಧಾನದ ಮೂಲಕ ನೀಡಿರುವ ಹಕ್ಕುಗಳ ದುರುಪಯೋಗದಿಂದ ರಾಷ್ಟ್ರದ ಸಂಪತ್ತು ಹಾಳಾಗುತ್ತಿದೆ. ಕಾನೂನುಗಳನ್ನು ಸರಿಯಾಗಿ ಅರಿಯದ ಪರಿಣಾಮ ಸಮಸ್ಯೆಗಳು ಉದ್ಭವವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

    ತಂದೆ-ತಾಯಿಗಳು ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ, ಶಿಕ್ಷಣ ನೀಡಬೇಕು. ಮಕ್ಕಳಲ್ಲಿ ಉತ್ತಮ ನಡತೆ ಬೆಳೆಸಬೇಕು. ವಿಚಾರ, ತಾಳ್ಮೆ ಹಾಗೂ ಪ್ರೋತ್ಸಾಹದಾಯಕ ವಾತಾವರಣ ರೂಪಿಸಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮುವಂತೆ ಮಾಡಬೇಕು. ಒಳ್ಳೆಯ ಹಾಗೂ ಕೆಟ್ಟ ವಿಚಾರ ಮಾಡುವಂತಹ ಶಕ್ತಿ ಬರಬೇಕು. ಇಂದಿನ ಯುಗದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾಗಿದ್ದು, ಒಳ್ಳೆಯದಕ್ಕೆ ಮಾತ್ರ ಬಳಕೆಯಾಗಬೇಕು ಎಂದು ಸಲಹೆ ನೀಡಿದ ಅವರು, ಇಂದಿನ ಯುವಶಕ್ತಿಯಿಂದ ಉತ್ತಮ ಸಮಾಜ, ದೇಶ ಕಟ್ಟಲು ಸಾಧ್ಯವಾಗುತ್ತದೆ ಎಂದರು.

    ವಕೀಲರಾದ ಟಿ.ಆರ್. ಕುಲಕರ್ಣಿ ಯುವಕರಿಗೆ ಕಾನೂನು ಅರಿವು ಮಹತ್ವದದ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಅರುಣಕುಮಾರ ಗಾಳಿ, ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಅಜಿತ ನಾಗರಾಳೆ, ರಾಜ್ಯಶಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಬಿ. ನಂದನ ಇತರರು ಉಪಸ್ಥಿತರಿದ್ದರು.

    ಸಂವಿಧಾನದಲ್ಲಿ ಹಕ್ಕು, ಕರ್ತವ್ಯ ಸೇರಿ ಪ್ರತಿಯೊಂದು ವಿಚಾರದ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಕಾನೂನು ವಿದ್ಯಾರ್ಥಿಗಳು ಮಾತ್ರ ಸಂವಿಧಾನ ಅರಿಯಬೇಕು ಎಂದು ಭಾವಿಸಬಾರದು. ಪ್ರತಿಯೊಬ್ಬರೂ ಸಂವಿಧಾನ, ಕಾನೂನು ಬಗ್ಗೆ ತಿಳಿದುಕೊಳ್ಳಬೇಕು.
    – ಹೇಮಲತಾ ಹುಲ್ಲೂರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts