ಕೋಟೆನಾಡು ನಮೋ ನಮಃ !

ಸಂತೋಷ ದೇಶಪಾಂಡೆ

ಬಾಗಲಕೋಟೆ: ನಗರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಜಯ ಸಂಕಲ್ಪ ರ‌್ಯಾಲಿಗೆ ವಿಜಯಪುರ-ಬಾಗಲಕೋಟೆ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಜನ ಸಾಗರವೇ ಹರಿದು ಬಂದಿತ್ತು. ಕೋಟೆನಗರಿ ಸಂಪೂರ್ಣವಾಗಿ ನಮೋ ನಮಃವಾಗಿತ್ತು.!!

ಹೌದು, ಕಾರ್ಯಕ್ರಮದ ಆವರಣ ಅಷ್ಟೇ ಅಲ್ಲದೆ, ಕೋಟೆನಗರಿಯ ಪ್ರಮುಖ ಬೀದಿಗಳು, ರಸ್ತೆಗಳು ಸಂಪೂರ್ಣವಾಗಿ ಕೇಸರಿಮಯಗೊಂಡಿತ್ತು. ನಮೋ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹರ ಹರ ಮೋದಿ, ಘರ್ ಘರ್ ಮೋದಿ ಘೋಷಣೆ ಮೊಳಗಿಸುತ್ತಲೆ ರ‌್ಯಾಲಿಯತ್ತ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ನೆಚ್ಚಿನ ಪ್ರಧಾನಿ ನೋಡಲು ಜನರು ಮುಗಿಬಿದ್ದಿದ್ದರು. ಉರಿಬಿಸಿಲನ್ನೂ ಲೆಕ್ಕಿಸದೆ ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕಾಗಿ ಕಾದು ಕುಳಿತಿದ್ದರು.

ಮೋದಿ ಗ್ರಾೃಂಡ್ ಎಂಟ್ರಿ…
ಬೆಳಗ್ಗೆ 11 ಗಂಟೆಯಿಂದಲೇ ಜನರು ತಂಡೋಪ ತಂಡವಾಗಿ ವೇದಿಕೆಯತ್ತ ಮುಖ ಮಾಡಿದರು. ರಾಜ್ಯ ಮತ್ತು ಜಿಲ್ಲೆಯ ನಾಯಕರು ಭಾಷಣ ಮಾಡುತ್ತಿದ್ದಂತೆ ಮೋದಿ ಮೋದಿ ಎನ್ನುವ ಘೋಷಣೆಗಳು ಪ್ರತಿಧ್ವನಿಸಿದವು. ಭದ್ರತಾ ಸಿಬ್ಬಂದಿಯೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಲಿಕಾಪ್ಟರ್ ಮೂಲಕ ಕೋಟೆನಗರಿಗೆ ಗ್ರಾೃಂಡ್ ಎಂಟ್ರಿ ಕೊಡುತ್ತಿದ್ದಂತೆ ಜೈಕಾರಗಳು ಮುಗಿಲು ಮುಟ್ಟಿದವು. ವೇದಿಕೆಗೆ ಆಗಮಿಸಿದ ಮೋದಿ ಅಪಾರ ಜನಸ್ತೋಮದತ್ತ ಕೈ ಬೀಸುತ್ತಿದ್ದಂತೆ ಸಪ್ತ ದಿಕ್ಕುಗಳಿಂದಲೂ ಕೇಕೇ, ಚಪ್ಪಾಳೆಗಳ ಸುರಿಮಳೆಯಾದವು.
ಕನ್ನಡದಲ್ಲಿ ಭಾಷಣ ಆರಂಭ

ಪ್ರಧಾನಮಂತ್ರಿ ನರೇಂದ್ರ ಮೋದಿ ವಿಜಯಪುರ-ಬಾಗಲಕೋಟೆ ಮತಕ್ಷೇತ್ರಗಳ ಆತ್ಮೀಯ ನಾಗರಿಕ ಬಂಧು, ಭಗಿನಿಯರೇ ಎಂದು ಕನ್ನಡದಲ್ಲಿ ಭಾಷಣ ಆರಂಭಿಸುತ್ತಿದ್ದಂತೆ ಜಯಘೋಷಗಳು ಮೊಳಗಿದವು. ನಿಮ್ಮೆಲ್ಲರಿಗೂ ಚೌಕಿದಾರ್ ನರೇಂದ್ರ ಮೋದಿ ವಂದನೆಗಳು ಎಂದು ಮಾತು ಆರಂಭಿಸಿದ ಮೋದಿ, ತಮ್ಮ ಕರಾರುವಕ್ಕಾದ ಭಾಷಣದ ಮೂಲಕ ಚುನಾವಣೆ ರಂಗು ಮತ್ತಷ್ಟು ಹೆಚ್ಚಾಗುವಂತೆ ಮಾಡಿದರು. ಮಧ್ಯಾಹ್ನ 3.10 ರಿಂದ 3.40ರವರೆಗೆ ಬರೊಬ್ಬರಿ ಅರ್ಧಗಂಟೆ ಭಾಷಣದಲ್ಲಿ ನರೇಂದ್ರ ಮೋದಿ ಜೆಡಿಎಸ್-ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಕೊನೆಯಲ್ಲಿ ಮಹಿಳೆಯರಲ್ಲೂ, ಗಡಿಯಲ್ಲೂ, ಡಾಕ್ಟರ್, ವಕೀಲರು, ಇಂಜಿನಿಯರ್, ವ್ಯಾಪಾರಿ, ರೈತರು ಸೇರಿ ಎಲ್ಲರೂ ಚೌಕಿದಾರ್ ಎಂದು ಮೋದಿ ಪ್ರತಿಜ್ಞೆ ಪಡೆದುಕೊಂಡರು.

ಫಿರ್ ಏಕ್ ಬಾರ್ ಮೋದಿ ಸರ್ಕಾರ
ಮೈದಾನದಲ್ಲಿ ಮೇಲಿಂದ ಮೇಲೆ ಜನರು ಫಿರ್ ಏಕ್ ಬಾರ್ ಮೋದಿ ಸರ್ಕಾರ, ಮೋದಿ ಸರ್ಕಾರ ಎನ್ನುವ ಘೋಷಣೆ ಮೇಲಿಂದ ಮೇಲೆ ಕೂಗುತ್ತಿರುವುದು ವಿಶೇಷವಾಗಿತ್ತು. ಅಲ್ಲದೆ, ಯುವ ಸಮೂಹ ಒಮ್ಮಿಂದೊಮ್ಮ್ಮೆಲೆ ಜೋರಾದ ಧ್ವನಿಯಲ್ಲಿ ಮೋದಿ… ಮೋದಿ… ಮೋದಿ… ಎಂದು ಕೂಗು ಹಾಕುತ್ತ ಮೈದಾನದಲ್ಲಿ ಇತರರಲ್ಲಿ ಮಿಂಚಿನ ಸಂಚಲನ ಮೂಡಿಸಿದರು.

ಬೆಳ್ಳಿ ಬಿಲ್ಲು ಬಾಣ ಕೊಟ್ಟು ಸನ್ಮಾನ
2014 ಏ.8 ರಂದು ಮೊದಲ ಸಾರಿ ಬಾಗಲಕೋಟೆಗೆ ನರೇಂದ್ರ ಮೋದಿ ಆಗಮಿಸಿದ ವೇಳೆ ಜಿಲ್ಲಾ ಬಿಜೆಪಿ ವತಿಯಿಂದ ಅವರಿಗೆ ಬೆಳ್ಳಿ ಗದೆ ಹಾಗೂ ಕಂಚಿನ ಬಸವಣ್ಣನ ಮೂರ್ತಿಯನ್ನು ನೀಡಿ ಸನ್ಮಾನಿಸಲಾಗಿತ್ತು. ಈ ಸಾರಿ ವಿಶೇಷವಾಗಿ ತಯಾರಿಸಿದ್ದ 3 ಕೆ.ಜಿ. ತೂಕದ ಬಿಲ್ಲು ಬಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಗೌರವಿಸಲಾಯಿತು. ವಿಜಯಪುರ-ಬಾಗಲಕೋಟೆ ಬಿಜೆಪಿ ಜಿಲ್ಲಾ ಘಟಕಗಳಿಂದ ಪ್ರತ್ಯೇಕವಾಗಿ ಸನ್ಮಾನಿಸಲಾಯಿತು. ಇನ್ನು ಬಿಲ್ಲು ಬಾಣ ಹಿಡಿದ ಮೋದಿ ಜನರತ್ತ ನಗು ಮೊಗದಿಂದ ನೋಡುತ್ತಿದ್ದಂತೆ ಜಯಕಾರಗಳು ಮುಗಿಲು ಮುಟ್ಟಿದ್ದವು.

ಅವಳಿ ಜಿಲ್ಲೆಯ ನಾಯಕರು ಭಾಗಿ
ವೇದಿಕೆಯಲ್ಲಿ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಡಿಸಿಎಂ, ಶಾಸಕ ಕೆ.ಎಸ್.ಈಶ್ವರಪ್ಪ, ಬಾಗಲಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ, ವಿಜಯಪುರ ಅಭ್ಯರ್ಥಿ ರಮೇಶ ಜಿಗಜಿಣಗಿ, ಶಾಸಕರಾದ ಗೋವಿಂದ ಕಾರಜೋಳ, ವೀರಣ್ಣ ಚರಂತಿಮಠ, ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ, ಸಿದ್ದು ಸವದಿ, ದೊಡ್ಡನಗೌಡ ಪಾಟೀಲ, ಸೋಮನಗೌಡ ಪಾಟೀಲ, ಎ.ಎಸ್.ಪಾಟೀಲ (ನಡಹಳ್ಳಿ), ವಿ.ಪ. ಸದಸ್ಯರಾದ ಹಣಮಂತ ನಿರಾಣಿ, ಅರುಣ ಶಹಾಪುರ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ರಾಜಶೇಖರ ಶೀಲವಂತ, ಮಲ್ಲಿಕಾರ್ಜುನ ಬನ್ನಿ, ಅಶೋಕ ಕಟ್ಟಿಮನಿ, ಎಸ್.ಕೆ.ಬೆಳ್ಳುಬ್ಬಿ, ಪಿ.ಎಚ್.ಪೂಜಾರ, ಎಂ.ಕೆ.ಪಟ್ಟಣಶೆಟ್ಟಿ, ವಿ.ಪ. ಮಾಜಿ ಸದಸ್ಯರಾದ ನಾರಾಯಣಸಾ ಭಾಂಡಗೆ, ಜಿ.ಎಸ್.ನ್ಯಾಮಗೌಡ ಸೇರಿ ಪಕ್ಷದ ಪದಾಧಿಕಾರಿಗಳು ಇದ್ದರು.

ಪ್ರತಿಯೊಬ್ಬ ನಾಯಕರು ಮೋದಿ ಅವರನ್ನು ಭೇಟಿಯಾಗಿ ವಂದನೆ ಸಲ್ಲಿಸಿದರು. ಮಾಜಿ ಶಾಸಕ ಎಸ್.ಕೆ.ಬೆಳ್ಳುಬ್ಬಿ ಮೋದಿ ಅವರ ಕಾಲಿಗೆ ನಮಸ್ಕರಿಸಿದ್ದು ಗಮನ ಸೆಳೆಯಿತು. ವಿವಿಧ ಮಠಾಧೀಶರು ಕೂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇನ್ನು ಕಾರ್ಯಕ್ರಮ ಆರಂಭಿಸುವ ಮುನ್ನ ಈರಪ್ಪ ಐಕೂರ ವಂದೇ ಮಾತರಂ ಗೀತೆ ಹಾಡಿದರು. ಪಂ.ಸಿದ್ದರಾಮಯ್ಯ ಮಠಪತಿ ಅವರ ತಂಡ ವಚನ ಗಾಯನ, ಸುಗಮ ಸಂಗೀತ ಪ್ರಸ್ತುತ ಪಡಿಸಿದರು.

Leave a Reply

Your email address will not be published. Required fields are marked *