ಮಾತಲ್ಲೆ ಮನೆ ಕಟ್ಟುವ ಪ್ರಧಾನಿ ಮೋದಿ

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಮಾತಿನಲ್ಲೇ ಮನೆ ಕಟ್ಟಿದ್ದಾರೆ. ಅವರ ಭಾಷಣ ಈ ಭಾಗದ ಜನರ ನಿರೀಕ್ಷೆ ಹುಸಿಯಾಗಿಸಿದೆ. ಯಾವುದೇ ಪ್ರಾದೇಶಿಕ ವಿಷಯ ಪ್ರಸ್ತಾಪ ಮಾಡಲಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಯುಕೆಪಿ ಯೋಜನೆ ರಾಷ್ಟ್ರೀಕರಣಗೊಳಿಸುವ ಮಾತು ಆಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಶಿವಾನಂದ ಪಾಟೀಲ ಟೀಕಿಸಿದ್ದಾರೆ.

ಆಲಮಟ್ಟಿ ಅಣೆಕಟ್ಟು (ಕೃಷ್ಣಾ ಮೇಲ್ದಂಡೆ ಯೋಜನೆ) ರಾಷ್ಟ್ರೀಕರಣಗೊಳಿಸಬೇಕೆಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿ ರಾಜ್ಯದ ಅನೇಕ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಒತ್ತಾಯ ಮಾಡುತ್ತ ಬಂದಿದ್ದಾರೆ. ಪ್ರಧಾನಿ ಮೋದಿ ಈ ಬಗ್ಗೆ ಒಂದು ಪ್ರತಿಕ್ರಿಯೆ ನೀಡಲಿಲ್ಲ. 15 ವರ್ಷಗಳಿಂದ ಬಾಗಲಕೋಟೆಯ ಸಂಸದರು ಬಿಜೆಪಿಯವರಾಗಿದ್ದರು. 5 ವರ್ಷದಿಂದ ಕೇಂದ್ರದಲ್ಲಿ ತಮ್ಮದೇ ಸರ್ಕಾರವಿತ್ತು. ಒಂದು ದಿನವೂ ಯುಕೆಪಿ ಬಗ್ಗೆ ಚಕಾರ ಎತ್ತಲಿಲ್ಲ. ಇದೀಗ ಮತ ಸೆಳೆಯಲು ಈ ರೀತಿ ಮಾತನಾಡಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಪಾದಿಸಿದರು.

ಅಮಿತ್ ಷಾ, ಮೋದಿ ಪಕ್ಷ
ಬಾಗಲಕೋಟೆ ಸೇರಿ ದೇಶದ ಯಾವುದೇ ಭಾಗದಲ್ಲಿ ನಡೆಯುವ ರ‌್ಯಾಲಿಗಳಲ್ಲಿ ಅಭ್ಯರ್ಥಿಗಳ ಪೋಟೊ ಇಲ್ಲ. ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನೆಪಮಾತ್ರಕ್ಕೆ ನಿಲ್ಲಿಸಿದ್ದಾರೆ. ಬಿಜೆಪಿ ಇದೀಗ ಪಕ್ಷವಾಗಿ ಉಳಿದಿಲ್ಲ. ಅಮಿತ್ ಷಾ, ನರೇಂದ್ರ ಮೋದಿ ಪಕ್ಷ ಆಗಿದೆ ಎಂದು ಲೇವಡಿ ಮಾಡಿದರು.

ಮುಳಗಡೆ ವಿಚಾರ ಬಗ್ಗೆ ಬಿಜೆಪಿಗೆ ಮಾತನಾಡುವ ಹಕ್ಕು ಇಲ್ಲ. ಬಾಗಲಕೋಟೆ ನಗರ ಸಂತ್ರಸ್ತರ ಪ್ರಮುಖ ಕೇಂದ್ರವಾಗಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ) ಸಭೆಗೆ ಸಂಸದ ಪಿ.ಸಿ. ಗದ್ದಿಗೌಡರ ಒಂದು ದಿನವೂ ಹೋಗಿಲ್ಲ. ಯುಕೆಪಿ ಯೋಜನೆ ಬಗ್ಗೆ, ಕುಡಚಿ ರೈಲು ಮಾರ್ಗ, ಮಹದಾಯಿ ಬಗ್ಗೆ ಸಂಸತ್‌ನಲ್ಲಿ ಹೇಗೆ ಧ್ವನಿ ಎತ್ತಲು ಸಾಧ್ಯ ಎಂದು ಪ್ರಶ್ನಿದ ಶಿವಾನಂದ ಪಾಟೀಲ ಅವರು, ಪ್ರಧಾನಿ ನರೇಂದ್ರ ಮೋದಿ ಪ್ರಾದೇಶಿಕ ವಿಷಯಗಳ ಬಗ್ಗೆ ನಿರ್ಲಕ್ಷೃ ಧೋರಣೆ ಅನುಸರಿಸಿದ್ದಾರೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಬಿ. ಸೌದಾಗರ, ಆನಂದ ಜಿಗಜಿನ್ನಿ, ಡಾ. ಎಂ.ಎಸ್. ದಡ್ಡೇನವರ, ದೇವರಾಜ ಪಾಟೀಲ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಲಿಂಗಾಯತ ಧರ್ಮದ ಬಗ್ಗೆ ಇಬ್ಬರು ಸಚಿವರು ಹೇಳಿಕೆ ನೀಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮದ ಕುರಿತು ಮಾತನಾಡುವ ಅಗತ್ಯವಿರಲಿಲ್ಲ. ದೊಡ್ಡ ಸ್ಥಾನದಲ್ಲಿದ್ದವರು ಸಣ್ಣ ವಿಷಯ ಕುರಿತು ಪ್ರಸ್ತಾಪ ಮಾಡುವುದು ಸರಿಯಲ್ಲ.
– ಶಿವಾನಂದ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ