ಪ್ರಧಾನಿ ಮೋದಿ ಸಮಾವೇಶಕ್ಕೆ ತಯಾರಿ

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಏ.18ರಂದು ಮಧ್ಯಾಹ್ನ 1 ಗಂಟೆಗೆ ನಗರಕ್ಕೆ ಆಗಮಿಲಿದ್ದಾರೆ. ಬೃಹತ್ ಸಮಾವೇಶದ ಮೂಲಕ ಬಾಗಲಕೋಟೆ ಲೋಕಸಭೆ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಹಾಗೂ ವಿಜಯಪುರ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ಚುನಾವಣೆ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ಕ್ಷೇತ್ರದ ಬಿಜೆಪಿ ಸಂಚಾಲಕ, ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ನಗರದಲ್ಲಿ ಬುಧವಾರ ಸಮಾವೇಶ ವೇದಿಕೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಮಾವೇಶಕ್ಕೆ ಸಿದ್ಧತೆ ಕಾರ್ಯ ಪ್ರಾರಂಭವಾಗಿದೆ. ಅಂದಾಜು 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ನಗರದ ಹೊರ ವಲಯದ ಸ್ಟೇಷನ್ ಹತ್ತಿರ- ದಡ್ಡೆನ್ನವರ ಕ್ರಾಸ್ ಪಕ್ಕದಲ್ಲಿ ಬಸಪ್ಪ ದೊಡ್ಡಮನಿ ಅವರ 20 ಎಕರೆ ಜಮೀನಿನಲ್ಲಿ ಸ್ಥಳ ನಿಗದಿ ಮಾಡಲಾಗಿದೆ. ಮೂರು ಹೆಲಿಪ್ಯಾಡ್ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಏ.18ರಂದು ನಡೆಯಲಿರುವ ಸಮಾವೇಶದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದು, ಬಿಸಿಲು ಜಾಸ್ತಿ ಇರುವ ಕಾರಣಕ್ಕೆ ಯುವಕರಿಗೆ, ಮಹಿಳೆಯರಿಗೆ, ವೃದ್ಧರಿಗೆ ಬೃಹತ್ ಶಾಮಿಯಾನ, ಆಸನ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೇವೆ. ನೀರು ಮತ್ತು ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಬಾಗಲಕೋಟೆ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಮತಕ್ಷೇತ್ರ, ವಿಜಯಪುರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ನಾಯಕರು, ಮೋದಿ ಅವರ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ವಿ.ಪ. ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಮಹಾರಾಷ್ಟ್ರದಲ್ಲಿ ಸಮಾವೇಶ ಮುಗಿಸಿಕೊಂಡು ಬಾಗಲಕೋಟೆ ಮೂಲಕ ಪ್ರಧಾನಿ ಕರ್ನಾಟಕ ಪ್ರವೇಶ ಮಾಡಲಿದ್ದಾರೆ. ಬಳಿಕ ಚಿಕ್ಕೋಡಿಯಲ್ಲಿ ಸಮಾವೇಶ ನಡೆಯಲಿದೆ. ಬಿಜೆಪಿ ನಾಯಕರಾದ ಶ್ರೀರಾಮಲು, ಕೆ.ಎಸ್. ಈಶ್ವರಪ್ಪ ಸೇರಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಮುಖಂಡ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್. ಪಾಟೀಲ, ಬಿಜೆಪಿ ಜಿಲ್ಲಾ ವಕ್ತಾರ ಜಯಂತ ಕುರಂದವಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ರೇವಣಕರ, ನಗರ ಘಟಕದ ಅಧ್ಯಕ್ಷ ರಾಜು ನಾಯ್ಕರ, ಮುಖಂಡರಾದ ಪ್ರಭು ಹಡಗಲಿ, ಈರಪ್ಪ ಐಕೂರ, ಅನಿತಾ ಸರೋಧೆ, ಶಶಿಕಲಾ ಮಜ್ಜಗಿ ಮತ್ತಿರರು ಇದ್ದರು.Leave a Reply

Your email address will not be published. Required fields are marked *