ಬಿಜೆಪಿಗೆ ತಕ್ಕ ಪಾಠ ಕಲಿಸಿ

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಐದು ವರ್ಷ ಆಡಳಿತ ಅವಧಿಯಲ್ಲಿ ಜನರಿಗೆ ನೀಡಿದ್ದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಸುಳ್ಳುಗಳನ್ನು ಹೇಳುತ್ತ ಕಾಲಹರಣ ಮಾಡಿದ್ದಾರೆ. ಈ ಬಾರಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ ಹೇಳಿದರು.

ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಬಾಗಲಕೋಟೆ ಗ್ರಾಮೀಣ ಘಟಕ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಅಧಿಕಾರಕ್ಕೆ ಬರುವ ಮುನ್ನ ನರೇಂದ್ರ ಮೋದಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ, ನೋಟ್‌ಬ್ಯಾನ್‌ನಿಂದ ಭ್ರಷ್ಟಾಚಾರ ಕಡಿವಾಣ ಬೀಳುತ್ತದೆ ಅಂತ ಭರವಸೆ ನೀಡಿದ್ದರು. ಆದರೆ, ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ಉದ್ಯೋಗ ಕೂಡ ಸೃಷ್ಟಿ ಮಾಡಲಿಲ್ಲ. ಜನರ ಖಾತೆಗೆ 1 ರೂ. ಹಾಕಲಿಲ್ಲ. ಬರೀ ಸುಳ್ಳುಗಳನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಸರ್ಕಾರ ಜನರಿಗೆ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿ ಅನೇಕ ಭಾಗ್ಯಗಳನ್ನು ನೀಡಿ ಜನಸಾಮಾನ್ಯರ ಬದುಕು ಹಸನಗೊಳಿಸಿದರು. ಸಂಸದ ಪಿ.ಸಿ. ಗದ್ದಿಗೌಡರ 15 ವರ್ಷಗಳಿಂದ ಸಂಸದರಾದರೂ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ಶೂನ್ಯ. ಈ ಬಾರಿ ವೀಣಾ ಕಾಶಪ್ಪನವರ ಅವರನ್ನು ಗೆಲ್ಲಿಸಲು ಮನವಿ ಮಾಡಿದರು.

ಅಭ್ಯರ್ಥಿ ವೀಣಾ ಕಾಶಪ್ಪನವರ ಮಾತನಾಡಿ, ಜಿಲ್ಲೆಯಲ್ಲಿ ಹದಿನೈದು ವರ್ಷಗಳ ಕಾಲ ಸಂಸದರಾಗಿರುವ ಪಿ.ಸಿ. ಗದ್ದಿಗೌಡರ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಹೇಳಿಲ್ಲ. ಯಾವ ಭರವಸೆಯನ್ನೂ ಈಡೇರಿಸಿಲ್ಲ. ಯಾವುದೇ ಗ್ರಾಮಕ್ಕೆ ಹೋಗಿ ಸಮಸ್ಯೆ ಆಲಿಸಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೆಲ್ಲ ಮತದಾರರು ಗಮನಿಸಬೇಕು. ಯಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂಬುದನ್ನು ಅರಿತು ಮತ ನೀಡಬೇಕು ಎಂದು ಹೇಳಿದರು.

ಏ.18ಕ್ಕೆ ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಬರುತ್ತಾರೆ ಎಂದ ಮಾತ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹೆದರುವ ಅವಶ್ಯಕತೆಯಿಲ್ಲ. ಜನರಿಗೆ ಸತ್ಯ ಬಿಚ್ಚಿಡಬೇಕು. ಜನರೊಂದಿಗೆ ಇದ್ದು ರೈತರ, ಮಹಿಳೆಯರ,ಯುವಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿ ಜಿಲ್ಲೆಗೆ ಬೇಕಿದೆ. ನಿಮ್ಮ ನಂಬಿಕೆ ಹುಸಿಗೊಳ್ಳಿಸುವುದಿಲ್ಲ ಎಂದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅವರು, ಹದಿನೈದು ವರ್ಷಗಳ ಕಾಲ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಮತ್ತೆ ಜನರ ಬಳಿ ಮತಕೇಳಲು ಬಂದಿದ್ದಾರೆ. ಬಿಜೆಪಿಯವರು ಸುಳ್ಳನ್ನು ಬಂಡವಾಳ ಮಾಡಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕಾಂಗ್ರೆಸ್ ರಾಜ್ಯ ಪ್ರಚಾರ ಸಮಿತಿ ಉಪಾಧ್ಯಕ್ಷ ಎಸ್. ಜಿ.ನಂಜಯ್ಯನಮಠ, ಮಾಜಿ ಶಾಸಕ ಎಚ್.ವೈ. ಮೇಟಿ, ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ನಟಿ ಪಂಕಜಾ, ಡಾ.ಎಂ.ಎಸ್.ದಡ್ಡೇನ್ನವರ, ಆನಂದ ಜಿಗಜಿನ್ನಿ ಇತರರು ಇದ್ದರು.

ಇಂದು ಎಚ್.ಕೆ.ಪಾಟೀಲ ಪ್ರಚಾರ
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಏ.9ರಂದು ಜಿಲ್ಲೆಯ ವಿವಿಧೆಡೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 11 ಗಂಟೆವರೆಗೆ ಬೀಳಗಿ ತಾಲೂಕಿನ ಕುಂದರಗಿ, ಸುನಗ, ಬೀಳಗಿ ಪಟ್ಟಣ, ಸಂಜೆ 4 ಗಂಟೆಗೆ ಗಿರಿಸಾಗರ, 6ಗಂಟೆಗೆ ಗಲಗಲಿ ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.