ಮೋದಿ ಗಟ್ಟಿ ನಿರ್ಧಾರದ ನಾಯಕ

ಬಾಗಲಕೋಟೆ: ದೇಶದ ಭದ್ರತೆ, ಪ್ರಗತಿಗಾಗಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಮೊತ್ತಮ್ಮೆ ಪ್ರಧಾನಿಯಾಗಬೇಕೆಂದು ದೇಶದ ಜನ ಹಂಬಲಿಸುತ್ತಿದ್ದಾರೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ಪೂರ್ಣಬಹುಮತದೊಂದಿಗೆ ಮೋದಿ ಅಧಿಕಾರ ಹಿಡಿಯಲಿದ್ದಾರೆ ಎಂದು ಟೀಮ್ ಮೋದಿ ಸಂಘಟನೆ ರಾಜ್ಯ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದಾಗ ನೇತೃತ್ವ ವಹಿಸಿದ್ದ ಪ್ರಧಾನಿಗಳು ದೇಶದ ಹಿತಕ್ಕಾಗಿ ಗಟ್ಟಿ ನಿರ್ಧಾರ ತೆಗೆದುಕೊಂಡಿಲ್ಲ. ಅವರಿಗೆ ಆ ತಾಕತ್ತು ಇರುವುದಿಲ್ಲ. ಪೂರ್ಣ ಬಹುಮತದೊಂದಿಗೆ ಪ್ರಧಾನಿಯಾದಾಗ ಮಾತ್ರ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಬಿಜೆಪಿಯಿಂದ ಮಾತ್ರ ಸುಭದ್ರ ಸರ್ಕಾರ ಸಾಧ್ಯ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 235 ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಎಲ್ಲ ಸ್ಥಾನ ಗೆದ್ದರೂ ಪೂರ್ಣ ಬಹುಮತ ಬರಲ್ಲ. ಮಾಯಾವತಿ, ಮಮತಾ ಬ್ಯಾನರ್ಜಿ ಇನ್ನಿತರರು 30 ರಿಂದ 40 ಸ್ಥಾನ ಗೆಲ್ಲಲಾಗುವುದಿಲ್ಲ. ಪ್ರಧಾನಮಂತ್ರಿ ನಾನೇ ಎಂದು ಹೇಳಿಕೊಳ್ಳುವ ದೇವೆಗೌಡರು ಕೇಳಿದ್ದು 12 ಕ್ಷೇತ್ರ, ಆದರೆ, ಎಂಟು ಕ್ಷೇತ್ರ ಕೊಟ್ಟರೂ 6 ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಮಾಡಿದೆ. ಬಿಜೆಪಿ ಹೊರತು ಪಡಿಸಿದರೆ ಯಾವ ಪಕ್ಷಕ್ಕೂ ಸಮಗ್ರ ಭಾರತದ ಕಲ್ಪನೆ ಇಲ್ಲ ಎಂದು ಟೀಕಿಸಿದರು.

ನರೇಂದ್ರ ಮೋದಿಯವರು ರಾಷ್ಟ್ರೀಯ ಚಿಂತನೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಟೀಮ್ ಮೋದಿ ತಂಡ ಕಾರ್ಯ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜಮ್ಮು-ಕಾಶ್ಮೀರದಲ್ಲಿ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವುದು, ವಿಶೇಷ ಸವಲತ್ತು ನೀಡುವುದು ಸೇರಿ ಇನ್ನಿತರ ಘೋಷಣೆ ಮಾಡಿರುವುದು ದೇಶದ ಆಂತರಿಕ ರಕ್ಷಣೆಗೆ ಧಕ್ಕೆ ತರುವ ವಿಷಯವಾಗಿದೆ. ಹೀಗಾಗಿ ದೇಶದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಹಾಗೂ ದೇಶದ ಸುರಕ್ಷತೆ ಬಗ್ಗೆ ಸದಾ ಚಿಂತನೆ ಮಾಡುವ ಮೋದಿಯವರು ಪ್ರಧಾನಿಯಾಗಬೇಕಾಗಿದೆ ಎಂದರು.

ಕಾರವಾರ ಲೋಕಸಭಾ ಕ್ಷೇತ್ರಕ್ಕೆ ಕಳೆದ ಬಾರಿಯೂ ನನ್ನ ಹೆಸರು ಪ್ರಸ್ತಾಪ ಬಂದಿತ್ತು. ನಾನು ನಿರಾಕರಣೆ ಮಾಡಿದೆ. ನನ್ನ ಉದ್ದೇಶ ರಾಜಕೀಯ ಮಾಡುವುದಲ್ಲ. ಯುವಕರ ಸಂಘಟನೆ ಮಾಡಿ, ಸಾಮಾಜಿಕವಾಗಿ ಜಾಗೃತಿ ಮೂಡಿಸುವುದು ನನ್ನ ಉದ್ದೇಶವಾಗಿದೆ ಎಂದರು.

ಸೈನಿಕರಿಗೆ ಶಕ್ತಿ ತುಂಬುವುದು, ಸೈನ್ಯಕ್ಕೆ ಬೇಕಾಗುವ ಮುಕ್ತ ಅವಕಾಶವನ್ನು ಒದಗಿಸಿಕೊಡುವ ಕೆಲಸವನ್ನು ಮೋದಿಯವರು ನೀಡಿದ್ದಾರೆ. ಇನ್ನೂ ಬಾಲಾಕೋಟ್ ಮೇಲೆ ಭಾರತೀಯ ಸೈನಿಕರು ದಾಳಿ ಮಾಡಿದಾಗ ಒಂದು ರಾಷ್ಟ್ರ ಭಾರತದ ದಾಳಿ ವಿರೋಧಿಸದಿರುವುದಕ್ಕೆ ಮೋದಿ ರಾಜನೀತಿ ಕಾರಣ. ಮೋದಿಯವರ ಸಾಧನೆ ಹಿಂದೆ ಪ್ರತಿಯೊಬ್ಬ ಸಂಸದರ ಸಾಧನೆಯೂ ಇದೆ.
– ಚಕ್ರವರ್ತಿ ಸೂಲಿಬೆಲೆ ಟೀಂ ಮೋದಿ ಸಂಘಟನೆ ಮುಖಂಡ

Leave a Reply

Your email address will not be published. Required fields are marked *