ವ್ಯವಸ್ಥೆ ಬದಲಾವಣೆಗೆ ಸಂಕಲ್ಪ

ಬಾಗಲಕೋಟೆ: ಯಥಾ ರಾಜ ತಥಾ ಪ್ರಜಾ ಎನ್ನುವಂತಿರುವ ವ್ಯವಸ್ಥೆ ಬದಲಾಯಿಸಲು ಹೊಸ ವಿಚಾರಗಳೊಂದಿಗೆ ರಾಜಕೀಯ ದೂರವಿಟ್ಟು, ಪ್ರಜೆಗಳನ್ನು ಆಧಾರವಾಗಿ ಇಟ್ಟುಕೊಂಡು ಪ್ರಜಾಕೀಯ ಪಕ್ಷ ಹುಟ್ಟು ಹಾಕಿದ್ದೇವೆ. ಜನರು ಹೊಸ ದಿಕ್ಕಿನತ್ತ ಯೋಚನಾ ಲಹರಿ ಬದಲಾಯಿಸುತ್ತಿದ್ದಾರೆ. ನಮಗೆ ಬೆಂಬಲ ದೊರೆಯುವ ವಿಶ್ವಾಸವಿದೆ ಎಂದು ಸೂಪರ್ ಸ್ಟಾರ್, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದರು.

ಪ್ರಚಾರದ ಕೆಲಸ ಜಾಸ್ತಿ ಇರುವ ಕಾರಣ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷೃದ 27 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಇದ್ದಾರೆ. ಉತ್ತಮ ಪ್ರಜಾಕೀಯ ಪಕ್ಷದಲ್ಲಿ ಸೇವಾ ಮನೋಭಾವ ಇದೆ. ಯಾವುದೇ ರೀತಿಯ ಪಾರ್ಟಿ ಫಂಡ್ ಸಂಗ್ರಹ ಮಾಡುತ್ತಿಲ್ಲ. ಪಕ್ಷದ ಅಭ್ಯರ್ಥಿಗಳಿಗಾಗಿ ನನ್ನ ಕೈಯಿಂದ ಹಣ ಖರ್ಚು ಮಾಡುತ್ತಿದ್ದೇನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜನರಿಗೆ ಪರ್ಯಾಯ ವ್ಯವಸ್ಥೆ ಬೇಕಿದೆ
ಪ್ರಸ್ತುತ ಹಣ, ಪವರ್ ಶೇ.20 ಜನರನ್ನು ಆಳುತ್ತಿದೆ. ನಮ್ಮಪಕ್ಷದ ವ್ಯವಸ್ಥೆ ಮುಂದಿನ ಪೀಳಿಗೆಗಾದರೂ ಸಹಾಯವಾಗಬಹುದು. ರಾಜಕೀಯ ವ್ಯಾಪಾರವಲ್ಲ. ಸಮಾಜ ಸೇವೆ, ರಾಜ್ಯಕ್ಕೆ ಪ್ರಬಲ ಪ್ರಾದೇಶಿಕ ಪಕ್ಷೃ ಬೇಕು. ಯಾರ ಜತೆಗೂ ಹೊಂದಾಣಿಕೆ ಆಗದೆ ಜನರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಪಕ್ಷೃ ಬೇಕು. ಜನರೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ದೇಶದಲ್ಲಿ ರಾಜಕಾರಣವೇ ಹೋಗಿ ಬಿಡಬೇಕು. ನಾನು ಹೊರಟಿರೋ ದಾರಿಯಲ್ಲಿ ಯಶಸ್ಸು ಸಿಗುವುದು ತುಂಬ ಕಷ್ಟ. ಪರ್ಯಾಯ ದಾರಿ ಆರಂಭ ಮಾಡಿದ್ದೇವೆ. ನಾವು ಯಾವುದೇ ರ‌್ಯಾಲಿ, ಸಭೆ, ಸಮಾರಂಭ, ಸ್ಟಾರ್ ಪ್ರಚಾರ ಮಾಡಲ್ಲ. ಜನರು ನಮ್ಮ ಸ್ಟಾರ್ ಪ್ರಚಾರಕರು. ಕೆಲಸ ಕೊಟ್ಟರೆ ಮಾಡುತ್ತೇವೆ ಎಂದು ತಿಳಿಸಿದರು.

ಪಕ್ಷಗಳೊಂದಿಗೆ ಹೊಂದಾಣಿಕೆ ಇಲ್ಲ
ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಹಣ ಹೊರಗೆ ಇಟ್ಟರೆ ಜ್ಞಾನ ತಾನಗಿಯೇ ಒಳಗೆ ಬರುತ್ತದೆ. ರಾಷ್ಟ್ರೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸಮಾಜದಲ್ಲಿ ಬದಲಾವಣೆ ಗಾಳಿ ಶುರುವಾಗಿದೆ. ಯಾವುದೇ ರೀತಿಯಿಂದ ಹುಸಿ ನಂಬಿಕೆ ಇಟ್ಟುಕೊಂಡಿಲ್ಲ. ನಮ್ಮ ಪಕ್ಷದಿಂದ ಆಯ್ಕೆಯಾದ ಪ್ರಜಾಪ್ರತಿನಿಧಿಗಳು ಜನರ ಸೇವೆ ಮಾಡಬೇಕು. ಅದಕ್ಕೆ ಬದ್ಧರಾಗಿ ಕೆಲಸ ಮಾಡದಿದ್ದರೆ ಪಕ್ಷದಿಂದ ಉಚ್ಚಾಟನೆ ಮಾಡುತ್ತೇವೆ. ಕ್ರಿಮಿನಲ್‌ಗಳಿಗೆ ಪಕ್ಷದಲ್ಲಿ ಅವಕಾಶವಿಲ್ಲ. ನಮ್ಮ ಮೈಂಡ್‌ಸೆಟ್ ಬದಲಾವಣೆಯಾದಾಗ ಮಾತ್ರ ವ್ಯವಸ್ಥೆ ಸುಧಾರಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದೇನೆ. ಜನರ ಸೇವೆ ಮಾಡಲು ಅವಕಾಶ ಕೊಟ್ಟರೆ ಖಂಡಿತವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ. ಪ್ರಣಾಳಿಕೆ ಬಿಡುಗಡೆ ಮಾಡಿ ಗಿಮಿಕ್ ಮಾಡುವುದಿಲ್ಲ. ಆಯ್ಕೆಯಾದ ಮೇಲೆ ಸೇವೆ ಮಾಡುತ್ತೇವೆ.
ಎಂ.ಶಿವುಕುಮಾರ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ (ಬಾಗಲಕೋಟೆ)