ಶಾಂತಿ ಪಾಲನೆಯಲ್ಲಿ ಪೊಲೀಸರ ಪಾತ್ರ ದೊಡ್ಡದು

ಪೊಲೀಸ್ ಹುತಾತ್ಮ ದಿನಾಚರಣೆ >>

ಬಾಗಲಕೋಟೆ: ದೇಶ, ರಾಜ್ಯ, ಸಮಾಜದಲ್ಲಿ ಶಾಂತಿ ನೆಲೆಸಲು ಪೊಲೀಸರ ಕಾರ್ಯ ಶ್ಲಾಘನೀಯ. ಪೊಲೀಸರು ಹಗಲು, ರಾತ್ರಿ ಶ್ರಮಿಸುತ್ತಾರೆ ಎಂದು ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ. ಹೇಳಿದರು.

ಇಲ್ಲಿನ ನವನಗರದಲ್ಲಿರುವ ಪೊಲೀಸ್ ಹುತಾತ್ಮ ಪರೇಡ್ ಮೈದಾನದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸ್ ವೀರಗಲ್ಲಿಗೆ ನಮನ ಸಲ್ಲಿಸಿ ಅವರು ಮಾತನಾಡಿದರು.

ಅನೇಕ ಕಠಿಣ ಸಂದರ್ಭದಲ್ಲೂ ಪೊಲೀಸರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಕರ್ನಾಟಕ ಪೊಲೀಸ್ ಕಾರ್ಯ ದೇಶದಲ್ಲಿ ಮಾದರಿಯಾಗಿದೆ. ಇಲ್ಲಿನ ಪೊಲೀಸರ ಕಾರ್ಯ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಸಮಾಜದ ಶಾಂತಿ ಪಾಲನೆಯಲ್ಲಿ ಪೊಲೀಸರ ಪಾತ್ರ ದೊಡ್ಡದಿದೆ ಎಂದರು.

ಸಮಾಜದ ದುಷ್ಟಶಕ್ತಿಗಳಿಗೆ ತಕ್ಕ ಪಾಠ ಕಲಿಸಲು ಪೊಲೀಸರ ಮೇಲೆ ಪ್ರತಿನಿತ್ಯ ಒತ್ತಡವಿರುತ್ತದೆ. ತಮ್ಮ ವೈಯಕ್ತಿಕ ಸಂತೋಷ, ಸಂಭ್ರಮ ಬದಿಗೊತ್ತಿ ಪೊಲೀಸರು ಕೆಲಸ ಮಾಡುತ್ತಾರೆ. ಪೊಲೀಸರ ನೆಮ್ಮದಿ ಕಾಪಾಡುವುದು ಸಮಾಜದ ಮೇಲಿದೆ. ನಾಗರಿಕ ಸಮಾಜ ಪೊಲೀಸ್ ಇಲಾಖೆ ಕೆಲಸಕ್ಕೆ ಸಾಥ್ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ ಮಾತನಾಡಿ, ಕರ್ತವ್ಯ ನಿರತರಾಗಿದ್ದ ವೇಳೆ ಮೃತಪಟ್ಟ ಸಿಬ್ಬಂದಿ ಮತ್ತು ಕುಟುಂಬಗಳಿಗೆ ಇಲಾಖೆಯಿಂದ ಎಲ್ಲ ಸಹಾಯ ಮಾಡಲಾಗುತ್ತಿದೆ. ಸಾರ್ವಜನಿಕರ ರಕ್ಷಣೆ ವೇಳೆ ಮತ್ತು ಹಿಂಸಾಚಾರ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮಡಿದರೆ ಅವರ ಕುಟುಂಬ ಓರ್ವ ಅನ್ನದಾತನನ್ನು ಕಳೆದುಕೊಳ್ಳುವುದರ ಜತೆಗೆ ಸಮಾಜ ರಕ್ಷಕರನ್ನು ಕಳೆದುಕೊಳ್ಳುತ್ತದೆ. ಈ ದಿನ ಕೇವಲ ಹೂ ಮಾಲೆ ಹಾಕುವುದು, ಪರೇಡ್ ಮಾಡುವುದಕ್ಕಷ್ಟೇ ಪೊಲೀಸ್ ದಿನಾಚರಣೆ ಎಂದು ಭಾವಿಸಬಾರದು. ಹುತಾತ್ಮರಾದ ಪೊಲೀಸರ ಸ್ಮರಿಸುವಂತಾಗಬೇಕು ಎಂದು ತಿಳಿಸಿದರು.

ಪೊಲೀಸ್ ಹುತಾತ್ಮ ವೀರಗಲ್ಲಿಗೆ ಪುಷ್ಪ ನಮನ ಅರ್ಪಿಸಿ ಗೌರವ ಸಲ್ಲಿಸಲಾಯಿತು. ಡಿವೈಎಸ್‌ಪಿ ಗಿರೀಶ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಯು.ಬಿ. ಚಿಕ್ಕಮಠ, ಮುಖಂಡರಾದ ಕುತ್ಬುದ್ದೀನ್ ಖಾಜಿ, ಎ.ಎ. ದಂಡಿಯಾ, ಮಹಾಬಳೇಶ್ವರ ಗುಡಗುಂಟಿ ಸೇರಿ ಇತರರು ಉಪಸ್ಥಿತರಿದ್ದರು.