ಸಂತೋಷ ದೇಶಪಾಂಡೆ
ಬಾಗಲಕೋಟೆ: ಪ್ಲಾಸ್ಟಿಕ್ ತ್ಯಾಜ್ಯ ನಿವಾರಣೆ ವಿಶ್ವದ ಪ್ರಮುಖ ಸಮಸ್ಯೆಗಳಲ್ಲೊಂದು. ಪರಿಸರ ಹಾಗೂ ಜೀವಿಗಳ ಪ್ರಾಣಕ್ಕೆ ಎರವಾಗುವ ಪ್ಲಾಸ್ಟಿಕ್ ಬಳಕೆಗೆ ಎಷ್ಟೇ ನಿಯಮಗಳನ್ನು ಮಾಡಿ ಕಡಿವಾಣ ಹಾಕಿದರೂ ಅದೆಲ್ಲವೂ ಕೇವಲ ‘ಕಾಗದದ ಹುಲಿ’ಯಂತಾಗಿದೆ.
ಪ್ಲಾಸ್ಟಿಕ್ನಲ್ಲಿ ಬಿಸಿ ಪದಾರ್ಥಗಳನ್ನು ಹಾಕಿ ಬಳಸುವುದರಿಂದ ಅದರಲ್ಲಿಯ ವಿಷಕಾರಿ ಅಂಶಗಳನ್ನು ದೇಹವನ್ನು ಸೇರಿ ಕಾಯಿಲೆಗಳಿಗೆ ಕಾರಣವಾದರೆ, ಭೂಮಿಯಲ್ಲಿ ಕರಗದೆ ಇರುವಂತಹ ಪ್ಲಾಸ್ಟಿಕ್ ತ್ಯಾಜ್ಯಗಳು ಒಳ ಚರಂಡಿಗಳಲ್ಲಿ ಸೇರಿ ನೀರಿನ ಸರಾಗ ಹರಿವಿಗೆ ಅಡಚಣೆಯನ್ನುಂಟು ಮಾಡಿ ಜಲ ಮೂಲಗಳ ಮಾಲಿನ್ಯಕ್ಕೆ ಕಾರಣವಾಗುತ್ತಿರುವುದು ಕಟು ಸತ್ಯ. ಅದರಲ್ಲೂ ಕ್ಯಾರಿಬ್ಯಾಗ್ಗಳ ಬಳಕೆ ಮಿತಿಮೀರಿದೆ.
ಈ ನಿಟ್ಟಿನಲ್ಲಿ ಸರ್ಕಾರ, ಪರಿಸರ (ಸಂರಕ್ಷಣೆ)ಕಾಯ್ದೆ 1986 ಸೆಕ್ಷನ್ 5ರಲ್ಲಿನ ಅಧಿಕಾರ ಚಲಾಯಿಸಿ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ ಹಾಗೂ ಮಾರಾಟ ನಿಷೇಧಿಸಿ 2015ರಲ್ಲಿ ಆದೇಶ ಹೊರಡಿಸಿದ್ದರೂ, ಸಮರ್ಪಕವಾಗಿ, ಕಠಿಣ ಕ್ರಮ ಕೈಗೊಳ್ಳದ ಹಿನ್ನೆಲೆ ಪ್ಲಾಸ್ಟಿಕ್ ದಿನನಿತ್ಯದ ಬಳಕೆಯ ಅಗತ್ಯ ವಸ್ತುವಾಗಿಬಿಟ್ಟಿದೆ.
ಏನೇನು ನಿಷೇಧ ?
ಸರ್ಕಾರದ ಆದೇಶದಂತೆ 50 ಮೈಕ್ರಾನ್ಗಿಂತ ತೆಳುವಾದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ತೋರಣ, ಫ್ಲೆಕ್ಸ್, ತಟ್ಟೆ, ಲೋಟ, ಚಮಚ, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಬೀಡ್ಸ್ನಿಂದ ತಯಾರಾದ ವಸ್ತುಗಳ ತಯಾರಿಕೆ, ಸರಬರಾಜು, ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ, ಜಿಲ್ಲೆಯಲ್ಲಿನ ಯಾವುದೇ ನಗರ, ಸ್ಥಳೀಯ ಸಂಸ್ಥೆಗಳು ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ. ಕಾಯ್ದೆ ಅನುಷ್ಠಾನಗೊಳಿಸಲು 5-6 ಇಲಾಖೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು. ಇದರಲ್ಲಿ ಸ್ಥಳೀಯ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ. ಆದರೆ, ಈ ಕುರಿತು ಸಮಿತಿ ಸದಸ್ಯರ ಸಭೆ, ಜಂಟಿ ಸಭೆ ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ನಿಷೇಧ ಎನ್ನುವುದು ಬರೀ ಕಾಗದಕ್ಕೆ ಸೀಮಿತವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ‘ವಿಜಯವಾಣಿಗೆ’ ತಿಳಿಸಿದರು.
ಕಾಟಾಚಾರದ ದಾಳಿ
ಕಾಯ್ದೆ ಜಾರಿ ಬಳಿಕ ಆರಂಭದಲ್ಲಿ ಜಿಲ್ಲೆಯ ನಗರ ಹಾಗೂ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದಿದ್ದವು. ಇದರಿಂದ ವ್ಯಾಪಾರಸ್ಥರಲ್ಲಿ ನಡುಕ ಉಂಟಾಗಿತ್ತು. ಇನ್ನೇನು ಪ್ಲಾಸ್ಟಿಕ್ ವಸ್ತುಗಳು ಸಂಪೂರ್ಣ ಕಣ್ಮರೆಯಾಗಲಿವೆ ಎಂಬ ಭಾವನೆ ಎಲ್ಲರಲ್ಲಿ ಮೂಡಿತ್ತು. ಆದರೆ, ಅಧಿಕಾರಿಗಳು ಆರಂಭದಲ್ಲಿ ತೋರಿಸಿದ ಉತ್ಸಾಹವನ್ನು ನಂತರದಲ್ಲಿ ಉಳಿಸಿಕೊಳ್ಳಲಿಲ್ಲ. ಹಾಗಾಗಿ ಮತ್ತೆ ಯಥಾಸ್ಥಿತಿ ಮುಂದುವರಿಯಿತು. ಬಾಗಲಕೋಟೆ ನಗರದಲ್ಲಿ ಅನೇಕ ಸಾರಿ ಸಗಟು, ಚಿಲ್ಲರೆ ಮಾರಾಟಗಾರರ ಸಭೆ ನಡೆಸಿ ಪ್ಲಾಸ್ಟಿಕ್ ನಿಷೇಧ ಬಗ್ಗೆ ತಿಳಿವಳಿಕೆ ನೀಡಿದರೂ ಮಾರಾಟ, ಬಳಕೆ ಮಾತ್ರ ನಿಂತಿಲ್ಲ.
ಇದೀಗ ಕೆಲ ದಿನಗಳಿಂದ ಜಿಲ್ಲೆಯ ರಬಕವಿ-ಬನಹಟ್ಟಿ, ಮುಧೋಳ, ಬಾಗಲಕೊಟೆ ಇಳಕಲ್ಲ ಸೇರಿ ಕೆಲವೇ ನಗರ, ಸ್ಥಳೀಯ ಸಂಸ್ಥೆಗಳು ಮತ್ತೆ ದಾಳಿ ಆರಂಭಿಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದು ದಂಡ ಹಾಕಿ, ಅಂಗಡಿಕಾರರಿಗೆ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದ್ದು, ಆದರೆ, ಕಠಿಣ ಕ್ರಮ ಜರುಗಿಸುತ್ತಿಲ್ಲ. ಕಾಟಾಚಾರಕ್ಕೆ ದಾಳಿ ಎಂಬಂತಾಗಿದೆ ಎಂದು ಪರಿಸರವಾದಿಗಳು ಆರೋಪಿಸುತ್ತಿದ್ದಾರೆ.
ನಮ್ಮ ಗಮನಕ್ಕೆ ಬಂದ ತಕ್ಷಣ ದಾಳಿ ಮಾಡಿದ್ದೇವೆ. ಇದೇ ಮೇ 22ರಂದು ನಗರದಲ್ಲಿ ದಾಳಿ ಮಾಡಿ 40 ಸಾವಿರ ರೂ. ಮೌಲ್ಯದ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದು ಮಾರಾಟಗಾರರಿಗೆ 5 ಸಾವಿರ ದಂಡ ವಿಧಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ ಹಾಗೂ ಮಾರಾಟ ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.
– ಹನುಮಂತ ಕಲಾದಗಿ ಬಾಗಲಕೋಟೆ ನಗರಸಭೆ ಪರಿಸರ ಅಧಿಕಾರಿಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಕಾಯ್ದೆ ಪಾಲನೆ ಮಾಡಲಾಗುತ್ತಿದೆ. ಕೆಲವು ಕಡೆ ನಿಷ್ಕಾಳಜಿ ವಹಿಸಿರುವುದು ನಿಜ. ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಉತ್ಪಾದನೆ ಘಟಕಗಳು ಇಲ್ಲ. ಸರಬರಾಜು ಹಾಗೂ ಬಳಕೆ ತಡೆಯಲು ಸಮಿತಿ ಸದಸ್ಯರು ಒಗ್ಗೂಡಿ ಕಾರ್ಯ ನಿರ್ವಹಿಸಬೇಕಿದೆ. ಈ ಬಗ್ಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಮತ್ತೊಮ್ಮೆ ಪತ್ರ ಬರೆದು ಸೂಚನೆ ನೀಡುತ್ತೇನೆ.
– ಎಂ.ಎ. ಮನಿಯಾರ ಜಿಲ್ಲಾ ಪರಿಸರ ಅಧಿಕಾರಿ, ಬಾಗಲಕೋಟೆಪ್ಲಾಸ್ಟಿಕ್ ನಿಷೇಧ ಕುರಿತು ಸರ್ಕಾರ ನೀಡಿರುವ ಆದೇಶ ಪಾಲನೆ ಮಾಡಬೇಕು ಎಂದು ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಆಯುಕ್ತರಿಗೆ ಸಭೆಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಲು, ಕಠಿಣ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಜನ ಸಾಮಾನ್ಯರೂ ಜವಾಬ್ದಾರಿ ಅರಿತು ಬಳಕೆ ನಿಲ್ಲಿಸಿ ಪರಿಸರ ಕಾಳಜಿ ಮೆರೆಯಬೇಕು.
– ಆರ್. ರಾಮಚಂದ್ರನ್ ಬಾಗಲಕೋಟೆ, ಜಿಲ್ಲಾಧಿಕಾರಿ