ರಂಗಿನಾಟಕ್ಕೆ ಸಂಭ್ರಮದ ತೆರೆ

ಬಾಗಲಕೋಟೆ: ಮೂರು ದಿನಗಳ ಕಾಲ ಅತ್ಯಂತ ವೈಭವದಿಂದ ನಡೆದ ಮುಳುಗಡೆ ನಗರಿಯ ಬಣ್ಣದೋಕುಳಿ ಶನಿವಾರ ಅದ್ದೂರಿಯಾಗಿ ಸಂಪನ್ನಗೊಂಡಿತು.

ಕಾಮದಹನ ಬಳಿಕ ಅದ್ದೂರಿ ಚಾಲನೆ ದೊರೆತಿದ್ದ ಬಣ್ಣದೋಕುಳಿ ಮೂರು ದಿನಗಳ ಕಾಲ ಇಡೀ ನಗರ ಬಣ್ಣದಲ್ಲಿ ಮಿಂದೆದ್ದಿತು. ನಸುಕಿನ ಜಾವ ಹಲಗೆ ನಾದ, ಶಹನಾಯಿ ಸ್ವರದೊಂದಿಗೆ ಆರಂಭಗೊಳ್ಳುತ್ತಿದ್ದ ಬಣ್ಣದೋಕುಳಿ ಮಧ್ಯಾಹ್ನದ ವೇಳೆಗೆ ರಂಗು ಪಡೆಯುತ್ತಿತ್ತು.

ಪ್ರವಾಸಕ್ಕೆ ತೆರಳಿದವರು ಮರಳಿ ನಗರಕ್ಕೆ ಆಗಮಿಸಿದ್ದರಿಂದ ಕೊನೇ ದಿನದ ಬಣ್ಣದಾಟ ಮತ್ತಷ್ಟು ರಂಗು ಪಡೆದುಕೊಂಡಿತು. ಮಕ್ಕಳು, ಯುವಕ, ಯುವತಿಯರು ಸೇರಿ ಸಹಸ್ರಾರು ಜನ ಬಣ್ಣದೋಕುಳಿಯಲ್ಲಿ ಮಿಂದೆದ್ದರು. ಬಂಡಿ, ಟ್ರಾೃಕ್ಟರ್‌ನಲ್ಲಿ ನಿಂತು ಎದುರಾಳಿಗಳಿಗೆ ಬಣ್ಣದ ನೀರಿನ ಮಜ್ಜನ ಮಾಡಿದರು. ಬಗೆ ಬಗೆಯ ಬಣ್ಣ ಹಚ್ಚುವುದರ ಜತೆಗೆ ಆಕರ್ಷಕ ರೀತಿಯಲ್ಲಿ ಹಲಿಗೆ ಬಾರಿಸಿ ರಂಜಿಸಿದರು. ಬಾಯಿ ಬಡಿದುಕೊಳ್ಳುವ ಮೂಲಕ ಹೋಳಿ ಹಬ್ಬಕ್ಕೆ ವಿಶೇಷ ಮೆರಗು ನೀಡಿದರು.

ಮಕ್ಕಳು ಕೈಯಲ್ಲಿ ಪಿಚಕಾರಿಗಳನ್ನು ಹಿಡಿದು ಸಿಕ್ಕ ಸಿಕ್ಕವರೆಲ್ಲರಿಗೂ ಶೂಟ್ ಮಾಡುತ್ತಿದ್ದರು. ದೊಡ್ಡವರು, ಬಣ್ಣದ ಲೋಕದಿಂದ ದೂರ ಉಳಿದ, ಮನೆಯಲ್ಲಿ ಸೇರಿದ್ದ ಸ್ನೇಹಿತರನ್ನು ಹೊರಗಡೆ ಎಳೆದುತಂದು ಬಣ್ಣ ಹಚ್ಚುತ್ತಿದ್ದರು. ಯುವಕರು ಅಣಕು ಶವಯಾತ್ರೆ ನಡೆಸಿ ರಂಜಿಸಿದರು. ಮಹಿಳೆ, ಯುವತಿಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕೋಟೆನಗರಿಯ ಬೀದಿ ಬೀದಿಯಲ್ಲಿ ಎಲ್ಲಿ ನೋಡಿದರೂ ಬ್ಯಾರಲ್‌ಗಳಲ್ಲಿ ಬಣ್ಣದ ನೀರು ತುಂಬಿಕೊಂಡು ರಸ್ತೆ ಮೇಲೆ ಹಾಯ್ದು ಹೋಗುತ್ತಿದ್ದ ಬೈಕ್ ಸವಾರರು ಮತ್ತು ಜನರ ಮೇಲೆ ಮುಖಗಳಿಗೆ ರಪ್ಪೆಂದು ನೀರು ಎರಚುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಆತ್ಮೀಯರು, ಸ್ನೇಹಿತರು, ಪರಿಚಯದವರು ಸಿಕ್ಕರಂತೂ ಅವರನ್ನು ಬರಿ ಮೈಯಲ್ಲಿ ಕೂಡಿಸಿ, ಬಣ್ಣದ ಜಲಾಭಿಷೇಕ ಮಾಡುತ್ತ ಸಂಭ್ರಮಪಟ್ಟರು.

ಯುವಕರಂತೂ ಬೈಕ್ ಮೇಲೆ ಜಾಲಿ ರೈಡ್ ಮಾಡಿ, ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು. ಬಿಜೆಪಿ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗಿ ಚುನಾವಣೆ ರಂಗಿಗೆ ನಾಂದಿ ಹಾಡಿದರು. ಯುವ ಪಡೆ ಮುಖದ ಒಂದು ಭಾಗದಲ್ಲಿ ವಾರ್ನಿಷ್, ಇನ್ನೊಂದು ಭಾಗದಲ್ಲಿ ಕಲರ್ ಕಲರ್ ಬಣ್ಣ ಹಚ್ಚಿಕೊಂಡು ನೃತ್ಯ ಮಾಡುತ್ತ ಗಮನ ಸೆಳೆದರು. ಹಲಗೆ ನಾದದ ಜತೆಗೆ ಧ್ವನಿವರ್ಧಕಗಳನ್ನು ಹಚ್ಚಿಕೊಂಡು ಮೈಮರೆತು ಕುಣಿದರು.

ಡಿಜೆ ಸೌಂಡ್‌ಗೆ ಮನಸೋತ ಜನತೆ
ದೇಶದಲ್ಲಿ ಬಣ್ಣದಾಟದಲ್ಲಿ ಗಮನ ಸೆಳೆದಿರುವ ಬಾಗಲಕೋಟೆ ಹೋಳಿ ಹಬ್ಬ ಕೊನೆಯ ದಿನ ವಿನೂತನ ರೀತಿಯಲ್ಲಿ ಕಂಗೊಳಿಸಿತು. ಬಾಗಲಕೋಟೆ ಹಬ್ಬ ತಂಡ, ಹೋಳಿ ಆಚರಣೆ ಸಮಿತಿ ಜಂಟಿಯಾಗಿ ಬಸವೇಶ್ವವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ರೇನ್‌ಡಾನ್ಸ್ (ಕೃತಕ ಮಳೆ) ಕೋಟೆ ನಗರಿ ರಂಗಿನಾಟಕ್ಕೆ ಕಳೆ ತಂದಿತು.
ತುಂತುರು ಹನಿಗಳ ನಡುವೆ ಯುವಕರು ಕುಣಿದು ಕುಪ್ಪಳಿಸಿದರು. ಇದರೊಂದಿಗೆ ಡಿಜೆ ಸಾಂಗ್ ಸಾಥ್ ನೀಡಿದ್ದು ಆಕರ್ಷಿಸಿತು. ತುರಾಯಿ ಹಲಗೆ ನಿನಾದ ಹೋಳಿ ಹಬ್ಬ ಮೆರಗು ಹೆಚ್ಚಿಸಿತು. ಡಿಜೆ ಸೌಂಡ್ ಮತ್ತು ಹಲಗೆ ನಿನಾದಕ್ಕೆ ಕೋಟೆನಗರಿ ಜನಮನಸೋತರು.

ಮುಖಂಡರಾದ ಆನಂದ ಜಿಗಜಿನ್ನಿ, ರವಿ ಕುಮಟಗಿ, ವೀರೇಶ ರೋಣದ, ದುಂಡಪ್ಪ ಏಳಮ್ಮಿ, ಕಳಕಪ್ಪ ಬಾದವಾಡಗಿ, ಜಯಂತ ಕುರಂದವಾಡ ಇತರರು ನೇತೃತ್ವ ವಹಿಸಿದ್ದರು.