ಇಪಿಎಸ್ ಪಿಂಚಣಿದಾರರ ಪ್ರತಿಭಟನೆ

ಬಾಗಲಕೋಟೆ: ಕನಿಷ್ಠ ಪಿಂಚಣಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಮಹಾಮಂಡಳ ನೇತೃತ್ವದಲ್ಲಿ ಜಿಲ್ಲೆಯ ಇಪಿಎಸ್ ಪಿಂಚಣಿದಾರರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಕಾಲೇಜು ರಸ್ತೆ, ಬಸ್ ನಿಲ್ದಾಣ ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಭವಿಷ್ಯ ನಿಧಿ ಕಚೇರಿ ಮೂಲಕ ಕೇಂದ್ರ ಸರ್ಕಾರಕ್ಕೆ ಪಿಂಚಣಿದಾರರು ಮನವಿ ಸಲ್ಲಿಸಿದರು.

ಇಪಿಎಸ್(ಎಂಪ್ಲಾಯ್ ಪೆನ್ಷನ್ ಸ್ಕೀಮ್) ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ. ಅತ್ಯಂತ ಕಡಿಮೆ ಪಿಂಚಣಿ ಬರುತ್ತಿದ್ದು, ದುಬಾರಿ ಕಾಲದಲ್ಲಿ ಬದುಕುವುದು ಕಷ್ಟವಾಗುತ್ತಿದೆ. ಕನಿಷ್ಠ ಪಿಂಚಣಿ ನೀಡಬೇಕು ಎಂದು ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ 64ಲಕ್ಷ ಜನರು ಇಪಿಎಸ್ ಪಿಂಚಣಿದಾರರು ಇದ್ದಾರೆ. ಕನಿಷ್ಠ 5 ರಿಂದ 6 ಸಾವಿರ ಪಿಂಚಣಿ ನೀಡಬೇಕು. ಭಗತ್‌ಸಿಂಗ್ ರೂಸಿಯಾರ್ ಸಮಿತಿ ವರದಿ ಅನುಷ್ಠಾನಗೊಳಿಸಬೇಕು. 2017ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲನೆ ಮಾಡಬೇಕು ಎಂದು ಪಿಂಚಣಿದಾರರು ಒತ್ತಾಯಿಸಿದರು.

ಕಾರ್ಮಿಕ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಮಹಾಮಂಡಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಮಂಟೂರ, ಮುಖಂಡರಾದ ರೆಹಮಾನ್ ಬಿದರಕುಂದಿ, ಎಂ.ಐ.ಮಗದಾಳ, ಆರ್.ಆರ್.ಬೆಳಗಲ್, ಎಚ್.ಎನ್.ನಿಂಗನಗೌಡ, ಎಂ.ಅಯ್ಯನಗೌಡರ ಪ್ರತಿಭಟನೆಯಲ್ಲಿ ಇದ್ದರು.

Leave a Reply

Your email address will not be published. Required fields are marked *