More

    ಕಾಟಾಚಾರದ ಆಯವ್ಯಯ ಸಿದ್ಧತಾ ಸಭೆ

    ಬಾಗಲಕೋಟೆ: ಪೇಜಾವರ ವಿಶ್ವೇಶತೀರ್ಥ ಶ್ರೀಗಳ ಕೃಷ್ಣೈಕ್ಯ ಹಿನ್ನೆಲೆ ರಾಜ್ಯ ಸರ್ಕಾರದ ಮೂರು ದಿನಗಳ ಶೋಕಾಚರಣೆ ಆದೇಶ ಉಲ್ಲಂಘಿಸಿ ಮಂಗಳವಾರ ನಡೆಸಿದ ಬಾಗಲಕೋಟೆ ನಗರಸಭೆ ಬಜೆಟ್ ಪೂರ್ವಭಾವಿ ಸಭೆಯನ್ನು ಕಾಟಾಚಾರಕ್ಕೆ ಎಂಬಂತೆ ನಡೆಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

    2020-21ರ ಆಯವ್ಯಯ ಸಿದ್ಧಪಡಿಸಲು ನಾಗರಿಕರಿಂದ ಸಲಹೆ ಪಡೆಯಲೆಂದು ಬಾಗಲಕೋಟೆ ನಗರಸಭೆ ಆಯುಕ್ತರು ಸಮಯದಾಯ ಭವನದಲ್ಲಿ ಮಂಗಳವಾರ ಮಧ್ಯಾಹ್ನ 12.30 ಗಂಟೆಗೆ ಸಾರ್ವಜನಿಕ ಸಭೆ ನಿಗದಿಪಡಿಸಿದ್ದರು. ಶೋಕಾಚರಣೆ ಹಿನ್ನೆಲೆ ಈ ಸಭೆಯನ್ನು ಮುಂದೂಡಬೇಕಿತ್ತು. ಸಭೆಗೆ ಆಗಮಿಸುವಂತೆ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಕೋರಲಾಗಿತ್ತು. ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡದೆ ನಡೆಸಿದ ಈ ಸಭೆಯಲ್ಲಿ ಕೇವಲ ಮೂರು ಜನರು ಮಾತ್ರ ಪಾಲ್ಗೊಂಡಿದ್ದರು. ಭಾಗವಹಿಸಿದ ಸಾರ್ವಜನಿಕ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳದೆ ಆಯುಕ್ತರು ಸಭೆಯಲ್ಲಿದ್ದ ಮೂವರಿಂದ ಮಾತ್ರ ಸಲಹೆ ಪಡೆದಿದ್ದಾರೆ. ಪ್ರತಿವರ್ಷ ಪೂರ್ವಭಾವಿ ಸಭೆಯಲ್ಲಿ ನಗರಸಭೆ ಸದಸ್ಯರು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯವ್ಯಕ್ತಿಗಳು ಹಾಜರಿರುತ್ತಿದ್ದರು.

    ಸದಸ್ಯರಿಗೆ ಮಾಹಿತಿನೇ ಇಲ್ಲ !
    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ, ನಗರಸಭೆ ಸದಸ್ಯರಿಗೆ ಮಾಹಿತಿ ನೀಡಲಾಗಿತ್ತು. ಆದರೂ ಬಂದಿಲ್ಲ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಕೂಡ ಹುಸಿಯಾಯಿತು. ಇದೇ ಸಭೆ ಕೊನೆ. ಮತ್ತೆ ಏರ್ಪಡಿಸುವುದಿಲ್ಲ. ಆಯವ್ಯಯ ಸಿದ್ಧಪಡಿಸಲಾಗುವುದು ಎಂದರು.

    ಆದರೆ, ನಗರಸಭೆ ಸದಸ್ಯರು ಹೇಳುವುದೇ ಬೇರೆ. ಆಯ್ಕೆಯಾಗಿ ಒಂದು ವರ್ಷವಾಗಿದೆ. ಇದುವರೆಗೂ ಅಧಿಕಾರ ಭಾಗ್ಯ ದೊರಕಿಲ್ಲ. ನಮ್ಮ ವಾರ್ಡ್‌ಗಳ ಸಮಸ್ಯೆ ಆಲಿಸಿ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಗರದ ಅಭಿವೃದ್ಧಿ ಯೋಜನೆಗಳ ಕುರಿತು ಆಯವ್ಯಯ ಸಿದ್ಧಪಡಿಸಲು ಸಾರ್ವಜನಿಕ ಸಭೆ ಏರ್ಪಡಿಸಿದರೂ ನಗರಸಭೆ ಆಯುಕ್ತರು ಚುನಾಯಿತ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಶಿಷ್ಟಾಚಾರದ ಪಾಲನೆ ಮಾಡಿಲ್ಲ ಎಂದು ನಗರಸಭೆ ಸದಸ್ಯರು ‘ವಿಜಯವಾಣಿ’ ಎದುರು ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಸಭೆಯಲ್ಲಿ ಯಾರು ಏನಂದ್ರು ?
    ಬಾಗಲಕೋಟೆ ನಡುಗಡ್ಡೆ ಹೋರಾಟ ಸಮಿತಿ ಕಾರ್ಯದರ್ಶಿ ಅರವಿಂದ ಮುಚಖಂಡಿ ಮಾತನಾಡಿ, ನಗರದಲ್ಲಿ ಹಂದಿ ಹಾವಳಿ ಇದೆ. ಸಾರ್ವಜನಿಕರಿಂದ ಬೇರ್ಪಡುವ ಹಸಿ, ಒಣ ತ್ಯಾಜ್ಯ ನಗರಸಭೆಯಿಂದ ಸರಿಯಾಗಿ ವಿಂಗಡಣೆಯಾಗುತ್ತಿಲ್ಲ. ನಗರಸಭೆ ದಾಖಲೆಗಳು ಸರಿಯಾಗಿಲ್ಲ. ಸಾರ್ವಜನಿಕರಿಂದ ದೂರು ಸ್ವೀಕರಿಸಲು ನಗರಸಭೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟ್ಟರ್ ಖಾತೆಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.

    ನಗರದ ನಿವಾಸಿ ಶಾಮ ಅಂಬಿಗೇರ ಮಾತನಾಡಿ, ವಾಂಬೆ, ವಾಜಪೇಯಿ ಕಾಲನಿಗಳಲ್ಲಿ ನೀರಿನ ಸಮಸ್ಯೆ ಇದೆ. ರಸ್ತೆಗಳು ಸುಧಾರಣೆಯಾಗಿಲ್ಲ. ಬೀದಿ ದೀಪಗಳು ಸರಿಯಾಗಿಲ್ಲ ಎಂದು ದೂರಿದರು.

    ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ ಮಾತನಾಡಿ, ಬಾಗಲಕೋಟೆ ನಗರಸಭೆ ವಾರ್ಷಿಕ ಮೂರು ಕೋಟಿ ರೂ.ಆದಾಯ ಹೊಂದಿದೆ. 2011ಜನಗಣತಿ ಪ್ರಕಾರ 1 ಲಕ್ಷ 11 ಸಾವಿರ ಜನಸಂಖ್ಯೆ ಇದ್ದರೆ, ಸದ್ಯ 1 ಲಕ್ಷ 52 ಸಾವಿರ ಜನ ಸಂಖ್ಯೆ ಇರಬಹುದು ಎಂದು ಅಂದಾಜಿಸಲಾಗಿದೆ. 117 ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಮುಳುಗಡೆ ಕಾರಣಕ್ಕೆ ಅನೇಕರು ಕಂದಾಯ ಕಟ್ಟುತ್ತಿಲ್ಲ. ಹಣಕಾಸಿನ ಸಮಸ್ಯೆ ಇದ್ದರೂ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ನಗರದ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಒಂದು ಪೈಸೆ ಕೂಡ ಅಪವ್ಯಯವಾಗದಂತೆ ಎಚ್ಚರ ವಹಿಸಲಾಗುವುದು. ಜ.15 ರೊಳಗೆ ಆಯವ್ಯಯ ಸಿದ್ಧಪಡಿಸಿ ಮಂಡಿಸಲಾಗುವುದು ಎಂದರು. ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರ ಚಂದ್ರಶೇಖರ ಅರಳಿಮಟ್ಟಿ ಸಭೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts