ಕೋಟೆನಗರಿಯಲ್ಲಿ ಆಕರ್ಷಕ ಪಥಸಂಚಲನ

ಬಾಗಲಕೋಟೆ: ದೇಶದ ಗಮನ ಸೆಳೆದಿರುವ ಬಾಗಲಕೋಟೆ ಆರ್​ಎಸ್​ಎಸ್ ಪಥಸಂಚಲನ ವಿಜಯದಶಮಿ ನಂತರದ ಮೊದಲ ಭಾನುವಾರ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಜರುಗಿತು. ಗಣವೇಷಧಾರಿಗಳ ಆಕರ್ಷಕ ಪಥ ಸಂಚಲನವನ್ನು ಸಹಸ್ರಾರು ಸಾರ್ವಜನಿಕರು ವೀಕ್ಷಿಸಿ ಸಂಭ್ರಮಿಸಿದರು.

ಆರ್​ಎಸ್​ಎಸ್ ನಗರ ವಾರ್ಷಿಕೋತ್ಸವ ಅಂಗವಾಗಿ ನಡೆದ ಪಥಸಂಚಲನಕ್ಕೆ ಇಡೀ ಬಾಗಲಕೋಟೆ ನಗರ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಬೀದಿ ಬೀದಿಗಳಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಗಲ್ಲಿ ಗಲ್ಲಿಗಳಲ್ಲಿ ರಸ್ತೆ, ಮನೆಗಳ ಮುಂದೆ ರಂಗೋಲಿ ಚಿತ್ತಾರ ಗಮನ ಸೆಳೆದವು. ಹಸಿರು ತೋರಣಗಳ, ಸ್ವಾಗತ ಕಟೌಟ್​ಗಳು ಸೇರಿ ನಗರದಲ್ಲಿ ಹಬ್ಬದ ವಾತಾವರಣ ನಿರ್ವಣವಾಗಿತ್ತು.

ಸಂಜೆ 4 ಗಂಟೆಗೆ ಸರಿಯಾಗಿ ಇಲ್ಲಿನ ಬಸವೇಶ್ವರ ಕಾಲೇಜು ಮೈದಾನದಿಂದ ಎರಡು ಮಾರ್ಗಗಳಲ್ಲಿ ಗಣವೇಷಧಾರಿ ಸ್ವಯಂ ಸೇವಕರು ಪಥಸಂಚಲನದಲ್ಲಿ ಪಾಲ್ಗೊಂಡರು. ಬಿಳಿ ಅಂಗಿ, ಖಾಕಿ ಪ್ಯಾಂಟ್, ತಲೆ ಮೇಲೆ ಟೋಪಿ, ಕೈಯಲ್ಲಿ ದಂಡ ಹಿಡಿದು ಗಜಗಾಂಭೀರ್ಯದ ಹೆಜ್ಜೆ ಹಾಕುತ್ತ ಸಾಗಿದರು. ಗಣವೇಷಧಾರಿಗಳ ಸಂಖ್ಯೆ 2500 ಗಡಿ ದಾಟಿತ್ತು.

ಕೋಟೆನಗರಿಯ ಪ್ರಮುಖ ರಸ್ತೆಗಳಲ್ಲಿ ಶಿಸ್ತಿನ ನಡಿಗೆ ನಡೆಸುತ್ತಿದ್ದರೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನಸ್ತೋಮ ಪುಷ್ಪಾರ್ಚನೆ ಮಾಡಿ ಸಂಭ್ರಮಿಸಿದರು. ಬೀದಿ ಬೀದಿಗಳಲ್ಲಿ ಚಿಕ್ಕ ಮಕ್ಕಳು ದೇಶಭಕ್ತರು, ಧಾರ್ವಿುಕ ಮುಖಂಡರು, ರಾಜ ಮಹಾರಾಜರು, ರಾಣಿಯರ ವೇಷಭೂಷಣ ಧರಿಸಿ ಗಣವೇಷಧಾರಿಗಳಿಗೆ ಪುಷ್ಪ ಚಿಂಚನಗೈಯುತ್ತ ಸ್ವಾಗತಿಸುತ್ತಿದ್ದ ಪರಿ ಕಣ್ಮನ ಸೆಳೆಯಿತು.

ಪಥಸಂಚಲನ ವೀಕ್ಷಣೆಗೆ ಬಾಗಲಕೋಟೆ, ನವನಗರ, ವಿದ್ಯಾಗಿರಿ ಮಾತ್ರವಲ್ಲದೆ, ಸುತ್ತಮುತ್ತಲ ಗ್ರಾಮಗಳ, ವಿವಿಧ ನಗರ, ಪಟ್ಟಣಗಳಿಂದ ಆಗಮಿಸಿದ್ದ ಸಾವಿರಾರು ಜನರು ಚಪ್ಪಾಳೆ ತಟ್ಟುತ್ತ ಘೊಷಣೆ ಕೂಗುತ್ತಿದ್ದರು. ಗಣವೇಷಧಾರಿಗಳ ಶಿಸ್ತುಬದ್ಧ ನಡಿಗೆ ಕಂಡು ಮೂಕವಿಸ್ಮಿತರಾದರು.

ನಗರದ ಬಸವೇಶ್ವರ ವೃತ್ತ, ಕಾಲೇಜು ರಸ್ತೆ, ಸ್ಟೇಷನ್ ರಸ್ತೆ ಸೇರಿ ಅನೇಕ ಪ್ರಮುಖ ಸ್ಥಳಗಳಲ್ಲಿ ಸಂಘ ಪರಿವಾರದ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗಣವೇಷಧಾರಿಗಳ ಜತೆಗೆ ಹೆಜ್ಜೆ ಹಾಕಿದರು.

ಎರಡು ಮಾರ್ಗದಲ್ಲಿ ಪಥ ಸಂಚಲನ: ಸಂಜೆ ಸರಿಯಾಗಿ 4 ಗಂಟೆಯಿಂದ ಬಸವೇಶ್ವರ ಕಾಲೇಜು ಮೈದಾನದಿಂದ ಎರಡು ಮಾರ್ಗದಲ್ಲಿ ಗಣವೇಷ ಧಾರಿಗಳು ಪಥಸಂಚಲನ ಆರಂಭಿಸಿದರು. ಒಂದು ತಂಡ ಬಸವೇಶ್ವರ ಕಾಲೇಜು ಮೈದಾನದಿಂದ ಆರಂಭಗೊಂಡು ಕರವೀರಮಠ, ಶಿರೂರ ಅಗಸಿ, ಕಿಣಗಿ ಕ್ರಾಸ್, ಹುಂಡೇಕಾರ ಗಲ್ಲಿ ಕ್ರಾಸ್, ಚರಂತಿಮಠ, ಮಾರವಾಡಿ ಗಲ್ಲಿ ಕ್ರಾಸ್, ಜವಳಿ ಚೌಕ್, ಶಾರದಾ ಪ್ರೆಸ್, ಹಳಪೇಟೆ ಕ್ರಾಸ್, ಭಾವಸಾರ ಗಜಾನನ ಚೌಕ್, ಕೊಪ್ಪ ಆಸ್ಪತ್ರೆ, ಶಿವಾಜಿ ಸರ್ಕಲ್, ಹಳೇ ಅಂಚೆ ಕಚೇರಿ, ವೆಂಕಟೇಶ್ವರ ದೇವಸ್ಥಾನ, ವಲ್ಲಭಭಾಯಿ ಚೌಕ್, ಬಸವೇಶ್ವರ ವೃತ್ತ ಮಾರ್ಗವಾಗಿ ಬಸವೇಶ್ವರ ಕಾಲೇಜು ಮೈದಾನ ತಲುಪಿತು.

ಇನ್ನೊಂದು ತಂಡ ಬಸವೇಶ್ವರ ಕಾಲೇಜು ಮೈದಾನದಿಂದ ಹೊರಟು ಸಾಸನೂರ ಪೆಟ್ರೋಲ್ ಬಂಕ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದುರ್ಗಾ ವಿಹಾರ ಸರ್ಕಲ್, ಶಾಂತಿ ನಗರ ಕ್ರಾಸ್, ಹಳೇ ಐಬಿ ಕ್ರಾಸ್, ಹರಣಶಿಕಾರಿ ಗಲ್ಲಿ, ವಾಸವಿ ಚಿತ್ರಮಂದಿರ, ದುರ್ಗಾನಗರ ಕ್ರಾಸ್, ಹೊಳೆ ಆಂಜನೇಯ ದೇವಸ್ಥಾನ, ಬಸವೇಶ್ವರ ಸರ್ಕಲ್ ಮಾರ್ಗವಾಗಿ ಕಾಲೇಜು ಮೈದಾನಕ್ಕೆ ಆಗಮಿಸಿತು. ಘೊಷನಾದದ ನಡುವೆ ಏಕಕಾಲಕ್ಕೆ ಎರಡು ಸಂಚಲನಗಳು ನಿಗದಿತ ಸಮಯಕ್ಕೆ ಮರಳಿ ಮೈದಾನ ತಲುಪಿದವು.