ಇಂದು ಪಥಸಂಚಲನ

ಬಾಗಲಕೋಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಚಟುವಟಿಕೆ ಯಲ್ಲಿ ಛಾಪು ಮೂಡಿಸಿರುವ ಕೋಟೆನಗರಿ ಅ.14ರಂದು ಮೂರನೇ ಬಾರಿ ಬಾಲಕರ ಪ್ರತ್ಯೇಕ ಪಥಸಂಚಲನಕ್ಕೆ ಸಾಕ್ಷಿಯಾಗಲಿದೆ. ಬಾಲಕರು ಆರ್​ಎಸ್​ಎಸ್ ಹೊಸ ವಸ್ತ್ರ ಸಂಹಿತೆ ಫುಲ್​ಪ್ಯಾಂಟ್ ತೊಟ್ಟು ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ.

ಬಾಲಕರ ಪಥಸಂಚಲನಕ್ಕೆ ನಗರದ ವಿದ್ಯಾಗಿರಿ ಬಡಾವಣೆ ಶೃಂಗಾರಗೊಳ್ಳುತ್ತಿದೆ. ಸ್ವಾಗತ ಕಮಾನು, ಕಟೌಟ್, ಬ್ಯಾನರ್​ಗಳು ರಾರಾಜಿಸುತ್ತಿವೆ. ವಿದ್ಯಾಗಿರಿಯ ಅಥಣಿ ಕಲ್ಯಾಣ ಮಂಟಪದಿಂದ ಮಧ್ಯಾಹ್ನ 3.45ಕ್ಕೆ ಆರಂಭವಾಗುವ ಪಥ ಸಂಚಲನ ವಿದ್ಯಾಗಿರಿಯ 7,8,9 ಕ್ರಾಸ್​ನಲ್ಲಿ ಸಂಚರಿಸಿ 12ನೇ ಕ್ರಾಸ್ ಒಳಗೆ ಬರಲಿದೆ. ಕಾಳಮ್ಮದೇವಿ, ಕೆಂಚಮ್ಮದೇವಿ ದೇವಸ್ಥಾನ, 19 ಕ್ರಾಸ್​ನ ಅಡ್ಡ ರಸ್ತೆ ಮುಖಾಂತರ ನೇರವಾಗಿ 22ನೇ ಕ್ರಾಸ್​ಗೆ ಆಗಮಿಸಲಿದೆ. ಇಂಜಿನಿಯರಿಂಗ್ ಕಾಲೇಜು ವೃತ್ತದ ಮೂಲ ಹಾಯ್ದು ಗೌರಿ ಶಂಕರ ಕಲ್ಯಾಣ ಮಂಟಪಕ್ಕೆ ತಲುಪಲಿದೆ. ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ನಗರದ ಖ್ಯಾತ ವೈದ್ಯ ಡಾ.ಸುಜಯ ಹೆರಂಜಲ್, ಮುಖ್ಯ ವಕ್ತಾರ ಮೋಹನ ದೇಶಪಾಂಡೆ, ಜಿಲ್ಲಾ ಸಂಘಚಾಲಕ ಡಾ.ಸಿ . ಎಸ್. ಪಾಟೀಲ ಪಾಲ್ಗೊಳ್ಳಲಿದ್ದಾರೆ. ಆರ್​ಎಸ್​ಎಸ್ ವಸ್ತ್ರ ನೀತಿ ಸಂಹಿತೆ ಅನ್ವಯ ಬಾಲಕರು ಫುಲ್​ಪ್ಯಾಂಟ್ ಧರಿಸಿ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. 400 ರಿಂದ 500 ಬಾಲಕರು ಭಾಗವಹಿಸಲಿದ್ದಾರೆ ಎಂದು ಆರ್​ಎಸ್​ಎಸ್ ನಗರ ಕಾರ್ಯವಾಹ ವಿಜಯ ಸುಲಾಕೆ ‘ವಿಜಯವಾಣಿ’ಗೆ ತಿಳಿಸಿದರು.

ಆರ್​ಎಸ್​ಎಸ್ ಕೇಂದ್ರ ಸ್ಥಾನ ನಾಗಪುರ ನಂತರದಲ್ಲಿ ಬಾಗಲಕೋಟೆ ನಗರದಲ್ಲಿ ವಾರ್ಷಿಕೋತ್ಸವ ಪಥ ಸಂಚಲನ ಅತ್ಯಂತ ಪ್ರಸಿದ್ಧಿ ಪಡೆದಿದೆ. ಗಣವೇಷಧಾರಿಗಳ ಪಥಸಂಚಲನ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮ, ಪಟ್ಟಣದ ಜನ, ಬೇರೆ ಬೇರೆ ಜಿಲ್ಲೆಗಳಿಂದಲು ಆಗಮಿಸಲಿದ್ದಾರೆ. ಬಾಗಲಕೋಟೆ ನಗರದಲ್ಲಿ ಅ.21 ರಂದು ಸಂಜೆ ಗಣವೇಷಧಾರಿಗಳ ಆಕರ್ಷಕ ಪಥ ಸಂಚಲನಕ್ಕೆ ಭರದ ಸಿದ್ಧತೆ ನಡೆದಿದೆ. ಪಥ ಸಂಚಲನದ ಮಾರ್ಗದಲ್ಲಿ ಪ್ರತಿದಿನ ರಾತ್ರಿ ಅಭ್ಯಾಸ ಜೋರಾಗಿ ನಡೆದಿದೆ.

ಬಾಗಲಕೋಟೆಯಲ್ಲಿ ನಡೆಯುವ ಆರ್​ಎಸ್​ಎಸ್ ಪಥ ಸಂಚಲನ ಹಬ್ಬದ ವಾತಾವರಣ ಮೂಡಿಸುತ್ತದೆ. ಮನೆಗಳ ಮುಂದೆ ಜನರು ಸ್ವಯಂ ಸ್ಪೂರ್ತಿಯಿಂದ ಹಸಿರು ತೋರಣ ಕಟ್ಟಿ, ರಂಗೋಲಿ ಬಿಡಿಸಿ, ಪ್ರಮುಖ ಬೀದಿಗಳಲ್ಲಿ ಸ್ವಾಗತ ಕಮಾನು ನಿಲ್ಲಿಸುತ್ತಾರೆ. ಮಾರ್ಗದುದ್ದಕ್ಕೂ ಪುಟಾಣಿಗಳು ರಾಷ್ಟ್ರಭಕ್ತರ ವೇಷಧರಿಸಿ ಸ್ವಾಗತ ಕೋರುವುದು, ಜನರು ಹೂಮಳೆಗರೆವುದು ವಿಶೇಷತೆಯಾಗಿದೆ.