2019ರಲ್ಲೇ ಸಿದ್ದರಾಮಯ್ಯ ಮತ್ತೆ ಸಿಎಂ

ಬಾಗಲಕೋಟೆ: ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಸಚಿವರು, ಶಾಸಕರು ಹೇಳಿಕೆ ನೀಡಿ ಪಕ್ಷ ಹಾಗೂ ದೋಸ್ತಿ ಸರ್ಕಾರದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವೊದಗಿಸಿರುವ ಬೆನ್ನಲ್ಲೇ ಮಾಜಿ ಸಿಎಂ ಆಪ್ತ ಶಾಸಕರೊಬ್ಬರು ಇದೇ ವರ್ಷ ಸಿದ್ದರಾಮಯ್ಯ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಶಾಸಕ ಸಿದ್ದರಾಮಯ್ಯ ಅವರ ಕ್ಷೇತ್ರ ಬಾದಾಮಿಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಗಂಗಾಮತಸ್ಥ ಅಂಬಿಗರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಬಸವಕಲ್ಯಾಣ ಶಾಸಕ ನಾರಾಯಣರಾವ್ ಈ ಹೇಳಿಕೆ ನೀಡಿದ್ದಾರೆ.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ತಮ್ಮ ಭಾಷಣ ಮುಗಿಸಿ ವೇದಿಕೆಯಿಂದ ನಿರ್ಗಮಿಸಿದ ಬಳಿಕ ಭಾಷಣ ಆರಂಭಿಸಿದ ಶಾಸಕ ನಾರಾಯಣರಾವ್, ಈ ಲೋಕಸಭೆ ಚುನಾವಣೆ ಬಳಿಕ ಮೂರ್ನಾಲ್ಕು ತಿಂಗಳ ಒಳಗಾಗಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಇದು ನೂರಕ್ಕೆ ನೂರು ಸತ್ಯ ಎಂದರು.

ಸಿದ್ದರಾಮಯ್ಯ ನಮಗೆ ಸಮರ್ಥ ನಾಯಕ ಸಿಕ್ಕಿದ್ದಾರೆ. ಅವರು ನನ್ನನ್ನು ಗುರುತಿಸಿ ಬಸವಕಲ್ಯಾಣದಲ್ಲಿ ಸ್ಪರ್ಧಿಸಲು ಟಿಕೆಟ್ ಕೊಟ್ಟರು. ಇಡೀ ಹಾಲುಮತ ಸಮಾಜ ಟೊಂಕಕಟ್ಟಿ ನಿಂತು ನನ್ನನ್ನು ಗೆಲ್ಲಿಸಿದರು. 18 ಸಾವಿರ ಮತದಿಂದ ಗೆದ್ದಿದ್ದೇನೆ ಎಂದರು. ಈಗ ನಾವು ಸಿದ್ದರಾಮಯ್ಯರಿಗೆ ಎಲ್ಲ ರೀತಿ ಶಕ್ತಿ ಕೊಡಬೇಕು. ನಮ್ಮ ಶ್ರೀಗಳ ಆಶೀರ್ವಾದ, ನಿಮ್ಮ ಆಶೀರ್ವಾದ ಸಿದ್ದರಾಮಯ್ಯರ ಮೇಲಿರಬೇಕು ಎಂದರು.