50ಕ್ಕೂ ಹೆಚ್ಚು ಜನರಿಂದ ರಕ್ತದಾನ

ಬಾಗಲಕೋಟೆ: ಉತ್ತರಾದಿಮಠ, ವಿಶ್ವಮಧ್ವ ಮಹಾ ಪರಿಷತ್ ಸಹಯೋಗದಲ್ಲಿ ಸತ್ಯಬೋಧತೀರ್ಥ ಶ್ರೀಗಳ ಆರಾಧನಾ ಮಹೋತ್ಸವ ನಿಮಿತ್ತ ನಡೆದ ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಜನ ರಕ್ತದಾನ ಮಾಡಿ ಮಾನವೀಯತೆ ಮೆರೆದರು.

ನವನಗರದ 63ಎ ಸೆಕ್ಟರ್‌ನ ಉತ್ತರಾದಿಮಠದ ಆವರಣದಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಸತ್ಯಾತ್ಮತೀರ್ಥ ಶ್ರೀಗಳು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಆರೋಗ್ಯವಂತರು ಶುದ್ಧ ರಕ್ತವನ್ನು ಅವಶ್ಯಕತೆ ಇದ್ದವರಿಗೆ ನೀಡುವುದು ಭಗವಂತನ ಸೇವೆ ಮಾಡಿದಂತೆ. ಸ್ವಚ್ಛ ಮನಸ್ಸಿನಿಂದ ಬದುಕು ಸಾಗಿಸಬೇಕು, ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಬೇಕು ಎಂದು ಸಲಹೆ ನೀಡಿದರು.

ಬಿವಿವಿ ಸಂಘದ ಕುಮಾರೇಶ್ವರ ವೈದ್ಯಕೀಯ ಕಾಲೇಜಿನ ಬ್ಲಡ್ ಬ್ಯಾಂಕ್ ಸಿಬ್ಬಂದಿ ರಕ್ತ ಸಂಗ್ರಹಿಸಿತು. ಡಾ. ಕೇಶವ ಕುಲಕರ್ಣಿ, ಡಾ. ಜಿ.ವಿ. ಹುಯಿಲಗೋಳ, ಡಾ. ಪವನ ಕುಲಕರ್ಣಿ ಸಿಬ್ಬಂದಿ ಗೋಪಾಲ ಜಂಬಗಿ, ಅನಿಲ ದೇಶಪಾಂಡೆ ನೇತೃತ್ವ ವಹಿಸಿದ್ದರು. ಪಂ. ಭೀಮಸೇನಾಚಾರ್ಯ ಪಾಂಡುರಂಗಿ, ಪಂ. ರಘೋತ್ತಮಾಚಾರ್ಯ ನಾಗಸಂಪಿಗೆ, ವಿನಾಯಕ ದೇಸಾಯಿ, ಅನಂತ ಮಳಗಿ, ವಿಜಯ ಗುಮಾಸ್ತೆ, ವಿನಾಯಕ ತಾಳಿಕೋಟಿ, ಭಾಸ್ಕರ ಮನಗೂಳಿ, ಬಾಬು ಜಂಬಗಿ, ಭೀಮ ನಾಡಗೌಡ, ಅನಿರುದ್ಧ ಗಲಗಲಿ, ಪವನ ಗುಡಿ, ಮತ್ತಿತರರು ಇದ್ದರು.