ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆಹಾನಿ

ಬಾಗಲಕೋಟೆ: ಅಕಾಲಿಕ ಮಳೆ ಜತೆ ಗಾಳಿ ಮತ್ತು ಆಲಿಕಲ್ಲು ಬಿದ್ದು ಜಿಲ್ಲೆಯಲ್ಲಿ ಬೆಳೆದು ನಿಂತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ದ್ರಾಕ್ಷಿ ಬೆಳೆ ಹಾನಿಯಾಗಿದೆ. ಪ್ರಾಥಮಿಕ ವರದಿಯಂತೆ ಸಾವಳಗಿ ಭಾಗದ ಐದು ಗ್ರಾಮಗಳಲ್ಲಿ ಅಂದಾಜು 4.70 ಕೋಟಿ ರೂ. ಬೆಳೆಹಾನಿ ಹಾಗೂ ದ್ರಾಕ್ಷಿ ಘಟಕಗಳು ನಷ್ಟವಾಗಿವೆ.

ಸೋಮವಾರ ರಾತ್ರಿ ಬೀಸಿದ ಗಾಳಿ, ಸುರಿದ ಮಳೆ ಹಾಗೂ ಬಿದ್ದ ಆಲಿಕಲ್ಲು ಮಳೆಯಿಂದ ಜಮಖಂಡಿ ತಾಲೂಕಿನ ಸಾವಳಗಿ, ಕುರಗೋಡ, ತುಂಗಳ, ಕಿನ್ನಾಳ ಹಾಗೂ ಕಾಜಿಬೀಳಗಿ ಗ್ರಾಮ ವ್ಯಾಪ್ತಿಯಲ್ಲಿರುವ ಅಂದಾಜು 70 ರಿಂದ 90 ಎಕರೆ ದ್ರಾಕ್ಷಿ, 12 ರಿಂದ 15 ಎಕರೆ ದಾಳಿಂಬೆ, ಒಂದು ಎಕರೆ ಬಾಳೆ ಬೆಳೆ ನಾಶವಾಗಿದೆ. ಹಾಗೆಯೇ 12 ಒಣದ್ರಾಕ್ಷಿ ಘಟಕಗಳು ಹಾಳಾಗಿದ್ದು, ಇದರಿಂದ ಅಂದಾಜು 4.70 ಕೋಟಿ ರೂ. ನಷ್ಟವಾಗಿದೆ. ಇದು ಪ್ರಾಥಮಿಕ ಸರ್ವೇ ಆಗಿದ್ದು, ಹಾನಿ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ಪ್ರಭುರಾಜು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸದ್ಯ ಉಳ್ಳಾಗಡ್ಡಿ ಬೆಳೆ ಹೊರತುಪಡಿಸಿ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ 2400 ಹೆಕ್ಟೇರ್, 2500 ಹೆಕ್ಟೇರ್ ದಾಳಿಂಬೆ, 1800 ಹೆಕ್ಟೇರ್ ಬಾಳೆ, 600 ಹೆಕ್ಟೇರ್ ಚಿಕ್ಕು ಬೆಳೆ ಇದೆ. ಅಕಾಲಿಕ ಮಳೆ ತೋಟಗಾರಿಕೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

ಈ ಮೊದಲೇ ಸತತ ಬರದಿಂದ ಕಂಗಾಲಾಗಿರುವ ರೈತರು, ಲಭ್ಯ ಇರುವ ಅಷ್ಟೋ ಇಷ್ಟು ಕೊಳವೆ ಬಾವಿ ನೀರು, ನದಿನೀರು ಬಳಕೆ ಮಾಡಿಕೊಂಡು ಅಲ್ಪಸ್ವಲ್ಪ ತೋಟಗಾರಿಕೆ ಬೆಳೆ ಬೆಳೆದಿದ್ದಾರೆ. ಇನ್ನೇನು ಕೈಗೆ ಬರುತ್ತದೆ ಎನ್ನುವಾಗಲೇ ಅಕಾಲಿಕ ಮಳೆ ಜತೆಗೆ ಗಾಳಿ ಮತ್ತು ಆಲಿಕಲ್ಲು ಸೇರಿಕೊಂಡು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

2014ರಲ್ಲಿ ಅಪಾರ ಹಾನಿ
2014ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಜಿಲ್ಲೆ ವಿವಿಧೆಡೆ ಭಾರಿ ಪ್ರಮಾಣದಲ್ಲಿ ಬಿದ್ದಿದ್ದ ಆಲಿಕಲ್ಲು ಮಳೆಗೆ ತೋಟಗಾರಿಕೆ ಮತ್ತು ಕೃಷಿ ಬೆಳೆಗೆ ದೊಡ್ಡಮಟ್ಟದಲ್ಲಿ ಹಾನಿಯಾಗಿತ್ತು. ಅಂದಾಜು 193 ಕೋಟಿ ರೂ. ತೋಟಗಾರಿಕೆ ಬೆಳೆಗಳು ಹಾಗೂ 17 ಕೋಟಿ ರೂ. ಕೃಷಿ ಬೆಳೆಗಳನ್ನು ಆಲಿಕಲ್ಲು ನುಂಗಿ ಹಾಕಿತ್ತು. ಈ ವರ್ಷ ಮತ್ತೆ ಸಾವಳಗಿ ಭಾಗದಲ್ಲಿ ಸೋಮವಾರ ಸಂಜೆ ಬಿದ್ದ ಆಲಿಕಲ್ಲು ಮಳೆ ಕೋಟ್ಯಂತರ ರೂಪಾಯಿ ಬೆಳೆ ಹಾನಿ ಮಾಡಿದೆ.

ಜಮಖಂಡಿ ತಾಲೂಕಿನಲ್ಲಿ ಸೋಮವಾರ ಅಕಾಲಿಕ ಮಳೆ ಜತೆಗೆ ಗಾಳಿ ಮತ್ತು ಸ್ವಲ್ಪ ಆಲಿಕಲ್ಲು ಬಿದ್ದು ದ್ರಾಕ್ಷಿ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 60 ರಿಂದ 65 ರಷ್ಟು ದ್ರಾಕ್ಷಿ ಬೆಳೆ ಕಟಾವು ಆಗಿದೆ. ಇನ್ನು ಹತ್ತು ಹನ್ನೆರಡು ದಿನಗಳಲ್ಲಿ ಕಟಾವು ಕಾರ್ಯ ಮುಕ್ತಾಯವಾಗಲಿದೆ. ಈಗಾಗಲೇ ಉಪತಹಸೀಲ್ದಾರ್ ನೇತೃತ್ವದಲ್ಲಿ ಸರ್ವೇ ನಡೆದಿದ್ದು, ಈ ಕಾರ್ಯ ಪೂರ್ಣಗೊಂಡ ಬಳಿಕ ಹಾನಿ ಕುರಿತು ನಿಖರ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು.
ಡಾ.ಪ್ರಭುರಾಜ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ಬಾಗಲಕೋಟೆ