ಫಲಿತಾಂಶಕ್ಕೂ ಮೊದಲೇ ಕಮಲ ಪಡೆಯಲ್ಲಿ ಹಿಗ್ಗು!

ಅಶೋಕ ಶೆಟ್ಟರ
ಬಾಗಲಕೋಟೆ: ಪ್ರತಿಷ್ಠೆಯ ಕಾಳಗವಾಗಿದ್ದ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟ ಮುಂದುವರಿಯಲಿದೆ ಎಂಬ ಮತದಾನೋತ್ತರ ಸಮೀಕ್ಷೆ ಕಮಲ ಪಡೆ ಹಿರಿಹಿರಿ ಹಿಗ್ಗುವಂತೆ ಮಾಡಿದೆ.

ಹ್ಯಾಟ್ರಿಕ್ ಗೆಲುವಿನೊಂದಿಗೆ ನಾಲ್ಕನೆಯ ಬಾರಿಗೆ ವಿಜಯ ಪತಾಕೆ ಹಾರಿಸಲು ಬಿಜೆಪಿಯ ಪಿ.ಸಿ. ಗದ್ದಿಗೌಡರ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಮೊದಲ ಸಲ ಮಹಿಳಾ ಅಭ್ಯರ್ಥಿ ಕಣಕ್ಕೆ ಇಳಿಸಿತ್ತು. ಇಬ್ಬರ ನಡುವೆ ಸಮಬಲದ ಪೈಪೋಟಿ ಕಂಡು ಬಂದಿದೆ ಎನ್ನುವ ವಿಶ್ಲೇಷಣೆಗಳ ನಡುವೆ ಇದೀಗ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಇದು ಸಹಜವಾಗಿಯೇ ಬಿಜೆಪಿಗರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ. ಆದರೆ, ಈ ಸಮೀಕ್ಷೆಗಳು ನಂಬಿಕೆಗೆ ಅರ್ಹವಲ್ಲ ಎನ್ನುವ ಉದ್ಘಾರವನ್ನು ಕಾಂಗ್ರೆಸ್ ಹೊರಹಾಕಿದೆ.

ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿದ್ದ ಬಾಗಲಕೋಟೆ ಕ್ಷೇತ್ರವನ್ನು 2004ರಲ್ಲಿ ತನ್ನ ವಶಕ್ಕೆ ಪಡೆದ ಬಿಜೆಪಿ ಅಲ್ಲಿಂದ ಈವರೆಗೂ ಹಿಂತಿರುಗಿ ನೋಡಿಲ್ಲ. ಹಾಲಿ ಸಂಸದ ಪಿ.ಸಿ. ಗದ್ದಿಗೌಡರ ಸತತ ಮೂರು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಗೆಲ್ಲುವ ಕುದುರೆ ಎನ್ನುವ ಕಾರಣಕ್ಕೆ ಪಕ್ಷ ಈ ಸಲವೂ ಅವರನ್ನು ಕಣಕ್ಕಿಳಿಸಿತ್ತು.

ಮೂರು ಅವಧಿಯಲ್ಲಿ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದು ವಿಪಕ್ಷಗಳು ಆರೋಪ ಮಾಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಲ್ಲಿ ಅದೆಲ್ಲವೂ ಗೌಣವಾಗಿತ್ತು. ಆದರೆ, ಬಿಜೆಪಿಯ ಮತಬುಟ್ಟಿಯನ್ನು ವಿಭಜನೆ ಮಾಡಿ, ಗೆಲುವು ದಕ್ಕಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಲಿಂಗಾಯತ ಪಂಚಮಸಾಲಿ ಸಮುದಾಯದ ವೀಣಾ ಕಾಶಪ್ಪನವರಗೆ ಟಿಕೆಟ್ ನೀಡಿತ್ತು. ಕ್ಷೇತ್ರದಲ್ಲಿ ಅಧಿಕ ಬಹುಸಂಖ್ಯಾತ ಸಮುದಾಯದ ಬೆಂಬಲ, ಮಹಿಳಾ ಮತದಾರರ ಸೆಳೆಯುವ ಕಸರತ್ತು ನಡೆಸಿತ್ತು. ಇದರ ಜತೆಗೆ ಜಿಲ್ಲೆಯ ಶಾಸಕರಾಗಿರುವ ಸಿದ್ದರಾಮಯ್ಯ ಅವರ ಬಲವೂ ಸೇರಿಕೊಂಡು ಈ ಸಲ ಸೋಲಿನ ಸರಪಳಿ ಕಳಚುತ್ತೇವೆ ಎನ್ನುವ ವಿಶ್ವಾಸದಲ್ಲಿ ಕಾಂಗ್ರೆಸ್ಸಿಗರು ಇದ್ದಾರೆ. ಆದರೆ, ಇದೀಗ ಮತದಾನೋತ್ತರ ಸಮೀಕ್ಷೆಗಳು ಕೈ ಪಡೆಗೆ ನಿರಾಸೆ ಮೂಡಿಸಿದ್ದರೆ, ಸಮೀಕ್ಷೆಯಂತೆಯೇ ಫಲಿತಾಂಶ ಬರುತ್ತದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ.

ಟಗರಿನ ಕಾಳಗದಲ್ಲಿ ಗೆಲ್ಲೋರ‌್ಯಾರು ?
ಪಿ.ಸಿ.ಗದ್ದಿಗೌಡರ ಹಾಗೂ ವೀಣಾ ಕಾಶಪ್ಪನವರ ಪರಸ್ಪರ ಎದುರಾಳಿಗಳು ಆಗಿದ್ದರೂ ಬಾಗಲಕೋಟೆ ಕ್ಷೇತ್ರದ ಚುನಾವಣೆ ಟಗರಿನ ಕಾಳಗ ಎಂದು ಬಿಂಬಿತವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಶಾಸಕರು ಇರುವುದರಿಂದ ಅಹಿಂದ ಮತಗಳನ್ನು ಸೆಳೆಯಬಹುದು ಎನ್ನುವ ಲೆಕ್ಕಾಚಾರಗಳಿವೆ. ಇದೇ ಕಾರಣಕ್ಕೆ ಬಿಜೆಪಿ ಕ್ಷೇತ್ರದ ಉಸ್ತುವಾರಿಯನ್ನು ಈಶ್ವರಪ್ಪ ಅವರಿಗೆ ವಹಿಸಲಾಗಿತ್ತು. ಚುನಾವಣೆ ವೇಳೆ ಸಿದ್ದರಾಮಯ್ಯ ಮತ್ತು ಈಶ್ವರಪ್ಪ ಅವರ ನಡುವೆ ಸವಾಲು ಪ್ರತಿಸವಾಲುಗಳು ಸಹ ಆಗಿವೆ. ಹೀಗಾಗಿ ಇವರಿಬ್ಬರಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎನ್ನುವ ಚರ್ಚೆಗಳು ತೀವ್ರಗೊಂಡಿವೆ.

ಸಮೀಕ್ಷೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂಬ ವರದಿ ಸಿದ್ದರಾಮಯ್ಯ ಆಟ ನಡೆಯಲ್ಲ, ಟಗರಿನ ಕಾಳಗದಲ್ಲಿ ಈಶ್ವರಪ್ಪನ ಕೊರಳಿಗೆ ವಿಜಯಮಾಲೆ ಒಲಿಯಲಿದೆ ಎಂದು ಬಿಜೆಪಿಗರು ವಾದಿಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ಮಾತ್ರ ಇನ್ನೆರಡು ದಿನ ಬಿಜೆಪಿಗರ ಸಂಭ್ರಮಿಸಲಿ, ಮೇ 23ರಂದು ಮತಪೆಟ್ಟಿಗೆಯಲ್ಲಿ ಏನಿದೆ ಎನ್ನುವುದು ಬಹಿರಂಗವಾಗುತ್ತದೆ ಎಂದು ಪ್ರತಿವಾದ ಮಾಡುತ್ತಿದ್ದಾರೆ. ಹೀಗಾಗಿ ಮತದಾನೋತ್ತರ ಸಮೀಕ್ಷೆ ನಿಜವಾಗುತ್ತಾ ಅಥವಾ ಅದನ್ನು ಮೀರಿ ಕೈ ಪಕ್ಷದ ಅಭ್ಯರ್ಥಿಗೆ ಅದೃಷ್ಟ ಒಲಿಯುತ್ತಾ ಎನ್ನುವ ಕುತೂಹಲ ಉಂಟು ಮಾಡಿದೆ.

ಮತದಾನದ ನಂತರದಲ್ಲಿ ನಡೆಯುವ ಸಮೀಕ್ಷೆಗಳು ಬಹುತೇಕ ನಿಜವಾಗುತ್ತವೆ. ಸಾಮಾನ್ಯವಾಗಿ ಇಂತಹ ಸಮೀಕ್ಷೆಗಳನ್ನು ಮಾಡುವಾಗ ಸಾಕಷ್ಟು ಆಳವಾಗಿ ಅಧ್ಯಯನ ಮಾಡಿರುತ್ತಾರೆ. ಜನರ ನಾಡಿಮಿಡಿತ ತಿಳಿದುಕೊಂಡು ವರದಿ ಸಿದ್ಧಪಡಿಸಿರುತ್ತಾರೆ. ಇದು ನಿಜ ಆಗುತ್ತದೆ. 50 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ.
ಪಿ.ಸಿ.ಗದ್ದಿಗೌಡರ ಬಿಜೆಪಿ ಅಭ್ಯರ್ಥಿ

ಮತದಾನೋತ್ತರ ಸಮೀಕ್ಷೆ ಬಾಗಲಕೋಟೆ ಕ್ಷೇತ್ರದಲ್ಲಿ ತಿರುವು ಮುರುವು ಆಗಲಿದೆ. ಗುಪ್ತ ಮತದಾನದ ಬಗ್ಗೆ ಯಾರಿಂದಲೂ ಖಚಿತವಾಗಿ ಹೇಳಲು ಆಗಲ್ಲ. ನನಗಂತೂ ಈ ಕ್ಷಣದಲ್ಲೂ ಗೆಲುವು ನಮ್ಮದೆ ಎನ್ನುವ ವಿಶ್ವಾಸದಲ್ಲಿದ್ದೇನೆ.ಯಾವುದೇ ಸಮೀಕ್ಷೆಯಿಂದ ವಿಚಲಿತಳಾಗಿಲ್ಲ. ಫಲಿತಾಂಶ ಪ್ರಕಟವಾದ ಮೇಲೆ ಮತದಾರರನ ಒಲುವು ಬಹಿರಂಗ ಆಗಲಿದ್ದು, ಅದನ್ನು ಒಪ್ಪ್ಪುತ್ತೇನೆ.
ವೀಣಾ ಕಾಶಪ್ಪನವರ ಕಾಂಗ್ರೆಸ್ ಅಭ್ಯರ್ಥಿ.

Leave a Reply

Your email address will not be published. Required fields are marked *