ಟಿಕೆಟ್‌ಗಾಗಿ ದೆಹಲಿಯಲ್ಲಿ ಲಾಬಿ!

ಅಶೋಕ ಶೆಟ್ಟರ
ಬಾಗಲಕೋಟೆ: ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಎರಡನೇ ಹಂತದಲ್ಲಿ ಬಾಗಲಕೋಟೆ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಶತಾಯಗತಾಯ ಟಿಕೆಟ್ ಪಡೆಯಲು ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳು ಇನ್ನಿಲ್ಲದ ಕರಸತ್ತು ಆರಂಭಿಸಿದ್ದಾರೆ.

ಕೆಲ ದಿನಗಳಿಂದ ಟಿಕೆಟ್‌ಗೆ ಅರ್ಜಿ ಸಲ್ಲಿಸಿ ರಾಜ್ಯ ಮುಖಂಡರ ಎದುರು ಪರೇಡ್ ನಡೆಸಿದ್ದ ಆಕಾಂಕ್ಷಿಗಳು ಇದೀಗ ರಾಷ್ಟ್ರ ರಾಜಧಾನಿಗೂ ತೆರಳಿ ರಾಜ್ಯ ಮತ್ತು ಕೇಂದ್ರ ವರಿಷ್ಠರ ಎದುರು ಲಾಬಿ ನಡೆಸಲು ಮುಂದಾಗಿದ್ದಾರೆ.
ಕಾಂಗ್ರೆಸ್ ಟಿಕೆಟ್‌ಗಾಗಿ 15ಕ್ಕೂ ಹೆಚ್ಚು ಜನರು ಆಕಾಂಕ್ಷಿಗಳಿದ್ದು, ಇವರಲ್ಲಿ ನಾಲ್ಕರಿಂದ ಐವರ ಹೆಸರು ಹೆಚ್ಚು ಚಾಲ್ತಿಗೆ ಬಂದಿವೆ. ಇದೀಗ ಇವರಲ್ಲಿ ಪ್ರಮುಖವಾಗಿ ಹೆಸರು ಕೇಳಿ ಬರುತ್ತಿರುವ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹಾಗೂ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಾನಂದ ಉದಪುಡಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಬಾದಾಮಿಯ ಎಸ್.ಡಿ.ಜೋಗಿನ ಸಹ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದು, ಅವರೂ ದೆಹಲಿಯತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ವೀಣಾ ಕಾಶಪ್ಪನವರ ಹಾಗೂ ಅವರ ಪತಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ದೆಹಲಿಯಲ್ಲಿ ಬೀಡು ಬಿಟ್ಟಿದ್ದರೆ, ಶಿವಾನಂದ ಉದಪುಡಿ ಪರವಾಗಿ ಪ್ರಭಾವ ಬೀರಲು ಸಚಿವ ಆರ್.ಬಿ. ತಿಮ್ಮಾಪುರ ದೆಹಲಿಗೆ ತೆರಳಿದ್ದಾರೆ.

ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಬೇಕು. ಕಾಂಗ್ರೆಸ್ ಪಕ್ಷದಲ್ಲಿ ಆ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಅಸಮಾಧಾನ ಇದ್ದು, ಇದನ್ನು ಹೋಗಲಾಡಿಸಲು ಟಿಕೆಟ್ ನೀಡಬೇಕು ಎನ್ನುವ ಕೂಗು ಹೆಚ್ಚಿದೆ. ಜಿಲ್ಲೆಯ ಅನೇಕ ಮುಖಂಡರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ವರಿಷ್ಠರು ಸಮ್ಮತಿಸಿದಲ್ಲಿ ವೀಣಾ ಇಲ್ಲವೆ ಶಿವಾನಂದಗೆ ಅದೃಷ್ಟ ಒಲಿಯಲಿದೆ ಎಂದು ಹೇಳಲಾಗುತ್ತಿದೆ.

ಕುರುಬ ಸಮಾಜದವರಿಗೆ ಟಿಕೆಟ್ ಕೊಡಬೇಕು ಎನ್ನುವ ಆಗ್ರಹವೂ ಜೋರಾಗಿದೆ. ಇದು ೈನಲ್ ಆದಲ್ಲಿ ಭೂಸೇನಾ ನಿಗಮದ ಮಾಜಿ ಅಧ್ಯಕ್ಷ ಶ್ರೀಶೈಲ ದಳವಾಯಿ ಹೆಸರು ಮುಂಚೂಣಿಯಲ್ಲಿದ್ದು, ಇದು ಸಿದ್ದರಾಮಯ್ಯ ಅವರಿಂದಲೂ ಒಪ್ಪಿತ ಹೆಸರು ಎಂದು ಹೇಳಲಾಗುತ್ತಿದೆ.

ಸಂಭಾವ್ಯ ಅಭ್ಯರ್ಥಿಗಳು
ಟಿಕೆಟ್‌ಗಾಗಿ 15ಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದರೂ ಜಿಲ್ಲೆಯ ಹಿರಿಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಅಳೆದು ತೂಗಿ ಐವರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಮುಖಂಡರು ಸಿದ್ಧಪಡಿಸಿದ್ದಾರೆ. ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ವೀಣಾ ಕಾಶಪ್ಪನವರ, ಶಿವಾನಂದ ಉದಪುಡಿ, ಶ್ರೀಶೈಲ ದಳವಾಯಿ ಹಾಗೂ ಮಾಜಿ ಸಚಿವ ಅಜಯಕುಮಾರ ಸರನಾಯಕ ಹೆಸರು ಪಟ್ಟಿಯಲ್ಲಿವೆ.

ನಂಜಯ್ಯನಮಠ ಹಿಂದೆ ಸರಿಯುವ ಸಾಧ್ಯತೆ
ಸಂಭಾವ್ಯ ಪಟ್ಟಿಯಲ್ಲಿರುವ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ರೇಸ್‌ನಿಂದ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಿದೆ. ಸಂಪನ್ಮೂಲ ಕ್ರೋಡೀಕರಣ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈಗಿನ ದುಬಾರಿ ಚುನಾವಣೆ ಎದುರಿಸುವ ಆರ್ಥಿಕ ಬಲದ ಕೊರತೆ ಇವರ ಸ್ಪರ್ಧೆಗೆ ಅಡ್ಡಿಯಾಗುವ ಸಾಧ್ಯತೆ ಇದೆ.

ಸ್ಪರ್ಧೆ ಒಲ್ಲೆ ಅಂದ್ರು ಸರನಾಯಕ!
ಬಿಜೆಪಿಗೆ ಪ್ರಬಲ ಸ್ಪರ್ಧೆ ಒಡ್ಡಬಹುದು ಎನ್ನಲಾದ ಮಾಜಿ ಸಚಿವ ಅಜಯಕುಮಾರ ಸರನಾಯಕ ಬಗ್ಗೆ ಈಗಲೂ ವರಿಷ್ಠರ ಒಲವಿದೆ. ಆದರೆ, ತಾವು ಸ್ಪರ್ಧೆಗೆ ನಿರಾಕರಿಸಲು ಕಾರಣವಾದ ಅಂಶಗಳನ್ನು ರಾಜ್ಯ ಮತ್ತು ಕೇಂದ್ರ ವರಿಷ್ಠರಿಗೆ ಮನದಟ್ಟು ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೂವರಲ್ಲಿ ಯಾರು ಹಿತವರು ?
ಸದ್ಯಕ್ಕೆ ಲೋಕಸಭೆ ಅಭ್ಯರ್ಥಿ ರೇಸ್‌ನಲ್ಲಿ ವೀಣಾ ಕಾಶಪ್ಪನವರ, ಶಿವಾನಂದ ಉದಪುಡಿ ಹಾಗೂ ಶ್ರೀಶೈಲ ದಳವಾಯಿ ಹೆಸರು ಹೆಚ್ಚು ಓಡಾಡುತ್ತಿವೆ. ಈ ಮೂವರ ಪೈಕಿ ಯಾರು ಹಿತವರು? ಗೆಲ್ಲುವ ಸಾಮರ್ಥ್ಯ ಎಷ್ಟಿದೆ. ಎಲ್ಲ ಸಮುದಾಯದ ಮತದಾರರನ್ನು ಸೆಳೆಯುವ ಬಲಾಬಲ ಯಾರಲ್ಲಿ ಇದೆ? ಎನ್ನುವ ಬಗ್ಗೆ ಚರ್ಚಿಸುವ ಜತೆಗೆ ಜಿಲ್ಲೆಯ ಮುಖಂಡರು ಯಾರ ಬಗ್ಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಾರೆ ಎನ್ನುವುದರ ಮೇಲೆ ಟಿಕೆಟ್ ದೊರೆಯಲಿದೆ ಎಂದು ತಿಳಿದು ಬಂದಿದೆ.

ಕೊನೆ ಕ್ಷಣದ ಅಚ್ಚರಿ ನಡೆದರೆ ಆಶ್ಚರ್ಯವಿಲ್ಲ
ಟಿಕೆಟ್‌ಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಅನೇಕರು ತೀವ್ರ ಪ್ರಯತ್ನ ನಡೆಸಿದ್ದಾರೆ. ತಮ್ಮದೇ ಆದ ಪ್ರಭಾವವನ್ನು ಬೀರುತ್ತಿದ್ದಾರೆ. ಇದರ ಮಧ್ಯೆ ಈಗಲೂ ಸಿದ್ದರಾಮಯ್ಯ ಸೇರಿ ಅನೇಕ ಮುಖಂಡರು ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಅವರನ್ನು ಅಭ್ಯರ್ಥಿ ಮಾಡಲು ಹೆಚ್ಚಿನ ಆಸಕ್ತಿ ಹೊಂದಿದ್ದಾರಂತೆ. ಆದರೆ, ಯಾವುದೇ ಕಾರಣಕ್ಕೂ ತಾವು ಸ್ಪರ್ಧೆಗೆ ಸಿದ್ಧವಿಲ್ಲ ಎಂದು ಪಾಟೀಲರು ಸ್ಪಷ್ಟಪಡಿಸಿದ್ದಾರೆ. ಅದಾಗ್ಯೂ ಕೊನೆ ಕ್ಷಣದಲ್ಲಿ ಅಚ್ಚರಿ ಬೆಳವಣಿಗೆ ನಡೆದು ದೆಹಲಿಯಿಂದ ಇವರ ಹೆಗಲಿಗೆ ಟಿಕೆಟ್ ಹೊರಿಸಿದಲ್ಲಿ ಆಶ್ಚರ್ಯ ಪಡುವಂತಿಲ್ಲ. ಹಾಲಿ ಶಾಸಕರನ್ನು ಅಖಾಡಕ್ಕೆ ಇಳಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದಲ್ಲಿ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅಭ್ಯರ್ಥಿ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಮೂಲಗಳು ತಿಳಿಸಿವೆ.