ಚುನಾವಣೆ ನೆಪದಲ್ಲಿ ಕರ್ತವ್ಯಕ್ಕೆ ಚಕ್ಕರ್

ಸಂತೋಷ ದೇಶಪಾಂಡೆ
ಬಾಗಲಕೋಟೆ: ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಚುನಾವಣೆ ಪ್ರಚಾರದ ಕಾವು ಕೋಟೆನಾಡಲ್ಲಿ ಬಿಸಿಲ ತಾಪದಂತೆ ಏರತೊಡಗಿದೆ. ಇತ್ತ ಸರ್ಕಾರಿ ಕಚೇರಿಗಳಲ್ಲೂ ‘ಚುನಾವಣೆ’ ಪ್ರತಿಧ್ವನಿಸುತ್ತಿದೆ !

ಹೌದು, ಚುನಾವಣೆ ಮುಗಿಯವವರೆಗೂ ಅಧಿಕಾರಿಗಳು ನಿಮ್ಮ ಕೈಗೆ ಸಿಗಲ್ಲ. ಎಲ್ಲರೂ ಚುನಾವಣೆ ಕರ್ತವ್ಯದಲ್ಲಿದ್ದಾರೆ. ಹೀಗೊಂದು ಅಲಿಖಿತ ಮಾತು ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ನಿತ್ಯ ಮೊಳಗುತ್ತಿದೆ.

ಚುನಾವಣೆ ನೆಪದಲ್ಲಿ ಕರ್ತವ್ಯಕ್ಕೆ ಗೈರು
ಚುನಾವಣೆ ಕೆಲಸ ಕಾರ್ಯಗಳಿಗೆ ಆಯೋಗ ತನ್ನ ಅಗತ್ಯಕ್ಕೆ ತಕ್ಕಂತೆ ಜಿಲ್ಲೆಯ ಸರ್ಕಾರಿ ಸಿಬ್ಬಂದಿ ನಿಯುಕ್ತಿಗೊಳಿಸಿ ಜವಾಬ್ದಾರಿ ವಹಿಸಿದೆ. ಕರ್ತವ್ಯಕ್ಕೆ ನಿಯುಕ್ತಿಗೊಳ್ಳದಿದ್ದರೂ ಸಹ ಕೆಲ ಕಚೇರಿಗಳಲ್ಲಿ ಅಧಿಕಾರಿಗಳಿಂದ ಹಿಡಿದು ಜವಾನರವರೆಗೂ ಚುನಾವಣೆ ಜಪ ಶುರು ಮಾಡಿದ್ದಾರೆ. ಚುನಾವಣೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಸಿಬ್ಬಂದಿ, ಅಧಿಕಾರಿಗಳು ಕಚೇರಿಗೆ ಗೈರಾಗಿ ಕೆಲಸದಿಂದ ದೂರ ಉಳಿಯುತ್ತಿದ್ದಾರೆ. ಇದರಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಜನನ, ಮರಣ ಪ್ರಮಾಣ ಪತ್ರ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರ ಸ್ಥಾನ ಬಾಗಲಕೋಟೆ, ಮುಧೋಳ, ಜಮಖಂಡಿ, ತೇರದಾಳ, ಬೀಳಗಿ, ಹುನಗುಂದ, ಬಾದಾಮಿ, ಇಳಕಲ್ಲ, ತೇರದಾಳ, ರಬಕವಿ-ಬನಹಟ್ಟಿ ಸೇರಿ ಜಿಲ್ಲೆಯ ಡಿಸಿ ಕಚೇರಿಯಿಂದು ಹಿಡಿದು ತಾಲೂಕು ಪಂಚಾಯಿತಿ, ತಹಸೀಲ್ದಾರ್ ಕಚೇರಿ, ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ ಸೇರಿ ಸಾರ್ವಜನಿಕರ ಸಂಪರ್ಕವಿರುವ ಎಲ್ಲ ಸರ್ಕಾರಿ ಕಚೇರಿಗಳು ಸಿಬ್ಬಂದಿ ಇಲ್ಲದೆ ಖಾಲಿ ಖಾಲಿಯಾಗಿವೆ. ಸಣ್ಣಪುಟ್ಟ ಕೆಲಸಕ್ಕೂ ಜನರು ಗಂಟೆಗಟ್ಟಲೆ ಕಾದು ಕುಳಿತುಕೊಳ್ಳುವ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಕಚೇರಿಯಲ್ಲಿರುವ ಸಿಬ್ಬಂದಿಗೆ ಈ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡಿದರೆ ‘ಸಾಹೇಬರ ಇಲೆಕ್ಷನ್ ಡ್ಯೂಟಿಗೆ ಹೋಗಿದ್ದಾರ’ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ನಾಲ್ಕು ದಿನ ಆಯ್ತು ಯಾರೂ ಸಿಗವಲ್ರು
‘ತಹಸೀಲ್ದಾರ್ ಆಫೀಸ್‌ಗೆ ಹೋಗಿನ್ರಿ. ಸಾಹೇಬ್ರನ್ ಚುನಾವಣೆ ಡ್ಯೂಟಿಗೆ ಹಾಕ್ಯಾರ, ಹಿಂಗಾಗಿ ಡಿಸಿ ಕಚೇರ‌್ಯಾಗ ಅದಾರ ಅಂದ್ರು, ಇಲ್ಲಿ ಬಂದು ನೋಡಿದ್ರ ಎಲ್ಲಿ ಅಂತ ಹುಡಕೋದು ತಿಳಿವಲ್ತು, ಮಾತು ಎತ್ತಿದರ ಇಲೆಕ್ಷನ್ ಅಂತಾರ. ನಾಲ್ಕು ದಿವಸ ಆತು ಓಡಾಡಾಕತ್ತೇನ್ರೀ. ಹ್ಯಾಂಗ್ ಕೆಲಸ ಮಾಡ್ಕೋಬೇಕ ಅಂತ ತಿಳಿವಲ್ದು ಎಂದು 60 ವರ್ಷದ ಹನುಮವ್ವ ಬಿದರಕುಂದಿ ‘ವಿಜಯವಾಣಿ’ ಮುಂದೆ ಅಳಲು ತೋಡಿಕೊಂಡರು.

ಪ್ರಮಾಣಿಕರ ನೌಕರರಿಗೆ ನೋವು
ಸರ್ಕಾರಿ ಕಚೇರಿಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಕೆಲವು ನೌಕರರು ಚುನಾವಣೆ ಹೆಸರಿನಲ್ಲಿ ಆಗುತ್ತಿರುವ ಗೈರು ಹಾಜರಾತಿ, ನಿರ್ಲಕ್ಷೃ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬಿಸಿಲಿನ ತಾಪದ ನಡುವೆ ದೂರದಿಂದ ಬರುವ ಜನರಿಗೆ ಈ ರೀತಿ ಪೀಡಿಸುವುದನ್ನು ನೋಡಿದರೆ ನೋವುವಾಗುತ್ತದೆ. ಯಾರಿಗೆ ಹೇಳಬೇಕು, ಬಿಡಬೇಕು ತಿಳಿಯುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ನೌಕರರೊಬ್ಬರು ಬೇಸರ ವ್ಯಕ್ತಪಡಿಸಿದರು.

ಚುನಾವಣೆ ಹೆಸರಲ್ಲಿ ಕೆಲ ಸರ್ಕಾರಿ ಸಿಬ್ಬಂದಿ ಕಚೇರಿಯಿಂದ ಗೈರು ಉಳಿಯುತ್ತಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿರುವ ಜತೆಗೆ ಸರ್ಕಾರದ ಕಾರ್ಯ, ಯೋಜನೆಗಳಲ್ಲೂ ಹಿನ್ನಡೆ ಆಗುತ್ತಿರುವುದು ವಿಪರ್ಯಾಸದ ಸಂಗತಿ.

ಚುನಾವಣೆ ಕೆಲಸ, ಕಾರ್ಯಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ. ಚುನಾವಣೆ ಕಾರ್ಯ ಮುಗಿದ ಬಳಿಕ ಅವರು ಕೂಡ ಎಂದಿನಂತೆ ಸೇವೆಗೆ ಮರಳಲಿದ್ದಾರೆ. ನಿಯುಕ್ತಿಗೊಳ್ಳದಿದ್ದರೂ ಸಹ ಚುನಾವಣೆ ಹೆಸರಿನಲ್ಲಿ ಗೈರು ಉಳಿದಲ್ಲಿ ನಿರ್ದ್ಯಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೆ ವಿಡಿಯೋ ಸಂವಾದ, ತರಬೇತಿ, ಸಭೆ ನಡೆಸಿದ ವಿವರ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಸಾರ್ವಜನಿಕರಿಗೆ ಸಮಸ್ಯೆ ಮಾಡಿದಲ್ಲಿ ಕ್ರಮ ನಿಶ್ಚಿತ. ಕಚೇರಿಗೆ ಬರುವ ಜನರಿಗೆ ಸರಿಯಾಗಿ ಸ್ಪಂದಿಸಬೇಕು.

ಆರ್.ರಾಮಚಂದ್ರನ್ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣೆ ಅಧಿಕಾರಿ