ಮಾನವೀಯ ದೃಷ್ಟಿಕೋನದಿಂದ ನೀರು ಹರಿಸಲಿ

ಬಾಗಲಕೋಟೆ: ನೀರಿನ ಸಮಸ್ಯೆ ಪರಿಹರಿಸುವಲ್ಲಿ ಪರಸ್ಪರ ಬಾಂಧವ್ಯ, ಪ್ರೀತಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಮಾನವೀಯತೆ ದೃಷ್ಟಿಕೋನದಿಂದ ಸಿಎಂ ಕುಮಾರಸ್ವಾಮಿ ಆಲಮಟ್ಟಿಯಿಂದ ತೆಲಂಗಾಣಕ್ಕೆ ನೀರು ಹರಿಸಲು ಒಪ್ಪಿಗೆ ಸೂಚಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಕೂಡ ಖಾಲಿಯಾಗಿರುವ ಕೃಷ್ಣಾ ನದಿಗೆ ನೀರು ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಿನ ವಿಷಯದಲ್ಲಿ ರಾಜಕೀಯ ಮಾಡಬಾರದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎನ್ನುವ ಕಾರಣಕ್ಕೆ ನೀರು ಹರಿಸಲು ಹಿಂದೇಟು ಹಾಕುವ ಮಹರಾಷ್ಟ್ರ ಸರ್ಕಾರದ ನೀತಿ ಸರಿಯಲ್ಲ. ಬಿಜೆಪಿಯವರು ಈ ಬಗ್ಗೆ ಕಾಳಜಿ ವಹಿಸಬೇಕು. ಶೀಘ್ರ ಮಹಾರಾಷ್ಟ್ರ ಸರ್ಕಾರ ನೀರು ಬಿಡುವ ನಿರೀಕ್ಷೆ ಇದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಹರಿಸಿದಲ್ಲಿ ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದರು.

ಆಲಮಟ್ಟಿ ಜಲಾಶಯದಿಂದ ಕಲಬುರಗಿ, ರಾಯಚೂರು, ವಿಜಯಪುರ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗಿದೆ. ಆಂಧ್ರಪ್ರದೇಶ, ತೆಲಂಗಾಣಕ್ಕೆ ಮಾನವೀಯತೆ ಆಧಾರದ ಮೇಲೆ ನೀರು ಹರಿಸಿದ್ದೇವೆ. ಇದನ್ನೇ ಮಾನದಂಡವಾಗಿಟ್ಟುಕೊಂಡು ಮಹಾರಾಷ್ಟ್ರ ನೀರು ಹರಿಸಬೇಕು ಎಂದು ತಿಳಿಸಿದರು.

ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ
ಮುದ್ದೇಬಿಹಾಳ ಸಮೀಪ ನಡೆದ ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಪರಿಹಾರ ನೀಡವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪರಿಹಾರ ಘೋಷಣೆ ತಡವಾಗಲಿದೆ. ಸಿದ್ದರಾಮಯ್ಯ ಮತ್ತು ನಾನು ಮೃತರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಧನ ಸಹಾಯ ನೀಡುತ್ತೇವೆ ಎಂದು ಘೋಷಣೆ ಮಾಡಿದ ಅವರು, ಗಾಯಗೊಂಡು ಆಸ್ಪತ್ರೆಗಳಿಗೆ ದಾಖಲಾಗಿರುವ 27 ಜನರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದರು.

ಬರ ಪರಿಶೀಲನೆ ಸಭೆ ತೃಪ್ತಿ ತಂದಿಲ್ಲ
ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಬರ ಪರಿಶೀಲನೆ ಸಭೆ ತೃಪ್ತಿ ತಂದಿಲ್ಲ. ಅಧಿಕಾರಿಗಳು ಬರ ಪರಿಸ್ಥಿತಿ ಎದುರಿಸುವಲ್ಲಿ ಸರಿಯಾಗಿ ಸ್ಪಂದಿಸಿಲ್ಲ. ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದರೂ ಸದ್ಬಳಕೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂಬುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರಕ್ಕೆ ಪತ್ರ
ಕೇಂದ್ರ ಸರ್ಕಾರದ ಫಸಲ್ ಭಿಮಾ ಯೋಜನೆ ಸರಿ ದಾರಿಯಲ್ಲಿ ಸಾಗಿಲ್ಲ. ಎಲ್ಲಿ ಲೋಪದೋಷವಾಗಿದೆ ಎಂಬುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ನಿಜವಾದ ಫಲಾನುಭವಿಗಳಿಗೆ ವಿಮೆ ತಲುಪಲಿ ಎನ್ನುವುದು ನಮ್ಮ ಆಶಯವಾಗಿದೆ. ಬಾಗಲಕೋಟೆ ನಗರಕ್ಕೆ ನೀರು ಪೂರೈಸುವ ಹೆರಕಲ್ ಯೋಜನೆ ಬಿಟಿಡಿಎ ಸಿದ್ಧಪಡಿಸಿದ ಕ್ರಿಯಾಯೋಜನೆ ಸರಿಯಾಗಿಲ್ಲ. ವಾಟರ್ ಬೋಲ್ಡ್‌ಗೆ ಈ ಕಾಮಗಾರಿ ನೀಡಬೇಕಿತ್ತು. ಕೆಲವು ತಪ್ಪುಗಳಿಂದ ಇದು ವರೆಗೂ ನೀರು ಹರಿದಿಲ್ಲ. ತಪ್ಪಿತಸ್ಥರಿಗೆ ಶೋಕಾಸ್ ನೋಟಿಸ್ ನೀಡಲು ಸೂಚನೆ ನೀಡಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಕೃಷ್ಣಾ, ಘಟಪ್ರಭಾ ಒಡಲು ಬರಿದು
ಆಲಮಟ್ಟಿ ಮೂಲಕ ಕಳೆದ ವರ್ಷ ಹಿಂಗಾರು, ಮುಂಗಾರು ಬೆಳೆಗಳಿಗೂ ನೀರು ಹರಿಸಲಾಗಿದೆ. ವಾಣಿಜ್ಯ ಬೆಳೆಗಳಿಗೂ ಕೂಡ ಕೊಡಲಾಗಿದೆ. ಜಿಲ್ಲೆಯ ಕೃಷ್ಣಾ, ಘಟಪ್ರಭಾ ನದಿ ಒಡಲು ಬರಿದಾಗಿವೆ. ಇದು ಬೇಸರದ ಸಂಗತಿ ಎಂದರು.

ಬೆದರಿಸುವ ತಂತ್ರ
ಸರ್ಕಾರ ವಿಸರ್ಜನೆ ಒಳಿತು ಎಂಬ ಹೊರಟ್ಟಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಶಿವಾನಂದ ಪಾಟೀಲ, ಬಸವರಾಜ ಹೊರಟ್ಟಿ ಅವರು ಬೆದರಿಸುವ ಉದ್ದೇಶಕ್ಕಾಗಿ ಅಂತಹ ಹೇಳಿಕೆ ನೀಡಿದ್ದಾರೆ. ಸರ್ಕಾರ ಬೀಳಿಸುವ ಉದ್ದೇಶದಿಂದ ಹೇಳಿಕೆ ನೀಡಿಲ್ಲ ಎಂದು ಕಾಲೆಳೆದರು.