ದಿ.ಕೆ.ಎಸ್.ಪುಟ್ಟಣ್ಣಯ್ಯ ಕಂಚಿನ ಪುತ್ಥಳಿ ಲೋಕಾರ್ಪಣೆ

ಬಾಗಲಕೋಟೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹೋರಾಟಗಾರ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಕಂಚಿನ ಪುತ್ಥಳಿ ಲೋಕಾರ್ಪಣೆ, ರೈತರ ಬೃಹತ್ ಸಮಾವೇಶ ಫೆ..18ರಂದು ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ನಡೆಸಿದ ಎಲ್ಲ ಸರ್ಕಾರಗಳು ರೈತರ ಪರವಾಗಿ ನಿಲ್ಲುತ್ತಿಲ್ಲ. ರಾಜ್ಯದಲ್ಲಿ ಬರ ಆವರಿಸಿ ರೈತ ಸಮೂಹ ನಲುಗಿ ಹೋಗಿದೆ. ಅನ್ನದಾತರ ಆತ್ಮಹತ್ಯೆ ಪ್ರಕರಣಗಳು ಕೊನೆಯಾಗುತ್ತಿಲ್ಲ. ಈ ವೇಳೆ ರೈತರ ನೆರವಿಗೆ ಬರಬೇಕಾದವರು ಅಧಿಕಾರ, ಹಣದ ಆಸೆಗೆ ಕಿತ್ತಾಟ ನಡೆಸುತ್ತಿದ್ದಾರೆ. ಸಿಡಿ, ವಿಡಿಯೋ ರಾಜಕಾರಣ ಮಾಡುತ್ತಿದ್ದಾರೆ. ರೈತರ ಸಮಸ್ಯೆ ಆಲಿಸುತ್ತಿಲ್ಲ. ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತದ ಕಾರ್ಯಾಧ್ಯಕ್ಷ ಕೆ.ಶಾಂತಸ್ವಾಮಿಮಠ ದೂರಿದರು.

ಹೊಸ ಆರ್ಥಿಕ ನೀತಿ, ಮುಕ್ತ ಮಾರುಕಟ್ಟೆ ನೀತಿಗಳು ರೈತರನ್ನು ಅತಂತ್ರಗೊಳಿಸುತ್ತಿವೆ. ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಗೆ ಮೋಸವಾಗುತ್ತಿದೆ. ಬರದ ಹೊಡೆತಕ್ಕೆ ಗುಳೆ ಹೋಗುತ್ತಿದ್ದಾರೆ. ಸರ್ಕಾರದ ಸೌಲಭ್ಯಗಳು ರೈತರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡದೇ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹದಾಯಿ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅನ್ನದಾತರಿಗೆ ಶೂನ್ಯ ಕೊಡುಗೆ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೀಗೆ ತಮ್ಮ ನಿರ್ಲಕ್ಷೃ ಧೋರಣೆ ಮುಂದುವರಿಸಿದಲ್ಲಿ ಲೋಕಸಭೆ ಚುನಾವಣೆ ಬಳಿಕ ಶಾಸಕರು ಮತ್ತು ಸಂಸದರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರೈತ ಸಂಘದ ಮುಖಂಡರಾದ ಸಿದ್ದಪ್ಪ ತೆಗ್ಗಿ, ಬಸವರಾಜ ಮುತ್ತಗಿ, ಪುಂಡಲಿಕಪ್ಪ ಛಬ್ಬಿ, ಬಸವ್ವ ತುಪ್ಪ ಇತರರು ಇದ್ದರು.