ಎಸ್ಪಿ ಅಭಿನವ ಖರೆ ಮನವಿ

ಬಾಗಲಕೋಟೆ: ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಸಿಸಿ ಟಿವಿ ಕ್ಯಾಮರಾ ಅಳವಡಿಸಿಕೊಳ್ಳಿ. ಇದು ಸಾಧ್ಯವಾಗದಿದ್ದರೆ ಕಾವಲಿನ ಬಗ್ಗೆ ನಿಗಾ ಇಡಬೇಕು. ಆಗಂತುಕರು, ಅಪರಿಚಿತರ ಚಲನವಲನಗಳ ಬಗ್ಗೆ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ತಿಳಿಸಿದ್ದಾರೆ.

ಶುಕ್ರವಾರ ನವನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಧಾರ್ಮಿಕ ಸಂಸ್ಥೆಯ ಮುಖ್ಯಸ್ಥರು, ವಸತಿ ಗೃಹ, ಕಲ್ಯಾಣ ಮಂಟಪ ವ್ಯವಸ್ಥಾಪಕರ ಸಭೆಯಲ್ಲಿ ಮಾತನಾಡಿದರು.

ಸುರಕ್ಷಿತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು ಎಸ್ಪಿ, ವಸತಿ ಗೃಹಗಳಲ್ಲಿ ಯಾರೇ ಗ್ರಾಹಕರು ಬಂದರೂ ಗುರುತಿನ ಚೀಟಿ, ಅವರ ಮೊಬೈಲ್ ನಂಬರ್ ದಾಖಲಿಸಿಕೊಳ್ಳದೆ ಕೊಠಡಿಗಳನ್ನು ಕೊಡಬಾರದು ಎಂದು ತಾಕೀತು ಮಾಡಿದರು.

ಸಮಾಜದ ಸ್ವಾಸ್ಥ್ಯ ಕದಡುವ ದುಷ್ಕರ್ಮಿಗಳಿಗೆ ಧರ್ಮ, ಜಾತಿ ಯಾವುದೂ ಇಲ್ಲ. ಸಮಾಜದಲ್ಲಿ ಅಶಾಂತಿ ನಿರ್ಮಿಸುವುದೇ ಅವರ ದುಷ್ಟ ಉದ್ದೇಶ. ಅದನ್ನು ತಡೆಯಲು ಪೋಲೀಸರು ಸದಾ ಜಾಗೃತರಾಗಿರುತ್ತಾರೆ. ಅವರಿಗೆ ಸಂಪೂರ್ಣ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.

ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಸುರಕ್ಷೃತಾ ಕ್ರಮಗಳನ್ನು ಬಲಪಡಿಸಿಕೊಳ್ಳಬೇಕು. ಅಪರಿಚಿತರು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಿದರೆ ಮಫ್ತಿಯಲ್ಲಿ ಬರುವ ಖಾಕಿಪಡೆ ಅದನ್ನು ಪರಿಶೀಲಿಸುತ್ತಾರೆ. ಯಾವುದಕ್ಕೂ ಆತಂಕ ಬೇಡ, ನೀವು ನಮ್ಮೊಂದಿಗಿರಿ, ನಾವು ಎಲ್ಲ ಸಹಕಾರ ನೀಡುತ್ತೇವೆ ಎಂದು ಅವರು ಭರವಸೆ ನೀಡಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷೃ ಸಿ.ಎನ್.ದಾಸ ಸೇರಿದಂತೆ ಹೋಟೆಲ್ ಉದ್ಯಮ, ವಸತಿ ಗೃಹ, ಕಲ್ಯಾಣ ಮಂಟಪದ ವ್ಯವಸ್ಥಾಪಕರು, ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.