ಉತ್ತಮ ಭವಿಷ್ಯಕ್ಕಾಗಿ ಜೇನು ಉಳಿಸಿ

ಬಾಗಲಕೋಟೆ : ಇಲ್ಲಿನ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ವಿಶ್ವ ಜೇನು ದಿನಾಚರಣೆ ಪ್ರಯುಕ್ತ ಜೇನು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಮಂಗಳವಾರ ನಡೆಯಿತು.

ಕಾರ್ಯಕ್ರಮದಲ್ಲಿ ಡಾ.ಜೆ. ಬಿ.ಗೋಪಾಲಿ ಮಾತನಾಡಿ, ನಮ್ಮ ದೇಶದಲ್ಲಿ ಜೇನುಕೃಷಿಯ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ಆಧುನಿಕ ಜೇನು ಕೃಷಿಯ ಪಿತಾಮಹ ಎಂದೇ ಪರಿಗಣಿಸಲಾಗಿರುವ ಆಂಟೋನಿ ಜಾನ್ಸ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ದಿನವನ್ನು ವಿಶ್ವ ಜೇನು ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದರು.

ಜೇನು ಕೃಷಿಯಿಂದ ಜೇನು ತುಪ್ಪ ಸಿಗುವುದಲ್ಲದೆ, ಪರಾಗಸ್ಪರ್ಶ ಕ್ರಿಯೆಯಿಂದ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಬಹುದಾಗಿದೆ. ಅಲ್ಲದೆ, ವಿವಿಧ ಜೀವಿಗಳ ಸಂರಕ್ಷಣೆಯಲ್ಲಿ ಜೇನುಹುಳುಗಳ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ರೈತ ಬಾಂಧವರಲ್ಲಿ ವೈಜ್ಞಾನಿಕ ಅರಿವು ಮೂಡಿಸಲು, ಪರಿಸರ ಕಾಪಾಡಲು ಮತ್ತು ಆಹಾರ ಉತ್ಪಾದನೆ ಹೆಚ್ಚಿಸಲು ಈ ದಿನದ ಆಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವಿವಿ ವಿಸ್ತರಣಾ ಮುಂದಾಳು ಡಾ. ಶಶಿಕುಮಾರ್ ಮಾತನಾಡಿ, ನಮ್ಮ ದೇಶದಲ್ಲಿ ಜೇನು ಕೃಷಿಗೆ ಅಂದಾಜು 8000 ವರ್ಷಗಳ ಇತಿಹಾಸವಿದೆ. ಜೇನು ಕೃಷಿ ಹಂತ ಹಂತವಾಗಿ ವೈಜ್ಞಾನಿಕವಾಗಿ ಬೆಳೆಯುತ್ತಾ ಬಂದಿದೆ. ಜೇನಿನ ಉಪಯೋಗಗಳ ಬಗ್ಗೆ, ಮುಖ್ಯವಾಗಿ ವೈದ್ಯಕೀಯದಲ್ಲಿ ಜೇನು ತುಪ್ಪದ ಬಳಕೆ ಬಗ್ಗೆ ಬೆಳಕು ಚೆಲ್ಲುವ ಅಂಶಗಳಿವೆ. ನಾವೆಲ್ಲ ಅದನ್ನು ಅರ್ಥ ಮಾಡಿಕೊಳ್ಳಬೇಕು. ಆಹಾರ ಭದ್ರತೆ ಮತ್ತು ಪೋಷಕಾಂಶಗಳ ಭದ್ರತೆಯಂತೆ ಈಗ ಆರ್ಥಿಕ ಭದ್ರತೆಯ ಪರಿಕಲ್ಪನೆಯಿರುವ ಈ ಸನ್ನಿವೇಶದಲ್ಲಿ ಕೃಷಿ ಮತ್ತು ತೋಟಗಾರಿಕೆಯಲ್ಲಿ ಜೇನು ಕೃಷಿ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ರೈತರಿಗೆ ಜೇನು ಕೃಷಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ಕೀಟಶಾಸ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶಲು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಡಾ.ಸಂಜೀವರೆಡ್ಡಿ, ಡಾ.ರಾಮನಗೌಡ, ಡಾ.ವಸೀಮ್ ಎಂ.ಎ., ಶ್ರೀಪಾದ ಹಾಗೂ ಡಾ.ಕಿರಣಕುಮಾರ್ ಕೆ.ಸಿ.ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *