ನವನಗರ ಯೂನಿಟ್-2ಗೆ ಗ್ರಹಣ!

ಅಶೋಕ ಶೆಟ್ಟರ
ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರು ಬಾತ ನಗರದ ಸಂತ್ರಸ್ತರ ಬದುಕು ಕಟ್ಟಿಕೊಡಲು ತಲೆ ಎತ್ತಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಿ ಸರ್ಕಾರದ ಬೊಕ್ಕಸಕ್ಕೆ ಬಿಳಿಯಾನೆ ಆಗುತ್ತಿದೆ. ಬಿಟಿಡಿಎಗೆ ವಹಿಸಿದ ಕೆಲಸ ನಿಗದಿತ ಸಮಯಕ್ಕೆ ಮುಗಿಸಿದ ಉದಾಹರಣೆ ಅಪರೂಪ. ಅದು ಬಾಗಲಕೋಟೆ ಶಾಶ್ವತ ಕುಡಿವ ನೀರಿನ ಯೋಜನೆ ಆಗಿರಬಹುದು, ನವನಗರ ಯುನಿಟ್-2ನಲ್ಲಿ ಮೂಲ ಸೌಲಭ್ಯ ಕಲ್ಪಿಸುವುದು, ಯಾವುದೇ ಕೆಲಸ ತೆಗೆದುಕೊಂಡರೂ ಸರ್ಕಾರದ ಬೊಕ್ಕಸದಿಂದ ಕೋಟಿ ಕೋಟಿ ರೂ. ಖರ್ಚು ಆಗಿದ್ದೇ ಬಂತು. ಆದರೆ, ಕಾಮಗಾರಿಗಳಿಗೆ ಮುಕ್ತಿ ಸಿಗಲಿಲ್ಲ.

ಯುನಿಟ್-2ಗೆ 2013ರಲ್ಲಿ ಅಂದಿನ ಬಿಜೆಪಿ ಸರ್ಕಾರದ ಸಿಎಂ ಜಗದೀಶ ಶೆಟ್ಟರ ಅವರು 500 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಲಭ್ಯಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಹೋದರು.

ನಂತರ ಬಂದ ಸಿದ್ದರಾಮಯ್ಯ ನೇತತ್ವದ ಸರ್ಕಾರದಲ್ಲಿ ಒಂದು ವರ್ಷ ಸ್ತಬ್ಧಗೊಂಡಿತು. 2014ರಲ್ಲಿ ಅದೇ ಕಾಮಗಾರಿಗೆ ಮತ್ತೆ ಅಡಿಗಲ್ಲು ನೆರವೇರಿಸಿದರು. ಅಲ್ಲಿಂದ ಈವರೆಗೂ ಕಾಮಗಾರಿಗಳು ಪೂರ್ಣಗೊಂಡಿಲ್ಲ.

ಯಾವ್ಯಾವ ಕಾಮಗಾರಿಗಳು ?
ತೋಟಗಾರಿಕೆ ವಿಶ್ವವಿದ್ಯಾಲಯದ ಸಮೀಪದಲ್ಲಿರುವ ಎರಡು ಸಾವಿರ ಎಕರೆ ಪ್ರದೇಶದಲ್ಲಿ ಮೂಲ ಸೌಲಭ್ಯ ಕಾಮಗಾರಿಗಳು ಆರಂಭವಾಗಿವೆ. ಮುಖ್ಯವಾಗಿ ರಸ್ತೆ, ಚರಂಡಿ, ಒಳಚರಂಡಿ, ಕುಡಿವ ನೀರು, ವಿದ್ಯುತ್ ಸೌಕರ್ಯ ಕಾಮಗಾರಿಗಳು.

ಐದು ವರ್ಷಗಳಲ್ಲಿ ಚರಂಡಿ, ಒಳಚರಂಡಿ ಕಾಮಗಾರಿ ಮುಕ್ತಾಯವಾಗಿವೆ. ಹೈಟೆಕ್ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಕಳೆದ ನಾಲ್ಕೆದು ತಿಂಗಳಿಂದ ರಸ್ತೆ ಕಾಮಗಾರಿ ನಡೆದಿವೆ. ಆದರೆ, ಮುಖ್ಯವಾಗಿ ಬೇಕಾಗಿರುವ ಕುಡಿವ ನೀರು ಮತ್ತು ವಿದ್ಯುತ್ ಸೌಲಭ್ಯ ಇಲ್ಲದೆ ಸಂತ್ರಸ್ತರು ಪರದಾಡುತ್ತಿದ್ದಾರೆ.

ಭರದಿಂದ ಸಾಗಿದ ಮನೆಗಳ ನಿರ್ಮಾಣ ಕೆಲಸ
ಯುನಿಟ್-2 ಸಂತ್ರಸ್ತರು ಕಾಡಿ ಬೇಡಿ, ಬಿಟಿಡಿಎ ಕಚೇರಿಗೆ ನಿತ್ಯ ಅಲೆದಾಡಿದ ಬಳಿಕ ಫಲಾನುಭವಿಗಳಿಗೆ ನಿವೇಶನಗಳ ಹಕ್ಕುಪತ್ರ ವಿತರಿಸಲಾಗಿದೆ. ಇನ್ನೇನು ಅಲ್ಲಿ ನೀರು, ವಿದ್ಯುತ್ ಬರುತ್ತದೆ. ಸೂರು ಕಟ್ಟಿಕೊಂಡು ನೆಮ್ಮದಿಯಿಂದ ಇರಬಹುದು ಎಂದುಕೊಂಡಿದ್ದರು. ಅನೇಕ ಫಲಾನುಭವಿಗಳು ಮನೆಗಳನ್ನು ಕಟ್ಟಿಸಲು ಆರಂಭಿಸಿದ್ದರು. ಸದ್ಯ ಅಲ್ಲಿ ಇನ್ನೂರಕ್ಕೂ ಅಕ ಮನೆಗಳು ನಿರ್ಮಾಣವಾಗಿ, ಅನೇಕರು ವಾಸವಾಗಿದ್ದಾರೆ. ಈಗ ಒಂದು ಸಾವಿರಕ್ಕೂ ಅಕ ಫಲಾನುಭವಿಗಳು ಮನೆ ಕಟ್ಟಿಸಿಕೊಳ್ಳಲು ಬಿಟಿಡಿಎಯಿಂದ ಪರವಾನಗಿ ಪಡೆದುಕೊಂಡಿದ್ದಾರೆ.

ಒಂದು ಟ್ಯಾಂಕರ್‌ಗೆ 500 ರೂ.
ಕೆಲವರು ಸ್ವಂತ ಕೊಳವೆಬಾವಿ ಕೊರೆಸಿದ್ದು, ತಾತ್ಕಾಲಿಕ ವಿದ್ಯುತ್ ಪಡೆದು ಮನೆ ಕಟ್ಟಿಸುತ್ತಿದ್ದಾರೆ. ಉಳಿದವರು ಒಂದು ಟ್ಯಾಂಕರ್‌ಗೆ 500 ತೆತ್ತು ನೀರು ಖರೀದಿಸಿ ಕಟ್ಟಡಗಳಿಗೆ ಬಳಕೆ ಮಾಡಬೇಕಿದೆ. ಒಂದು ಕಡೆಗೆ ದುಬಾರಿ ಮರಳು, ಸಿಮೆಂಟ್, ಖಡಿ ಮತ್ತೊಂದು ಕಡೆಗೆ ಟ್ಯಾಂಕರ್ ನೀರು ಖರೀದಿಯಿಂದ ಸಂತ್ರಸ್ತರು ಮನೆ ಕಟ್ಟಿಕೊಳ್ಳಲು ಹೈರಾಣಾಗಿದ್ದಾರೆ. ಇತ್ತೀಚೆಗೆ ಅಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಹಾಗೂ ವಾಸವಿದ್ದವರಿಗೆ ತಾತ್ಕಾಲಿಕ ವಿದ್ಯುತ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ, ಪ್ರತಿ ತಿಂಗಳು 1500 ರಿಂದ 2000 ರೂ. ಬಿಲ್ ಬರುತ್ತಿದ್ದು, ಬಡ ಕುಟುಂಬಗಳಿಗೆ ಹೊರೆ ಆಗುತ್ತಿದೆ ಎಂದು ಸಂತ್ರಸ್ತರು ಅಲವತ್ತುಕೊಳ್ಳುತ್ತಿದ್ದಾರೆ.

ವಿದ್ಯುತ್ ಬರೋದು ಯಾವಾಗ ?
ಯುನಿಟ್-2ರಲ್ಲಿ ಸದ್ಯ 110 ಕೆವಿ ಸಾಮಥ್ಯದ ಎರಡು ಸಬ್‌ಸ್ಟೇಷನ್‌ಗಳನ್ನು ನಿರ್ಮಾಣ ಮಾಡಬೇಕಿದೆ. ಈ ಬಗ್ಗೆ ಎರಡು ಸಲ ಟೆಂಡರ್ ಕರೆದಿದ್ದರೂ ಯಾರೂ ಮುಂದೆ ಬರಲಿಲ್ಲವಂತೆ. ಇದೀಗ ಮತ್ತೊಮ್ಮೆ ಟೆಂಡರ್ ಕರೆದಿದ್ದು, ಆ ಪ್ರಕ್ರಿಯೆ ಮುಗಿದ ಮೇಲೆ ಕಾಮಗಾರಿ ಆರಂಭಗೊಳ್ಳಬೇಕಿದೆ. ಇದಕ್ಕೆ ಸಿಎಂ ನೇತೃತ್ವದ ಕೃಷ್ಣಾ ಜಲಭಾಗ್ಯ ನಿಗಮದ ಅಧ್ಯಕ್ಷೆರಾಗಿರುವ ಸಿಎಂ ನೇತೃತ್ವದಲ್ಲಿ ಉನ್ನತಾಕಾರ ಸಮಿತಿ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಗಬೇಕಂತೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಭೆಯ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಹೀಗಾಗಿ ಇನ್ನೂ ಒಂದು ವರ್ಷ ಸಬ್‌ಸ್ಟೇಷನ್ ಕಾಮಗಾರಿ ಮುಗಿಯುವುದು ಅನುಮಾನ. ಅಲ್ಲಿಯವರೆಗೂ ವಾಸವಿರುವ ಸಂತ್ರಸ್ತರು ತಾತ್ಕಾಲಿಕ ವಿದ್ಯುತ್ ಸಂಪರ್ಕದಲ್ಲಿರಬೇಕು. ಇಲ್ಲವೆ, ಕತ್ತಲಲ್ಲಿ ಬದುಕು ಸಾಗಿಸುವ ಅನಿವಾರ್ಯತೆ ಎದುರಾಗಿದೆ.

ಕಾಂಗ್ರೆಸ್ ಸರ್ಕಾರದ ಅವಯಲ್ಲಿ ನಾಲ್ಕು ವರ್ಷಗಳ ಕಾಲ ಬಿಟಿಡಿಎ ಕಾಂಗ್ರೆಸ್ ವಶದಲ್ಲಿತ್ತು. ಅಂದಿನ ಕ್ಷೇತ್ರದ ಶಾಸಕ ಎಚ್.ವೈ. ಮೇಟಿ ಅವರ ಆಪ್ತ ಎ.ಡಿ. ಮೊಕಾಶಿ ಅಧ್ಯಕ್ಷರಾಗಿದ್ದರು. ಅವರ ಅವ ಮುಕ್ತಾಯವಾದರೂ ಕಾಮಗಾರಿಗಳು ಪೂರ್ಣಗೊಳ್ಳಲಿಲ್ಲ. ಇದೀಗ ದೋಸ್ತಿ ಸರ್ಕಾರದಲ್ಲಿ ಮಾಜಿ ಸಚಿವ ಎಚ್.ವೆ. ಮೇಟಿ ಬಿಟಿಡಿಎ ಅಧ್ಯಕ್ಷ ಪಟ್ಟ ಪಡೆದಿದ್ದಾರೆ. ಇವರಾದರೂ ಕಾಮಗಾರಿಗಳಿಗೆ ವೇಗ ನೀಡಿ ಸಂತ್ರಸ್ತರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಯಶಸ್ವಿ ಆಗುತ್ತಾರಾ ನೋಡೋಣ. ಬೀದಿ ದೀಪಗಳ ವ್ಯವಸ್ಥೆಯೂ ಇಲ್ಲದ್ದರಿಂದ ಕಳ್ಳರ ಕಾಟವೂ ಹೆಚ್ಚಾಗಿದೆ. ರಾತ್ರಿ ಪಹರೆಗೆ ಪೊಲೀಸರನ್ನು ನಿಯೋಜಿಸಬೇಕು ಎಂದು ಅಲ್ಲಿ ವಾಸವಿರುವ ಫಲಾನುಭವಿ ಎಂ.ಎಂ. ಹೊನವಾಡ ಹೇಳುತ್ತಾರೆ.

ನಮ್ಮ ಅಜ್ಜ,ಮುತ್ತಜ್ಜರು ಬಾಳಿ ಬದುಕಿನ ಆಸ್ತಿ ಕಳೆದುಕೊಂಡು ಬಂದಿದ್ದೇವೆ. ನಮಗೆ ಗೌರವಯುತ ಬದುಕು ಕಟ್ಟಿಕೊಡುವ ಭರವಸೆ ನೀಡಿದ್ದರು. ಹಕ್ಕುಪತ್ರ ಕೊಟ್ಟಿದ್ದಾರೆ. ಆದರೆ, ಮೂಲ ಸೌಕರ್ಯ ಸಿಕ್ಕಿಲ್ಲ. ಮೊದಲು ಈ ಬಗ್ಗೆ ಗಮನ ಹರಿಸಬೇಕು. ನಮ್ಮ ತ್ಯಾಗಕ್ಕೆ ತಕ್ಕ ಗೌರವ ಸಿಗಬೇಕು.
ಪರಶುರಾಮ ನಾರಾಯಣಿ, ಸೆಕ್ಟರ್ ನಂ. 71ರ ನಿವಾಸಿ.

ಯುನಿಟ್-2ನಲ್ಲಿ ಈಗಾಗಲೆ ನೆಲದಡಿ ಕೇಬಲ್, ಟಿಸಿ, ವಿದ್ಯುತ್ ಕಂಬ ಅಳವಡಿಕೆ ಮುಗಿದಿದೆ. ಸಬ್ ಸ್ಟೇಷನ್‌ಗಳು ಆಗಬೇಕು. ಈಗ ಟೆಂಡರ್ ಅನುಮೋದನೆ ಹಂತದಲ್ಲಿದೆ. ಒಂದು ವರ್ಷ ಆರು ತಿಂಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ. ಅಲ್ಲಿವರೆಗೂ ಮನೆಗಳಿಗೆ ಯುನಿಟ್-1ರಿಂದ ತಾತ್ಕಾಲಿಕ ವಿದ್ಯುತ್ ಪೂರೈಕೆಗೆ ಟೆಂಡರ್ ಕರೆಯಲಾಗಿದೆ. ಒಂದು ತಿಂಗಳಲ್ಲಿ ತಾತ್ಕಾಲಿಕ ವಿದ್ಯುತ್ ಪೂರೈಕೆ ಆಗಲಿದೆ.
ಮೋಹನ ಗದಗ ಇಇ, ಬಿಟಿಡಿಎ, ವಿದ್ಯುತ್ ವಿಭಾಗ

ಬಾಗಲಕೋಟೆ ಯುನಿಟ್-2ಗೆ ಮೂಲ ಸೌಲಭ್ಯ ಕಲ್ಪಿಸಲು ನಾನು ಶಾಸಕರಾಗಿದ್ದಾಗ ಕಾಮಗಾರಿಗೆ ಚಾಲನೆ ನೀಡಿದ್ದೆವು. ಆರು ವರ್ಷ ಇಲ್ಲಿ ಸರಿಯಾಗಿ ಕೆಲಸ ಆಗಿಲ್ಲ. ಇದೀಗ ಮತ್ತೆ ಶಾಸಕನಾದ ಬಳಿಕ ಅಲ್ಲಿ ರಸ್ತೆ ಕಾಮಗಾರಿ ಮುಗಿಯುವಂತೆ ನೋಡಿಕೊಂಡೆ. ಸದ್ಯ ತಾತ್ಕಾಲಿಕ ವಿದ್ಯುತ್ ಪೂರೈಕೆಗೆ ಕ್ರಮ ತೆಗೆದುಕೊಂಡಿದ್ದೇನೆ. ಬಿಟಿಡಿಎನಲ್ಲಿ ವೇಗವಾಗಿ ಕೆಲಸಗಳು ಆಗಬೇಕು.
ವೀರಣ್ಣ ಚರಂತಿಮಠ ಶಾಸಕರು, ಬಾಗಲಕೋಟೆ.